ಸಿದ್ದಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ತೋಟದ ಕಣದಲ್ಲಿ ಒಣಗಿಸಲು ಇಟ್ಟಿದ್ದ ಹಸಿ ಕಾಫಿಯನ್ನು (Coffee) ಕಳ್ಳತನ ಮಾಡಿರುವ ಎರಡು ಪ್ರತ್ಯೇಕ ಪ್ರಕರಣಗಳನ್ನು ಭೇದಿಸಿರುವ ಪೊಲೀಸರು ಮಾಲು ಹಾಗೂ ಕೃತ್ಯಕ್ಕೆ ಬಳಸಿದ ಮೂರು ವಾಹನಗಳ ಸಮೇತ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಿತಿಮತಿ ಗ್ರಾಮದ ಶಾಂತಿನಗರದ ಕೆ. ಬಿ. ಶಫೀಕ್ (26), ಟಿ.ಜೆ. ಥೋಮಸ್ (29) ನೊಕ್ಯ ಗ್ರಾಮದ ಎಂ.ಜಿ. ಅನೀಸ್ (24) ಹಾಗೂ ಪೊನ್ನಪ್ಪ ಸಂತೆಯ ಎಂ.ಬಿ. ಯಾಸಿನ್ (28) ಎಂಬುವವರೇ ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತರಿಂದ 51 ಚೀಲ ಕಾಫಿ (2550 ಕೆ.ಜಿ.) ಒಂದು ಪಿಕ್ ಅಪ್ ವಾಹನ, ಒಂದು ಮಾರುತಿ 800 ಕಾರು ಹಾಗೂ ಒಂದು ಮೋಟಾರ್ ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಜ.16 ರಂದು ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬಾಡಗ – ಬಾಣಂಗಾಲ ಗ್ರಾಮದ ಹುಂಡಿಯ ನಿವಾಸಿ ಸಜಿ ಥೋಮಸ್ ರವರ ತೋಟದ ಕಣದಲ್ಲಿ ಒಣಗಿಸಲು ಇಟ್ಟಿದ್ದ ಅಂದಾಜು 12 ಚೀಲ ಹಸಿ ಕಾಫಿಯನ್ನು ಮತ್ತು ಫೆ.26 ರಂದು ಹುಸೇನ್ ರವರ ತೋಟದ ಕಣದಲ್ಲಿ ಒಣಗಿಸಲು ಇಟ್ಟಿದ್ದ ಅಂದಾಜು 800 ಕೆ.ಜಿ. ಹಸಿ ಕಾಫಿಯನ್ನು ಕಳ್ಳತನ ಮಾಡಿರುವ ಬಗ್ಗೆ ದೂರು ಸ್ವೀಕರಿಸಲಾಗಿ ಎರಡು ಪ್ರತ್ಯೇಕ ಪ್ರಕರಣಗಳು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.
ಮಡಿಕೇರಿ ಪೊಲೀಸ್ ಉಪವಿಭಾಗದ ಡಿಎಸ್ಪಿ ಪಿ.ಎ. ಸೂರಜ್, ವೃತ್ತ ನಿರೀಕ್ಷಕರಾದ ಪಿ.ಕೆ. ರಾಜು, ಸಬ್ ಇನ್ಸ್ ಪೆಕ್ಟರ್ ಗಳಾದ ರಾಘವೇಂದ್ರ ಮತ್ತು ಹೆಚ್.ಟಿ. ಶಿವಣ್ಣ (ತನಿಖೆ), ಸಿದ್ದಾಪುರ ಪೊಲೀಸ್ ಠಾಣೆಯ ಸಿಬ್ಬಂದಿಗಳು, ಡಿ.ಸಿ.ಆರ್. ಬಿ. ಘಟಕದ ಸಿಬ್ಬಂದಿಗಳ ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖೆ ಕೈಗೊಂಡು ಮಾಹಿತಿ ಸಂಗ್ರಹಿಸಿ ಮಾ.08 ರಂದು ನಾಲ್ವರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈ ಆರೋಪಿಗಳು ವಿರಾಜಪೇಟೆ ನಗರ ಮತ್ತು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯೂ ಕೂಡ ಕಾಫಿ ಕಳವು ಮಾಡಿರುವುದು ತನಿಖೆಯಲ್ಲಿ ಪತ್ತೆ ಆಗಿದೆ.
ಎಸ್ಪಿ ಶ್ಲಾಘನೆ :
ಈ ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆಹಚ್ಚಿ ಸಂಪೂರ್ಣ ಕಳವು ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿರುವ ಪೊಲೀಸ್ ಅಧಿಕಾರಿಗಳನ್ನು ಮತ್ತು ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ಅಧೀಕ್ಪಕರಾಗಿರುವ ಕೆ. ರಾಮರಾಜನ್ ಆವರು ಶ್ಲಾಘಿಸಿದ್ದಾರೆ.