ನಿಶ್ಚಿತವಾದ ಧ್ಯೇಯ ಸಾಧನೆ ಹಾಗೂ ಸಂಸ್ಕೃತಿ ಪ್ರಸಾರವೇ ತನ್ನ ಮುಖ್ಯ ಮೌಲಿಕ ಗುರಿಯನ್ನಾಗಿಸಿಕೊಂಡು ಆಚರಿಸಲ್ಪಡುವ ಯಾವುದೇ ಹಬ್ಬ, ಉತ್ಸವ, ಆಚರಣೆಗಳು ಶ್ರದ್ಧಾ ಭಕ್ತಿಯ ಪ್ರತಿಬಿಂಬವಾಗಿ ಸರ್ವ ಧರ್ಮೀಯರ ಮಾನ್ಯತೆಗೆ ಖಂಡಿತವಾಗಿಯೂ ಒಳಪಡುತ್ತದೆ.
ಸಾಮೂಹಿಕ ಆಚರಣೆಗೆ ಒಳಪಡುವ ಯಾವುದೇ ಹಬ್ಬ, ಸಂಪ್ರದಾಯ, ಆಚರಣೆಗಳೂ ಕೂಡ ಇಂತಹ ಗುರುತರವಾದ ಜವಾಬ್ದಾರಿಯನ್ನು ಅತೀ ಮುಖ್ಯವಾಗಿ ನಿರ್ವಹಿಸಬೇಕಾಗುತ್ತದೆ. ಏಕೆಂದರೆ ಈ ಆಚರಣೆ ಕೇವಲ ಸಂಭ್ರಮ, ಮನರಂಜನೆಗಾಗಿ ಆಗಿರುವುದಿಲ್ಲ. ಆ ಮೂಲಕ ಒಂದು ಸಂಸ್ಕೃತಿಯ ಐಕ್ಯತೆ, ಒಗ್ಗಟ್ಟಿನ ಮೂಲಕ ತನ್ನ ಪ್ರತಿಷ್ಠೆ, ಅಭಿಮಾನದಿಂದ ಸಮಾಜಕ್ಕೆ ಒಂದು ಉತ್ತಮ ಸಂದೇಶ ನೀಡುವ ಘನ ಜವಾಬ್ದಾರಿಕೆಯೂ ಹೌದು.
ಕೊಡಗಿನ ಕೀರ್ತಿಯನ್ನು ವಿಶ್ವ ಮಟ್ಟದಲ್ಲಿ ಪಸರಿಸುವಲ್ಲಿ ಮಡಿಕೇರಿ ದಸರಾ ಈಗಾಗಲೇ ಕಳೆದ ಕೆಲವು ದಿನಗಳಿಂದ ಸದ್ದು ಮಾಡುತ್ತಲೇ ಇತ್ತು. ನವರಾತ್ರಿಯ ಸಂಭ್ರಮಕ್ಕೆ ಸಾಂಸ್ಕೃತಿಕ ವೈಭವದೊಂದಿಗೆ ದಿನಕ್ಕೊಂದು ವಿಶೇಷ ಹಾಗೂ ವಿಭಿನ್ನ ವಸ್ತು ವಿಷಯಾಧಾರಿತ ದಸರಾ ಆಚರಣೆ ಮಡಿಕೇರಿ ದಸರಾಕ್ಕೊಂದು ಮೆರುಗನ್ನು ನೀಡುವಲ್ಲಿ ಪೂರಕವಾಗಿ ನಡೆದು ಬರುತ್ತಲಿದೆ. ಮಡಿಕೇರಿ ನಗರ ಎನ್ನುವಾಗ ಕಣ್ಣ ಮುಂದೆ ಬರುವ ಚಿತ್ರಣವೇ ಬೇರೆ. ಕಿರಿದಾದ, ವಾಹನ ಸಂಚಾರಕ್ಕೆ ಸವಾಲೆಸಗುವ
ಏರು ತಗ್ಗಿನ ರಸ್ತೆ, ಮಳೆಗಾಲ ವಂತೂ ಸದಾ ಮಂಜು ಮುಸುಕು, ಸೂರ್ಯನ ದರ್ಶನವಾದರೆ ಸಂಭ್ರಮಿಸುವ ನಮಗೆ ಹಬ್ಬ, ಮದುವೆ, ಉತ್ಸವಗಳನ್ನು ಸಂಭ್ರಮಿಸಲು ಪ್ರಕೃತಿ ಮಾತೆಯ ಕೃಪಾ ಕಟಾಕ್ಷವು ಇರಬೇಕು. ಇಂತಹ ಸಂಧಿಗ್ಧತೆಯ ನಡುವೆಯೂ ನಮ್ಮೂರ ದಸರಾ ನಮ್ಮ ಹೆಮ್ಮೆಯಾಗಿ ಸದಾ ಕಾದು ಕುಳಿತು ಸಂಭ್ರಮ ಪಡುವ ನಾಡ ಹಬ್ಬ.
ಈ ವರ್ಷದ ದಸರಾ ಕಾರ್ಯಕ್ರಮ ಗಳೆಲ್ಲವೂ ವರುಣನ ಅಬ್ಬರದ ನಡುವೆಯೇ ನಡೆದು ಹೋಯಿತು. ದಸರಾ ಕೊನೆಯ ದಿನವಾದ ವಿಜಯ ದಶಮಿಯಂದು ನಿಜವಾಗಿಯೂ ವರುಣನ ದಯೆ ಮಡಿಕೇರಿಯ ಮೇಲಿತ್ತು. ಎಲ್ಲಾ ಶಕ್ತಿ ದೇವತೆಗಳ ಆಶೀರ್ವಾದವೆಂದೇ ಹೇಳಬೇಕು. ದಸರಾ ಆಚರಣೆಯಲ್ಲಿ ಮುಂದಾಳತ್ವ ವಹಿಸುವ ಎಲ್ಲಾ ದಸರಾ ಸಮಿತಿಗಳು, ಪೊಲೀಸ್ ಇಲಾಖೆಯಾದಿಯಾಗಿ ಎಷ್ಟೋ ಜನರ ಪರಿಶ್ರಮದ ಫಲ ಕೈಗೂಡುವ ಕೊನೆಯ ಕ್ಷಣ ನೀರಿನಲ್ಲಿ ಹೋಮ ಮಾಡಿದಂತೆ ದುರ್ಘಟನೆ ನಡೆದೇ ಹೋಯಿತು. ವಿಜಯ ದಶಮಿಯಂದು ನಡೆಯುವ ದಶ ಮಂಟಪಗಳ ಶೋಭಾಯಾತ್ರೆಗಾಗಿ ವಾಹನಗಳ ನಿರ್ಬಂಧದ ನಡುವೆ, ಜನಸಾಗರವನ್ನು ನಿಭಾಯಿಸುತ್ತಾ, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವನ್ನು ನಿರ್ವಹಿಸುವ ಪೊಲೀಸ್ ಇಲಾಖೆಯ ಸೇವೆಯನ್ನು ಕುರಿತು ಹೇಳಲು ಪದಗಳೇ ಇಲ್ಲ. ಅಂತಹದ್ದರಲ್ಲಿ ಈ ಸಲದ ದಸರಾ ದಿನದ ಕೊನೆಯಲ್ಲಿ ನಡೆದ ಆವಾoತರ ಕೊಡಗಿನ ದಸರಾ ಇತಿಹಾಸದಲ್ಲಿ ಒಂದು ಕಪ್ಪು ಚುಕ್ಕೆಯಾಗಿ ಬಿಂಬಿತವಾದದ್ದು ನಿಜವಾಗಿಯೂ ಅವಮಾನಕರ ವಿಚಾರವೆನಿಸುತ್ತದೆ. ದಶ ಮಂಟಪಗಳ ಶೋಭಾಯಾತ್ರೆ ಎನ್ನುವುದು ಮಡಿಕೇರಿ ದಸರಾದ ಸಾಂಸ್ಕೃತಿಕ ಹೆಗ್ಗಳಿಕೆಯನ್ನು ಸಾರುವ ಉತ್ಸವವಾಗಿ ನೂರಾರು ವರ್ಷದ ಐತಿಹ್ಯವನ್ನು ಹೊಂದಿದೆ. ಮಂಟಪದ ಕಲಾ ಪ್ರದರ್ಶನವು ಭಕ್ತ ವೃಂದದ ಭಕ್ತಿ, ಶ್ರದ್ಧೆಗೆ ಸಾಕ್ಷಿಯಾಗಬೇಕಿತ್ತು. ಕೇವಲ ಬಹುಮಾನ ಗಳಿಸುವ ಅನಾರೋಗ್ಯಕರ ಸ್ಪರ್ಧಾ ಮನೋಭಾವ ಕ್ಷಣಾರ್ಧದಲ್ಲಿ ಎಷ್ಟೆಲ್ಲಾ ಆವಾಂತರಗಳನ್ನೇ ಸೃಷ್ಟಿ ಮಾಡಿಬಿಟ್ಟಿತು. ಫಲಿತಾಂಶ ಬಿತ್ತರವಾಗುತ್ತಿದ್ದಂತೆ ಕಲಾರಾಧಕರ ಪೂಜ್ಯ ಕಲಾ ಸಂಭ್ರಮದ ವೇದಿಕೆ ನೋಡು ನೋಡುತ್ತಿದ್ದoತೆಯೇ ಪುಂಡರ, ಪುoಡಾಟಿಕೆಗೆ, ದರ್ಪ ಅಹಂಕಾರಕ್ಕೆ ಬಲಿಯಾಗಿ ಬಿಟ್ಟಿತು. ರಾತ್ರಿ ಹಗಲೆನ್ನದೆ ಕರ್ತವ್ಯ ನಿರ್ವಹಿಸಿದ ಪೊಲೀಸ್ ಅಧಿಕಾರಿಯ ಮೇಲೆ ಕೈ ಹಾಕುವಷ್ಟು ದರ್ಪ ನೋಡಿದಾಗ
ಮಂಟಪಗಳ ಶೋಭಾಯಾತ್ರೆಯಲ್ಲಿ ರಾತ್ರಿ ರಾರಾಜಿಸಿದ ದೈತ್ಯ ಪಾತ್ರಗಳನ್ನು ಸಾಕ್ಷಾತ್ ವೇದಿಕೆಯಲ್ಲಿಯೂ ನೋಡುವ ದೌರ್ಭಾಗ್ಯ ನಮ್ಮದು. ಇದು ಕೊಡಗಿನಲ್ಲಿ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಸುದ್ಧಿಯಾದದ್ದು ನಮ್ಮೆಲ್ಲರ ದುರ್ವಿಧಿ ಎನ್ನಬಹುದು. ಕ್ಷುದ್ರ ಮನಸ್ಥಿತಿಯುಳ್ಳ ಒಂದು ಗುಂಪಿನ ಈ ಅಸಭ್ಯ ಅವಮಾನಕರ ವರ್ತನೆ ಇಡೀ ಕೊಡಗಿನ ಹೆಸರಿಗೆ ಇನ್ನಿಲ್ಲದ ಕಳಂಕವನ್ನು ತಂದೊಡ್ಡಿದೆ.
ದಶ ಮಂಟಪಗಳಲ್ಲಿ ಸ್ಪರ್ಧೆ ಎನ್ನುವುದು ಆಕರ್ಷಕವಾದ ಪ್ರದರ್ಶನಕ್ಕಾಗಿ ಎನ್ನುವುದು ಸದುದ್ದೇಶದ ಪ್ರಯತ್ನ ಎಂಬುದನ್ನು ಒಪ್ಪಿಕೊಳ್ಳೋಣ. ಆದರೆ ಈ ಫಲಿತಾಂಶವನ್ನು ಮುಕ್ತ ಮನಸ್ಸಿನಿಂದ, ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸದ, ತಮ್ಮ ಪ್ರತಿಷ್ಠೆಗಾಗಿ ಎಂತಹ ಕೀಳು ಪ್ರವೃತ್ತಿಗೂ ಇಳಿಯುವಂತಹ ಘಟನೆಗಳು ವರ್ಷ ವರ್ಷವೂ ಮರುಕಳಿಸುತ್ತಿದೆ ಎಂದಾದಲ್ಲಿ ಇಂತಹ ಸ್ಪರ್ಧೆಯ ಅವಶ್ಯಕತೆಯಾದರೂ ಏನಿದೆ? ದಸರಾ ಆಚರಣೆ ಎನ್ನುವುದು ಕೇವಲ ಕೆಲವೇ ಕೆಲವರ ಆಟದ ಅಂಗಣವಾಗಿರುವ ಕಾರಣ ಸಮಷ್ಟಿ ಹಿತ ಕಡೆಗಣನೆಗೆ ಒಳಗಾಗುತ್ತಿದೆ. ದಶಮಂಟಪಗಳ ತೀರ್ಪುಗಾರಿಕೆಯಲ್ಲಿ ಪಕ್ಷಪಾತವಾಗುತ್ತಿದೆ ಎಂದಾದರೆ ಈ ಮಟ್ಟಿಗೆ ವಿವಾದಗಳ ಗೂಡಾಗುತ್ತಿದೆ ಎಂದಾದಲ್ಲಿ ಸ್ಥಳೀಯ ತೀರ್ಪುಗಾರರನ್ನು ಆಯ್ಕೆ ಮಾಡದೇ ಹೊರಗಿನಿಂದ ಸಮರ್ಥರನ್ನು ಆಯ್ಕೆ ಮಾಡಬಹುದಿತ್ತು. ಎಲ್ಲರನ್ನೂ ಮೆಚ್ಚಿಸುವ ಫಲಿತಾಂಶ ಹೊರಬರುವುದು ಅಸಾಧ್ಯದ ಮಾತು ನಿಜ. ಆದರೆ ತೀರ್ಪು ಬಯಸುವ ಕಾರಣಗಳು ಸೂಕ್ತ ಹಾಗೂ ಸಮಂಜಸ ವಾಗಿರಬೇಕು. ಇವೆಲ್ಲದರ ವೈಫಲ್ಯದಿಂದಾಗಿ
ಹತ್ತೂ ದಿನಗಳ ಸಾಂಸ್ಕೃತಿಕ ವೈಭವದಿಂದ ಸಂಭ್ರಮಿಸುವ ಮಡಿಕೇರಿ ದಸರಾ ಸಮಾಪ್ತಿಗೊಳ್ಳುವುದು ಮಾತ್ರ ಇಂತಹ ಮಂಟಪಗಳ ಫಲಿತಾಂಶ, ವಾದ ವಿವಾದ, ಗೊಂದಲ, ನಿಂದನೆ, ಅಪವಾದ, ಅಪಮಾನಗಳಲ್ಲಿಯೇ..
ಇದು ಮಡಿಕೇರಿ ದಸರಾಕ್ಕೆ ಅಂಟಿಕೊಂಡ ಶಾಪವೆನಿಸುವುದಿಲ್ಲವೇ?
ಇದರ ಅವಶ್ಯಕತೆ, ಅನಿವಾರ್ಯತೆ ಏನು ಎಂಬುವುದೇ ಪ್ರಶ್ನೆಯಾಗಿ ಉಳಿದಿದೆ. ಉನ್ನತ ಮಟ್ಟದಲ್ಲಿ ಮಡಿಕೇರಿ ದಸರಾ ಹಬ್ಬ ಪರಿಗಣನೆಗೆ ಒಳಪಡಬೇಕೆಂದಾದಲ್ಲಿ ಇಂತಹ ಕ್ಷುಲ್ಲಕ ಘಟನೆಗಳಿಗೆ ಖಂಡಿತವಾಗಿಯೂ ಕಡಿವಾಣ ಹಾಕಲೇಬೇಕಾಗಿದೆ. ಈ ಅನಾರೋಗ್ಯಕರ ಸ್ಪರ್ಧೆ ಎನ್ನುವುದು ಇತ್ತೀಚಿಗೆ ಗಣೇಶೋತ್ಸವದಂತಹ ಆಚರಣೆಗಳಲ್ಲಿಯೂ ಕಂಡುಬರುತ್ತಿದೆ. ಪ್ರತಿಯೊಂದು ಏರಿಯಾದಲ್ಲಿ ಸ್ಪರ್ಧೆಗೆ ಬಿದ್ದಂತೆ ನಡೆಯುವ ಉತ್ಸವ ನೈಜ ಭಕ್ತಿಭಾವಕ್ಕೆ, ಐಕ್ಯತೆ ಒಗ್ಗಟ್ಟಿಗೆ ಸಾಕ್ಷಿಯಾಗುವ ಬದಲು ಒಡಕು ಮನಸ್ಸುಗಳ ವೇದಿಕೆಯಾಗಿ ವಿಜೃಂಭಿಸುತ್ತಿರುವುದು ಅಹಿತಕರ ಬೆಳವಣಿಗೆಯೇ ಸರಿ. ಇಂತಹ ಅನಾರೋಗ್ಯಕರ ಬೆಳವಣಿಗೆಗಳು ಒಗ್ಗಟ್ಟಿನ ಪ್ರತೀಕವಾಗದೆ ನಮ್ಮ ನಮ್ಮೊಳಗಿನ ಒಡಕು -ತೊಡಕುಗಳ ಅನಾವರಣದಿಂದಾಗಿ ಒಂದು ರೀತಿಯ ಅಪಹಾಸ್ಯಕ್ಕೆ ತುತ್ತಾಗುತ್ತಲಿದೆ. ಇನ್ನು ಈ ಸಲದ ಡಿಜೆ ರಹಿತ ಶೋಭಯಾತ್ರೆ ಸೇರಿದ ಮುಕ್ಕಾಲುಭಾಗ ಜನಸ್ತೋಮಕ್ಕೆ ನಿರಾಸೆಯನ್ನು ಉಂಟು ಮಾಡಿತ್ತು. ಖಾಸಗಿ ಚಾನೆಲ್ ವೊಂದರ ಜನಾಭಿಪ್ರಾಯ ಸಂದರ್ಶನದಲ್ಲೂ ಕೇಳಿ ಬಂದ ಒಂದೇ ಕೂಗು ಎಂದರೆ ಡಿಜೆ ಇಲ್ಲದ ಮಡಿಕೇರಿ ದಸರಾ ನೀರಸವಾಗಿತ್ತು ಎಂಬುದು. ಎಲ್ಲಾ ವಯೋಮಾನದವರ ಹಿತ ಚಿಂತನೆಯನ್ನು ಮುಖ್ಯ ಗುರಿಯಾಗಿಟ್ಟುಕೊಂಡು ತೆಗೆದುಕೊಂಡ ಪೊಲೀಸ್ ಇಲಾಖೆಯ ಈ ನಿರ್ಧಾರಕ್ಕೆ ಮಿಶ್ರ ಪ್ರತಿಕ್ರಿಯೆ ಕಂಡು ಬಂದಿದೆ. ಸಾವಿರ ಸಾವಿರ ಸಂಖ್ಯೆಯಲ್ಲಿ ಸೇರುವ ಜನಸಮೂಹದಲ್ಲಿ ಹೆಚ್ಚಿನವರ ಉದ್ದೇಶವೇ ಶೋಭಾಯಾತ್ರೆಯಲ್ಲಿ ಡಿಜೆ ಯಲ್ಲಿ ಕುಣಿದು ಕುಪ್ಪಳಿಸುವುದು ಮುಖ್ಯ ವಾದ ಆಕರ್ಷಣೆಯವರಿಗೆ. ಇನ್ನು ಮೋಜು, ಮಸ್ತಿಯಲ್ಲಿ ಮೈಮರೆತು
ಅಸಭ್ಯ ವರ್ತನೆ ಮೆರೆಯುವ ಪುಂಡರ ಕಾಟ..ಇದರಿಂದಾಗಿ ಮುಜುಗರ ಅನುಭವಿಸುವ ಹೆಣ್ಣು ಮಕ್ಕಳ ಅನುಭವ ಮತ್ತೊಂದು ರೀತಿಯದ್ದು. ರಾತ್ರಿಯೆಲ್ಲಾ ಆಕರ್ಷಕ ದಶ ಮಂಟಪಗಳ ಕಲಾ ಪ್ರದರ್ಶನ, ಬಣ್ಣದ ಬಣ್ಣದ ಬೆಳಕಿನ ಚಿತ್ತಾರ, ಕುಣಿದು ಕುಪ್ಪಳಿಸುವ ಸಂಗೀತದ ಅಬ್ಬರಗಳಿಂದ ದೇವಲೋಕದಂತೆ ಕಂಗೊಳಿಸುವ ಮಡಿಕೇರಿ ನಗರ ಬೆಳಕು ಹರಿಯುತ್ತಿದ್ದಂತೆ ನಗ್ನ ಅವತಾರದಲ್ಲಿ ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ಕಸದ ರಾಶಿಯಲ್ಲಿ ಮುಳುಗಿ ಸೊರಗಿ ಹೋದಂತೆ ಭಾಸವಾಗುತ್ತದೆ. ಮುನಿಸಿಪಾಲಿಟಿ ಸಿಬ್ಬಂದಿಯಂತೂ ವಾರಗಟ್ಟಲೆ ಆದರೂ ನಗರದ ಸ್ವಚ್ಛತೆ ಕಾಯ್ದು ಕೊಳ್ಳಲು ಪರಿಶ್ರಮ ಪಡುತ್ತಿರುತ್ತಾರೆ. ಎಲ್ಲೆಲ್ಲಿಂದಲೋ ಬಂದು ಸೇರುವ ಜನ ಸಮೂಹ ವಿಭಿನ್ನ ಅಭಿರುಚಿ, ಉದ್ದೇಶವನ್ನು ಇಟ್ಟುಕೊಂಡವರಾಗಿದ್ದು ಆ ಮೂಲಕ ಮಡಿಕೇರಿ ದಸರಾ ಎನ್ನುವುದು ಅವರವರ ಭಾವಕ್ಕೆ.. ಅವರವರ ಭಕುತಿಗೆ ತಕ್ಕಂತೆ ಪರಿಗಣಿಸಲ್ಪಟ್ಟಿದೆ. ಆದರೆ ಇದು ಮಡಿಕೇರಿ ದಸರಾಕ್ಕೆ ಕಳಂಕ ತಾಗದಂತೆ ನಿಗಾ ವಹಿಸಬೇಕಾದ ಅತೀ ಮುಖ್ಯ ಜವಾಬ್ದಾರಿ ನಮ್ಮದು.
ಒಂದು ವೇಳೆ ಶೋಭಾಯಾತ್ರೆಯಲ್ಲಿ ಡಿಜೆ ಬದಲಿಗೆ ಸಾಂಪ್ರದಾಯಿಕ ಶೈಲಿಯ ಕುಣಿತ, ಭಜನೆ, ಕಲಾ ತಂಡಗಳ ಪ್ರದರ್ಶನ ಏರ್ಪಟ್ಟಾಗ ಇಂತಹ ಅಂಕುಶವಿಲ್ಲದ ಮನಸ್ಸುಗಳು ಸದ್ದಿಲ್ಲದೇ ತಾವಾಗಿಯೇ ದೂರ ಸರಿಯುತ್ತವೆ. ಮದ್ಯ ಮಾರಾಟದ ನಿಷೇಧದ ನಡುವೆಯೂ ಮತ್ತಿನ ಉನ್ಮಾದದಲ್ಲಿ ತೇಲಾಡುತ್ತಾ ಇಂತಹ ಘಟನೆಗಳಿಗೆ ಕಾರಣವಾಗುವವರಿಂದ ಈ ಶೋಭಯಾತ್ರೆ ತನ್ನ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳಬೇಕಾಗಿದೆ. ನಿಜವಾದ ಭಕ್ತಿ, ಶ್ರದ್ದೆಯುಳ್ಳ ಕಲಾರಾಧಕರು ಇಂತಹ ವಿಕೃತಿಯನ್ನು ಮೆರೆಯಲಾರರು. ಇಂದಿನ ಘಟನೆಗಳು ಮುಂದಿನ ವರ್ಷಕ್ಕೆ ದಾರಿದೀಪವಾಗಬೇಕು ಎಂದಾದರೆ ಮುಂದಿನ ದಸರಾ ಸಮಿತಿಗಳ ಪೂರ್ವ ತಯಾರಿ ಅಚ್ಚುಕಟ್ಟಾಗಿ ಯೋಜಿಸಲ್ಪಡಬೇಕು. ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸವೆಂಬಂತೆ
ಕೊನೆಯ ಘಳಿಗೆಯಲ್ಲಿ ಸಮಯದ ಅಭಾವದ ನಡುವೆ ಹಿಂದಿನ ವರ್ಷದ ನ್ಯೂನತೆಗಳು, ತಪ್ಪು ಒಪ್ಪುಗಳು ಮುಕ್ತವಾಗಿ ಚರ್ಚೆಯಾಗಲಾರದು.
ಹೀಗಿರುವಾಗ ತೆಗೆದುಕೊಳ್ಳುವ ನಿರ್ಧಾರಗಳೂ ಕೂಡ ಯೋಗ್ಯ ಫಲಿತಾಂಶ ಕೊಡುವಲ್ಲಿ ವಿಫಲತೆ ಅನುಭವಿಸುತ್ತವೆ. ಸೃಜನಶೀಲ ಕಾರ್ಯಕ್ರಮಗಳು, ಚಿಂತನೆಗಳು, ಸ್ಥಳೀಯ ಸಂಸ್ಕೃತಿ ಕಲೆಯನ್ನು ಗುರುತಿಸುವ, ಪ್ರೋತ್ಸಾಹಿಸುವ ನಿಟ್ಟಿನಲ್ಲಿ ದಸರಾ ಆಚರಣೆಗೆ ಒಳಪಡಬೇಕು. ಸ್ವ ಪ್ರತಿಷ್ಠೆ, ಗುಂಪುಗಾರಿಕೆ, ಹಣದ ವ್ಯಾಮೋಹ, ಯಾವುದೇ ವಿಧದ ರಾಜಕೀಯ ವಿಚಾರಗಳು ಪಾಲು ಪಡೆಯದೆ ಎಲ್ಲರ ಶಭಾಷ್ ಗಿರಿ ಪಡೆಯುವಂತೆ ಮಡಿಕೇರಿ ದಸರಾ ಆಚರಿಸಲ್ಪಡಬೇಕು. ಕೊಡಗಿನ ಶಿಸ್ತು, ಸಭ್ಯತೆ ಮೆರೆಯುವ ಏಕೈಕ ನಾಡ ಹಬ್ಬ ಮಡಿಕೇರಿ ದಸರಾ ಮತ್ತೆ ತನ್ನ ಪ್ರತಿಷ್ಠೆಯನ್ನು ಮರಳಿ ಪಡೆಯುವಂತೆ ಆಚರಿಸಬೇಕಾದ ಮುಂದಿನ ದಸರಾ ಮಹೋತ್ಸವವನ್ನು ನಿರೀಕ್ಷೆ ಮಾಡೋಣ.

ಪ್ರತಿಮಾ ಹರೀಶ್ ರೈ
ಉಪನ್ಯಾಸಕರು
ಸೈಂಟ್ ಆನ್ಸ್ ಪದವಿ ಕಾಲೇಜು.
ವಿರಾಜಪೇಟೆ



