ರಾಷ್ಟ್ರೀಯ ಹೆದ್ದಾರಿಯನ್ನು ನುಂಗುತ್ತಿರುವ ಗಿಡಗಂಟಿಗಳಿಂದ ಕಾದಿದೆ ಅಪಾಯ: ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಇದು ಕಾಣುತ್ತಿಲ್ಲವೇಕೆ?

National highway

Share this post :

ಮಡಿಕೇರಿ : ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ (National highway) ವಾಹನ ಸಂಚಾರಕ್ಕೆ ತೊಡಕಾಗುತ್ತಿದೆ, ಮತ್ತು ಅಪಘಾತಕ್ಕೆ ಕಾರಣವಾಗುತ್ತಿದೆ ಎಂಬ ಕಾರಣದಿಂದ ರಸ್ತೆ ಬದಿಯಲ್ಲಿದ್ದ ಹಣ್ಣಿನ ಅಂಗಡಿಗಳನ್ನು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕೆಲವು ದಿನದ ಹಿಂದೆ ತೆರವು ಮಾಡಿದ್ದರು. ಈ ಬಗ್ಗೆ ಸಾರ್ವಜನಿಕ ವಲಯದಲ್ಲೂ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ ಅಸಲಿಯಾಗಿ ವಾಹನಗಳ ಸಂಚಾರಕ್ಕೆ ತೊಡಕಾಗಿರುವ, ಅಪಘಾತಕ್ಕೆ ಕಾರಣವಾಗಿರುವ ಪ್ರಮುಖ ವಿಚಾರದ ಬಗ್ಗೆ ಅಧಿಕಾಗಳು ಗಮನಹರಿಸದಿರುವ ಬಗ್ಗೆ ಜನರಲ್ಲಿ ಅಸಮಾಧಾನ ವ್ಯಕ್ತವಾಗಿದೆ.

ರಾಷ್ಟ್ರೀಯ ಹೆದ್ದಾರಿ 275ರಲ್ಲಿ(ಮಡಿಕೇರಿ-ಸಂಪಾಜೆ) ವಿವಿಧೆಡೆ ರಸ್ತೆಯನ್ನ ಕಾಡು ಗಿಡಗಳು ಆವರಿಸುತ್ತಿದ್ದು, ತಿರುವುಗಳಲ್ಲಿ ಅಪಾಯಕ್ಕಾಗಿ ಕಾದು ನಿಂತಂತಿದೆ. ಹಲವು ಕಡೆ ರಸ್ತೆಯ ಅಂಚಿನಲ್ಲಿನ ಸೂಚನಾ ರೇಖೆಗಳನ್ನು ಮಣ್ಣಿನ ರಾಶಿ ಆವರಿಸಿಕೊಂಡಿದೆ. ಪಕ್ಕದಲ್ಲಿ ಸಣ್ಣದಾದ ಗುಡ್ಡಗಳಿರುವ ಕಡೆ ಕಾಡು ಗಿಡಗಳು ರಸ್ತೆಗೆ ಚಾಚಿಕೊಂಡಿದ್ದು, ಓವರ್‌ ಟೇಕ್‌ ಮಾಡಲು ಸಾಧ್ಯವಾಗದ ಸ್ಥಿತಿ ಇದೆ. ಹಿಂಬದಿಯಿಂದ ಬರುವ ವಾಹನಗಳಿಗೆ ಸ್ಥಳಾವಕಾಶ ಮಾಡಿಕೊಡುವ ಸಂದರ್ಭ ವಾಹನಗಳಿಗೆ ಅಪಾಯ ಎದುರಾಗುವ ಸಾಧ್ಯತೆ ಇದೆ.

ಈಗಾಗಲೇ ಜಿಲ್ಲೆಯಲ್ಲಿ ಮಳೆಯಾಗುತ್ತಿದ್ದು, ರಾತ್ರಿ ವೇಳೆಯಲ್ಲಿ ಈ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ತ್ರಾಸದಾಯಕವಾಗುತ್ತಿದೆ ಎಂಬುದು ವಾಹನ ಸವಾರರ ಅಳಲು. ಹೆದ್ದಾರಿಯನ್ನು ನುಂಗುತ್ತಿರುವ ಕುರುಚಲು ಗಿಡಗಳು, ಬಾಗಿರುವ ಮರ, ಗಿಡಗಂಟಿಗಳನ್ನು ತೆರವು ಮಾಡಿ ಅಪಾಯಕಾರಿ ರಸ್ತೆಯಲ್ಲಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ವಾಹನ ಸವಾರರು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಇತ್ತಿಚೆಗೆ ಕಾಟಕೇರಿ ಬಳಿಯಲ್ಲಿ ಅಪಘಾತದಿಂದ ಯುವಕ ಜೀವ ಕಳೆದುಕೊಂಡಿದ್ದಾನೆ. ಹೆದ್ದಾರಿಯುದ್ದಕ್ಕೂ ಹಲವು ಅಪಘಾತಗಳು ಸಂಭಸಿದ್ದು, ಮೇಲೆ ಉಲ್ಲೇಖಿಸಿದ ಅಂಶಗಳೇ ಬಹುತೇಕ ಅಪಘಾತಗಳಿಗೆ ಕಾರಣವಾಗಿದೆ. ಅಧಿಕಾರಿಗಳು ರಸ್ತೆ ಬದಿಯ ಶೆಡ್‌, ಅಂಗಡಿಗಳನ್ನು ತೆರವು ಮಾಡಲು ತೋರಿದ ಆಸಕ್ತಿಯನ್ನೇ ಈ ವಿಚಾರದಲ್ಲೂ ತೋರಬೇಕಿದೆ. ಅನಾಹುತಗಳು ಸಂಭವಿಸಿ ಎಚ್ಚೆತ್ತುಕೊಳ್ಳುವುದರ ಬದಲೂ ಈಗಲೇ ಎಚ್ಚೆತ್ತರೆ ಸಂಭವನೀಯ ಅವಘಡಗಳನ್ನು ತಪ್ಪಿಸಬಹುದೆಂಬುದು ಕೂರ್ಗ್‌ ಬಝ್ ಕಳಕಳಿ ಕೂಡಾ.