ವೀರಾಜಪೇಟೆ : ಎಫ್‌ಡಿ ಖಾತೆಯ ಹಣವನ್ನು ನೀಡಲು ವಿಳಂಬ ಮಾಡಿದ ಸಹಕಾರ ಸಂಘಕ್ಕೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ೨೦ ಸಾವಿರ ರೂ ದಂಡ ವಿಧಿಸಿದೆ.
ಸೋಮವಾರಪೇಟೆ ತಾಲ್ಲೂಕಿನ ನೆಲ್ಲಿಹುದಿಕೇರಿ ಗ್ರಾಮದ ನಿವಾಸಿ ಎಂ.ಡಿ. ಕಾರಿಯಪ್ಪ ಅವರು ೨೦೨೩ನೇ ಸಾಲಿನಲ್ಲಿ ವಿರಾಜಪೇಟೆಯಲ್ಲಿರುವ ವಿವಿಧೋದ್ದೇಶ ಗ್ರಾಮೀಣ ಮಹಿಳಾ ಸಹಕಾರ ಸಂಘದಲ್ಲಿ ರೂ.೧೦ ಲಕ್ಷ ರೂಪಾಯಿಗಳಿಗೆ ಒಂದು ವರ್ಷಕ್ಕೆ ಶೇ.೯ ಬಡ್ಡಿಯನ್ನು ಒಳಗೊಂಡಿರುವ ನಿಶ್ಚಿತ ಠೇವಣಿ (ಎಫ್.ಡಿ) ಖಾತೆಯನ್ನು ಮಾಡಿದ್ದರು. ಈ ಖಾತೆಯು ೨೦೨೪ನೇ ಇಸವಿಯಲ್ಲಿ ಮುಕ್ತಾಯಗೊಂಡಿದ್ದು, ತಮ್ಮ ವೈಯಕ್ತಿಕ ಕಾರಣಕ್ಕಾಗಿ ಹಣ ತುರ್ತಾಗಿ ಅವಶ್ಯಕವಾಗಿದುದ್ದರಿಂದ ಎಫ್.ಡಿ. ಖಾತೆಯಲ್ಲಿರುವ ಅಸಲು ಮೊತ್ತವನ್ನು ಬಡ್ಡಿ ಸಹಿತ ತನಗೆ ಪಾವತಿಸಬೇಕೆಂದು ಸಂಘಕ್ಕೆ ಕೋರಿದ್ದರು. ಆದರೆ ಅಧಿಕಾರಿಗಳು ಬೇರೆ ಬೇರೆ ಕಾರಣ ನೀಡಿ ವಿಳಂಬ ಮಾಡಿದ್ದರು.
ಈ ಬಗ್ಗೆ ಕೊಡಗು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರು ದಾಖಲಿಸಿದ್ದರು. ಪ್ರಕರಣವನ್ನು ಆಯೋಗವು ದಾಖಲು ಮಾಡಿಕೊಂಡು ದೂರುದಾರರ ವಾದ ವಿವಾದಗಳನ್ನು ಚರ್ಚಿಸಿ, ದಾಖಲಾತಿಗಳನ್ನು ಪರಿಶೀಲಿಸಿತು. ಕೊಡಗು ಜಿಲ್ಲಾ ಗ್ರಾಹಕರ ಆಯೋಗದ ಪ್ರಭಾರ ಅಧ್ಯಕ್ಷ ಡಾ. ಸಿ.ರೇಣುಕಾಂಬ ಹಾಗೂ ಸದಸ್ಯರಾದ ಗೌರಮ್ಮಣ್ಣಿ ಅವರುಗಳು ಈ ದೂರನ್ನು ಪುರಸ್ಕರಿಸಿ ಪ್ರತಿವಾದಿಯು ಸಹಕಾರ ಕಾಯಿದೆಯನ್ನು ಉಲ್ಲಂಘಿಸಿರುತ್ತಾರೆಂದು ಅಭಿಪ್ರಾಯಪಟ್ಟಿದೆ. ಈ ಸಂಬಂಧ ಎಫ್.ಡಿ.ಖಾತೆಯಲ್ಲಿರುವ ಅಸಲು ಮತ್ತು ಬಡ್ಡಿ ಸೇರಿಸಿ ಒಟ್ಟು ರೂ.೧೦,೯೦,೦೦೦ ರೂಪಾಯಿ ಹಾಗೂ ಮಾನಸಿಕ ವೇದನೆಗೆ ಪರಿಹಾರವಾಗಿ ರೂ.೧೦,೦೦೦, ಜೊತೆಗೆ ವ್ಯಾಜ್ಯದ ಖರ್ಚುವೆಚ್ಚಗಳಿಗೆ ರೂ.೧೦,೦೦೦ ಪಾವತಿಸಬೇಕೆಂದು ಆದೇಶಿಸಿದೆ ಎಂದು ಆಯೋಗದ ಸಹಾಯಕ ರಿಜಿಸ್ಟ್ರಾರ್ ಹಾಗೂ ಸಹಾಯಕ ಆಡಳಿತಾಧಿಕಾರಿ ತಿಳಿಸಿದ್ದಾರೆ.
