ಕೊಡವ ಮುಸ್ಲಿಮರ ಮಾತೃಭಾಷೆಯ ನಿಘಂಟು ಹೊರತರಲು ನಿರ್ಧಾರ

Share this post :

ಪೊನ್ನಂಪೇಟೆ: ಕೊಡಗಿನ ಮೂಲ ನಿವಾಸಿ ಸಮುದಾಯಗಳಲ್ಲಿ ಒಂದಾಗಿರುವ ಕೊಡವ ಮುಸ್ಲಿಮರ ಮಾತೃಭಾಷೆಯ ಎಲ್ಲಾ ಪದಗಳನ್ನು ಸಂಗ್ರಹಿಸಿ ನಿಘಂಟನ್ನು (ಶಬ್ದ ಭಂಡಾರ) ಹೊರತರಲು ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆಎಂಎ) ನಿರ್ಧರಿಸಿದೆ. ಕೆಎಂಎ ಅಧ್ಯಕ್ಷರಾದ ದುದ್ದಿಯಂಡ ಹೆಚ್. ಸೂಫಿ ಹಾಜಿ ಅವರ ಅಧ್ಯಕ್ಷತೆಯಲ್ಲಿ ವಿರಾಜಪೇಟೆಯಲ್ಲಿರುವ ಸಂಸ್ಥೆಯ ಪ್ರಧಾನ ಕಚೇರಿ ಸಭಾಂಗಣದಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದೆ. ಕೊಡವ ಮುಸ್ಲಿಮರ ಮಾತೃಭಾಷೆಯಾದ ‘ಪಯಕ’ದ ಬೆಳವಣಿಗೆ ಮತ್ತು ದಾಖಲೀಕರಣದ ನಿಟ್ಟಿನಲ್ಲಿ ಇದೊಂದು ಮಹತ್ವದ ಯೋಜನೆಯಾಗಿದ್ದು, ಇದಕ್ಕಾಗಿ ಸಮುದಾಯದ ಸಹಕಾರ ನಿರೀಕ್ಷಿಸಲಾಗಿದೆ ಎಂದು ಸೂಫಿ ಹಾಜಿ ಹೇಳಿದರು.

ಉದ್ದೇಶಿತ ಈ ನಿಘಂಟಿನಲ್ಲಿ ‘ಪಯಕ’ ದ ಸಮಗ್ರವಾದ ಪದಗಳನ್ನು ಸೇರ್ಪಡೆಗೊಳಿಸಲು ಶ್ರಮಿಸಲಾಗುವುದು. ಸಮುದಾಯದ ಪೂರ್ವಜರು ಬಳಸುತ್ತಿದ್ದ ಮತ್ತು ಪ್ರಸ್ತುತ ಬಳಕೆಯಲ್ಲಿ ಇಲ್ಲದ ಪದಗಳನ್ನು ಹಿರಿಯರಿಂದ ಸಂಗ್ರಹಿಸಲಾಗುವುದು. ಇದೂ ಅಲ್ಲದೆ ಆಸಕ್ತರಿಂದಲೂ ಪದಗಳನ್ನು ಆಹ್ವಾನಿಸಲಾಗುವುದು. ಇಂದು ಬಳಕೆಯಲ್ಲಿ ಇಲ್ಲದ ಅತ್ಯಂತ ಹೆಚ್ಚು ಪದಗಳನ್ನು ಕಳುಹಿಸಿಕೊಟ್ಟವರಿಗೆ ಸಂಸ್ಥೆಯಿಂದ ಬಹುಮಾನ ನೀಡಲಾಗುವುದು ಎಂದು ಸೂಫಿ ಹಾಜಿಯವರು ತಿಳಿಸಿದ್ದಾರೆ.

ಕೊಡವ ಮುಸ್ಲಿಮರ ಮಾತೃಭಾಷೆಯ ಉದ್ದೇಶಿತ ಈ ನಿಘಂಟನ್ನು ಪುಸ್ತಕ ರೂಪದಲ್ಲಿ ಹೊರತರುವ ಜೊತೆಗೆ ಅದನ್ನು ಡಿಜಿಟಲೀಕರಿಸಲಾಗುವುದು. ಅಲ್ಲದೆ, ನಿಘಂಟಿನ ಆ್ಯಪ್ ಒಂದನ್ನು ನಿರ್ಮಿಸಿ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಉಚಿತವಾಗಿ ನೀಡುವ ಯೋಜನೆಯೊಂದನ್ನು ಹಮ್ಮಿಕೊಳ್ಳುವ ಗುರಿಯನ್ನೂ ಹೊಂದಲಾಗಿದೆ. ಆದ್ದರಿಂದ ಆಸಕ್ತರು
ಪಯಕದ ಕುರಿತು ತಮಗೆ ಗೊತ್ತಿರುವ ಪದಗಳನ್ನು ಕನ್ನಡ ಅನುವಾದ ಮತ್ತು ವಿವಿಧ ಸಾಂಧರ್ಬಿಕ ಅರ್ಥಗಳೊಂದಿಗೆ ವಾಟ್ಸಪ್ ಸಂಖ್ಯೆಯಾದ 9886060342ಕ್ಕೆ ಕಳಿಸಿಕೊಡಬಹುದು. ಅಥವಾ ಲಿಖಿತವಾಗಿ ಕಳಿಸುವವರು ‘ಅಧ್ಯಕ್ಷರು, ಕೊಡವ ಮುಸ್ಲಿಂ ಅಸೋಸಿಯೇಷನ್ (ರಿ.), ಪ್ರಧಾನ ಕಚೇರಿ, ಡಿ.ಹೆಚ್. ಎಸ್. ಕಟ್ಟಡ, ಮುಖ್ಯ ರಸ್ತೆ ವಿರಾಜಪೇಟೆ, ಕೊಡಗು ಜಿಲ್ಲೆ-571218’ ಈ ವಿಳಾಸಕ್ಕೆ ಮುಂದಿನ ಫೆಬ್ರವರಿ 28ರೊಳಗಾಗಿ ಕಳುಹಿಸಿಕೊಡುವಂತೆ ಸೂಫಿ ಹಾಜಿಯವರು ಮನವಿ ಮಾಡಿದ್ದಾರೆ.

ಕೊಡವ ಮುಸ್ಲಿಂ ಅಸೋಸಿಯೇಷನ್ ಮುಂದಿನ ವರ್ಷ ಸುವರ್ಣ ಮಹೋತ್ಸವದ ಹೊಸ್ತಿಲಿಗೆ ಪ್ರವೇಶಿಸುವ ಕಾರಣ ಸಂಸ್ಥೆಯ ಬೈಲಾಗೆ ಸಮಗ್ರವಾದ ತಿದ್ದುಪಡಿ ತರಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ ಕಾರ್ಯಕಾರಿ ಸಮಿತಿ ಅನುಮತಿ ನೀಡಿದೆ. ಮುಂದಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಉದ್ದೇಶಿತ ತಿದ್ದುಪಡಿ ಬೈಲಾದ ಕರಡು ಮಂಡಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಕಾರ್ಯಕಾರಿ ಸಮಿತಿ ಸಭೆಯ ಒಪ್ಪಿಗೆಯ ನಂತರ ಪ್ರಸ್ತುತ ಸಾಲಿನಲ್ಲಿ ಸಂಸ್ಥೆಯ ಸರ್ವ ಸದಸ್ಯರ ವಿಶೇಷ ಮಹಾಸಭೆ ಕರೆದು ತಿದ್ದುಪಡಿಗೊಂಡ ಬೈಲಾಗೆ ಅಂಗೀಕಾರ ಪಡೆಯಲಾಗುವುದು ಎಂದು ತಿಳಿಸಿದ ಸೂಫಿ ಹಾಜಿ ಅವರು, ಮಾತೃಭಾಷೆಯ ನಿಘಂಟು ಮತ್ತು ಬೈಲಾ ತಿದ್ದುಪಡಿಯ ಹೊಣೆಗಾರಿಕೆಯನ್ನು ಸಭೆಯ ತೀರ್ಮಾನದಂತೆ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಈತಲತಂಡ ರಫೀಕ್ ತೂಚಮಕೇರಿಯವರಿಗೆ ವಹಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕೊಡವ ಮುಸ್ಲಿಮರನ್ನು ಸೇರಿದಂತೆ ಕೊಡಗಿನ ಜಮ್ಮಾ ಹಿಡುವಳಿದಾರರನ್ನು ದಶಕಗಳಿಂದ ಕಾಡುತ್ತಿದ್ದ ಜಿಲ್ಲೆಯ ಜಮ್ಮಾಬಾಣೆ ಭೂಮಿಗೆ ಸಂಬಂಧಿಸಿದ ಕರ್ನಾಟಕ ಕಂದಾಯ ಕಾನೂನು 1964ರ ತಿದ್ದುಪಡಿ ವಿಧೇಯಕವು ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿ ಅಂಗೀಕಾರಗೊಂಡಿರುವುದರಿಂದ ಜಮ್ಮಾ ಹಿಡುವಳಿದಾರರ ಬಹುಕಾಲದ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆತಂತಾಗುತ್ತದೆ ಎಂದು ಸಭೆ ಹರ್ಷ ವ್ಯಕ್ತಪಡಿಸಿದ್ದು, ಇದಕ್ಕೆ ಕಾರಣರಾದ ಜಿಲ್ಲೆಯ ಇಬ್ಬರು ಶಾಸಕರಿಗೆ ಮತ್ತು ಕಂದಾಯ ಸಚಿವರಿಗೆ ಧನ್ಯವಾದಗಳು ಸಲ್ಲಿಸಿತು. ಅಲ್ಲದೆ ಈ ತಿದ್ದುಪಡಿಗೊಂಡ ಕಾನೂನು ಯಾವುದೇ ಅಡ್ಡಿ ಆತಂಕಗಳಿಲ್ಲದೆ ಶೀಘ್ರದಲ್ಲೇ ಜಾರಿಯಾಗಿ ಜನರ ಬಹುಕಾಲದ ಬೇಡಿಕೆ ಈಡೇರಿಸಂತವಾಗಲಿ ಎಂದು ಸಭೆ ಆಶಯ ವ್ಯಕ್ತಪಡಿಸಿರುವುದಾಗಿ ಸೂಫಿ ಹಾಜಿಯವರು ವಿವರಿಸಿದ್ದಾರೆ.

ಸಭೆಯಲ್ಲಿ ಉಪಾಧ್ಯಕ್ಷರಾದ ಅಕ್ಕಳತಂಡ ಎಸ್. ಮೊಯ್ದು, ಪ್ರಧಾನ ಕಾರ್ಯದರ್ಶಿ ಈತಲತಂಡ ರಫೀಕ್ ತೂಚಮಕೇರಿ, ಸಂಘಟನಾ ಕಾರ್ಯದರ್ಶಿ ಮೀತಲ್ತಂಡ ಎಂ. ಇಸ್ಮಾಯಿಲ್, ಹಿರಿಯ ನಿರ್ದೇಶಕರು ಸೇರಿದಂತೆ ಜಿಲ್ಲೆಯ ವಿವಿಧ ಪ್ರದೇಶಗಳ ಸಂಸ್ಥೆಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

coorg buzz
coorg buzz