ಬೆಂಗಳೂರು : ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಕೆಲವು ದಿನದ ಹಿಂದೆ ವಿಧಾನಸಭೆ ಅಧಿವೇಶನದಲ್ಲಿ ಆರ್‌ಎಸ್‌ಎಸ್ ಗೀತೆ ʼನಮಸ್ತೇ ಸದಾ ವತ್ಸಲೇ ಮಾತೃ ಭೂಮೇ..ʼ ಹಾಡನ್ನು ಪ್ರಸ್ತಾಪಿಸಿ ಮಾತ ನಾಡಿದ್ದರು. ಇದಕ್ಕೆ ಕಾಂಗ್ರೆಸ್‌ನ ನಾಯಕರಿಂದ ವಿರೋಧ ವ್ಯಕ್ತವಾಗಿತ್ತು. ಈ ಕುರಿತಂತೆ ಮೌನ ಮುರಿದಿರುವ ಡಿಕೆಶಿ, “ನನ್ನ ಹೇಳಿಕೆಯಿಂದ ಕ್ಷಮೆ ಕೇಳಬೇಕು ಅಂತಿದ್ದರೆ ಕ್ಷಮೆಗೆ ಸಿದ್ದನಿದ್ದೇನೆ” ಎಂದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದನದಲ್ಲಿ ಬಿಜೆಪಿ ನಾಯಕರು ಮಾತಾಡಿದಾಗ, ಅವರ ಸಿದ್ದಾಂತದ ಅರಿವು ನನಗೆ ಇದೆ ಅಂತ ಕಾಲೆಳೆದೆ. ನಾನು ವಿದ್ಯಾರ್ಥಿ ಸಂಘಟನೆಯಲ್ಲಿ ಕೆಲಸ ಮಾಡಿದವನು ಹೀಗಾಗಿ ಯಾರಿಂದಲೂ ಪಾಠದ ಅಗತ್ಯ ಇಲ್ಲ. ಗಾಂಧಿ ಕುಟುಂಬದ ಬಲಿದಾನ, ಆಡಳಿತ ಮಾರ್ಗದರ್ಶನ ಪಡೆದುಕೊಂಡು ಕೆಲಸ ಮಾಡಿದ್ದೇನೆ ಅಂತ ಹೇಳಿದ್ರು.
ನಾನು ಎಲ್ಲಾ ಪಾರ್ಟಿಗಳ ಬಗ್ಗೆ ಅಧ್ಯಯನ ಮಾಡಿದ್ದೇನೆ. ಕಮ್ಯುನಿಸ್ಟ್, ಟಿಡಿಪಿ, ಬಿಜೆಪಿ, ಜೆಡಿಎಸ್ ಬಗ್ಗೆ ಅವರ ಸಿದ್ದಾಂತಗಳ ಬಗ್ಗೆ ತಿಳಿದಿದ್ದೇನೆ. ಮುಸ್ಲಿಂ ಲೀಗ್ ಕಾನ್ಫರೆನ್ಸ್‌ಗೂ ಹೋಗಿದ್ದೇನೆ. ಅವರ ಶಿಸ್ತು ಕಂಡು ಬೆರಗಾಗಿದ್ದೇನೆ. ನನ್ನ ಇತಿಹಾಸ, ಬದ್ಧತೆಯನ್ನು ಅನುಮಾನ ಮಾಡಿದರೆ, ಅವರಷ್ಟು ಮೂರ್ಖರು ಯಾರೂ ಇಲ್ಲ ಎಂದು ವಿರೋಧಿಗಳಿಗೆ ತಿರುಗೇಟು ನೀಡಿದರು.
ನನ್ನ ಹೋರಾಟ ಬಹಳ ಇದೆ. ಯಾರು ಮ್ಯಾಚ್ ಮಾಡಲು ಆಗಲ್ಲ. ಕಾಂಗ್ರೆಸ್‌ನಲ್ಲಿ ಗಟ್ಟಿಯಾಗಿ ನಿಂತು ರಾಜಕಾರಣ ಮಾಡಿದ್ದೇನೆ. ನಾನು ಕಾಂಗ್ರೆಸ್‌ಗೆ ಬದ್ದ, ಕಾಂಗ್ರೆಸ್‌ನಲ್ಲಿ ಹುಟ್ಟಿದ್ದೇನೆ. ಕಾಂಗ್ರೆಸ್‌ನಲ್ಲೇ ಸಾಯ್ತೇನೆ ಎಂದರು.
ನಾನು ಕಮ್ಯುನಿಸ್ಟ್ ಬಗ್ಗೆ, ಚಾಣಕ್ಯ ನೀತಿ ಬಗ್ಗೆ ಮಾತಾಡಬಲ್ಲೆ. ಎಲ್ಲಾ ಧರ್ಮದ ಬಗ್ಗೆ ನನಗೆ ಗೊತ್ತು. ಯಾವ ಧರ್ಮವಾದರೂ ಭಕ್ತಿ ಒಂದೇ. ಇದರಲ್ಲಿ ರಾಜಕಾರಣ ಮಾಡಿದರೂ ಪರವಾಗಿಲ್ಲ. ನನ್ನ ಕೆಲಸ ಮಾಡ್ತೇನೆ ಮಾಡ್ತಾ ಇರ್ತೇನೆ ಎಂದು ಹೇಳಿದರು.



