ಮೂರ್ನಾಡುವಿನಲ್ಲಿ ಸ್ತನ್ಯಪಾನ ಸಪ್ತಾಹ – LKG, UKG ಪ್ರಾರಂಭೋತ್ಸವ

Share this post :

 

ಮೂರ್ನಾಡು : ಎಂ ಬಾಡಗ -1 ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ಕಾಂತರೂ ಮುರ್ನಾಡು ಗ್ರಾಮ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ಎಲ್ಕೆಜಿ, ಯುಕೆಜಿ ಪ್ರಾರಂಭೋತ್ಸವ ಮತ್ತು ಸನ್ಮಾನ ಕಾರ್ಯಕ್ರಮ ನೆರವೇರಿತು.
ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾದಂಡ ಸವಿತಾ ಕೀರ್ತನ್ ಎದೆ ಹಾಲಿನ ಮಹತ್ವದ ಬಗ್ಗೆ ಮಾತನಾಡಿದರು. 2025ರ ಸ್ತನ್ಯಪಾನ ಸಪ್ತಾಹದ ಘೋಷವಾಕ್ಯ “ಸ್ತನ್ಯಪಾನಕ್ಕೆ ಆದ್ಯತೆ ನೀಡಿ ಸುಸ್ಥಿರ ಬೆಂಬಲ ವ್ಯವಸ್ಥೆಗಳನ್ನು ರಚಿಸಿ” ಎಂಬುದಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಆಗಸ್ಟ್ ಒಂದರಿಂದ ಏಳರವರೆಗೆ ಸಪ್ತಾಹವನ್ನು ಎಲ್ಲಾ ಅಂಗನವಾಡಿಗಳಲ್ಲಿ ಆಚರಿಸಿ ಫಲಾನುಭವಿಗಳಿಗೆ ಅರಿವು ಮೂಡಿಸುವ ಕಾರ್ಯ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಮಕ್ಕಳು ಹುಟ್ಟಿದ ಅರ್ಧ ಗಂಟೆಯೊಳಗೆ ರೋಗ ನಿರೋಧಕ ಶಕ್ತಿ ಹೆಚ್ಚಿರುವ ಎದೆ ಹಾಲನ್ನು ತಪ್ಪದೇ ತಾಯಂದಿರು ಮಕ್ಕಳಿಗೆ ನೀಡಬೇಕು. ಮಗುವಿಗೆ ಆರು ತಿಂಗಳವರೆಗೆ ಕೇವಲ ಎದೆಹಾಲನ್ನೇ ನೀಡಬೇಕು. ನಂತರ ಎರಡು ವರ್ಷದವರೆಗೆ ಮೇಲು ಆಹಾರದೊಂದಿಗೆ ಎದೆ ಹಾಲನ್ನು ಮುಂದುವರಿಸಬೇಕು. ಇದರಿಂದ ಮಗುವಿನ ಆರೋಗ್ಯ ಮತ್ತು ಮೆದುಳಿನ ಬೆಳವಣಿಗೆ ಉತ್ತಮ ರೀತಿಯಲ್ಲಿ ಆಗುತ್ತದೆ. ಜೊತೆಗೆ ತಾಯಿಯ ಆರೋಗ್ಯ, ಸೌಂದರ್ಯ ಕೂಡ ಹೆಚ್ಚುತ್ತದೆ ಎಂದು ತಿಳಿಸಿದರು.
ಗ್ರಾಪಂ ಅಧ್ಯಕ್ಷ ಕುಶನ್ ರೈ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಇಂತಹ ಸೌಲಭ್ಯಗಳ ಸದುಪಯೋಗವನ್ನು ಪಡೆಯಲು ಪೋಷಕರು ಮುಂದಾಗಬೇಕು. ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಬೇಕು ಎಂದರು.
ಉಪಾಧ್ಯಕ್ಷೆ ರೇಖಾ, ಸದಸ್ಯರಾದ ಸೌಮ್ಯ ಕಾವೇರಪ್ಪ, ವಿಜಯಲಕ್ಷ್ಮಿ, ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕರ ಜಿಲ್ಲಾಧ್ಯಕ್ಷೆ ಸುಮಿತ್ರ ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಪ್ರಸನ್ನ ಕುಮಾರ್ ಅವರು ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಬಗ್ಗೆ ವಿವರಿಸಿದರು. ಆರೋಗ್ಯ ಇಲಾಖೆಯ ಹಿರಿಯ ಆರೋಗ್ಯ ಸಹಾಯಕಿ ಹೇಮಲತಾ ಅವರು ಎದೆ ಹಾಲಿನ ಮಹತ್ವ, ಚುಚ್ಚುಮದ್ದು ಕಾರ್ಯಕ್ರಮದ ಬಗ್ಗೆ ಮಾತನಾಡಿದರು.

ಸನ್ಮಾನ : ಕೇಂದ್ರದ ಅಭಿವೃದ್ಧಿಗೆ ಉತ್ತಮ ಸಲಹೆ, ಸಹಕಾರ, ಉತ್ತಮ ಮಾರ್ಗದರ್ಶನ ನೀಡಿರುವುದಕ್ಕಾಗಿ ಬಾಲವಿಕಾಸ ಸಮಿತಿ ವತಿಯಿಂದ ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಶನ್ ರೈ, ಉಪಾಧ್ಯಕ್ಷೆ ರೇಖಾ, ಸದಸ್ಯರಾದ ನಿಂಗಪ್ಪ, ಮೀನಾಕ್ಷಿ ದೇವಯ್ಯ, ಸೌಮ್ಯ ಕಾವೇರಪ್ಪ, ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಮೇಪಾಡಂಡ ಸವಿತಾ ಕೀರ್ತನ್, ಕಲಾವಿದ ದರ್ಶನ್ ಅವರನ್ನು ಸನ್ಮಾನಿಸಲಾಯಿತು.
ಅಂಗನವಾಡಿ ಕಾರ್ಯಕರ್ತೆ ಚೈತ್ರ, ಪ್ರಮೀಳಾ, ಭವ್ಯ, ಕುಸುಮ, ಗೀತಾ, ಆಶಾ ಕಾರ್ಯಕರ್ತೆ ಚಂದ್ರಿಕಾ, ಲಕ್ಷ್ಮಿ, ಸಹಾಯಕಿ ಜಯಂತಿ ಮುಂತಾದವರಿದ್ದರು.

 

coorg buzz
coorg buzz