ಕುಶಾಲನಗರ : ತಾಲೂಕು ಆರೋಗ್ಯಾಧಿಕಾರಿ ಕಚೇರಿಯಲ್ಲಿ ಸಮುದಾಯ ಆರೋಗ್ಯ ಕೇಂದ್ರ ಕುಶಾಲನಗರದ ಸಹಯೋಗದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ನಡೆಯಿತು.
ತಾಲೂಕು ಆರೋಗ್ಯಾಧಿಕಾರಿ ಡಾ. ಇಂದುಧರ್ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಮೊದಲ ಹೆರಿಗೆಯ ಬಳಿಕ ತಾಯಂದಿರಿಗೆ ಹಾಲುಣಿಸುವ ಪ್ರಕ್ರಿಯೆ ಬಗ್ಗೆ ಸಂಪೂರ್ಣವಾಗಿ ತಿಳಿದಿರುವುದಿಲ್ಲ. ಈ ಬಗ್ಗೆ ಜಾಗೃತಿ ಮೂಡಿಸಿ ತಾಯಂದಿರನ್ನು ಹಾಲುಣಿಸಲು ಪ್ರೇರೇಪಿಸಲು ಮತ್ತು ತಾಯಿ ಮತ್ತು ಮಗುವಿಗೆ ಆಗುವ ಪ್ರಯೋಜನವನ್ನು ಉತ್ತೇಜಿಸಲು ಸಪ್ತಾಹವನ್ನು ಆಚರಿಸಲಾಗುತ್ತದೆ. ಇದು ಕೇವಲ ಒಂದು ವಾರದ ಆಚರಣೆಯಾಗಬಾರದು. ಪ್ರತಿ ದಿನವೂ ಈ ಬಗ್ಗೆ ಕಾಳಜಿ ಹೊಂದಬೇಕೆಂದು ಅಭಿಪ್ರಾಯಪಟ್ಟರು.
ಸಮುದಾಯ ಆರೋಗ್ಯ ಕೇಂದ್ರದ ಶಸ್ತ್ರಚಿಕಿತ್ಸಕ ಡಾಕ್ಟರ್ ಮಧುಸೂದನ್ ಮಾತನಾಡಿ, ಸ್ತನ್ಯಪಾನವು ಮಗುವನ್ನು ಸೋಂಕಿನಿಂದ ರಕ್ಷಿಸುತ್ತದೆ. ಅತಿಸಾರ, ಉಸಿರಾಟದ ಸೋಂಕು ಇತರೆ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ತಾಯಂದಿರಲ್ಲಿ ಸ್ತನ ಮತ್ತು ಅಂಡಾಶಯದ ಕ್ಯಾನ್ಸರ್ನಂತಹ ಅಪಾಯವನ್ನು ಕಡಿಮೆ ಮಾಡುತ್ತದೆ. ಹೆರಿಗೆಯ ನಂತರ ತೂಕ ಇಳಿಸಿಕೊಳ್ಳಲು ಸಹಾಯಮಾಡುತ್ತದೆ ಎಂದು ಮಾಹಿತಿ ಕೊಟ್ಟರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿ, ಬೆಳಗ್ಗೆ ಕೆಲಸಕ್ಕೆ ತೆರಳುವ ಸಂದರ್ಭದಲ್ಲಿ ಮತ್ತು ಒತ್ತಡದಲ್ಲಿದ್ದಾಗ ನೋವಿನಿಂದ ಹಾಲುಣಿಸುವುದು, ಕಡಿಮೆ ಹಾಲುಣಿಸುವುದು, ನಿದ್ದೆಯಲ್ಲಿ, ಮಲಗಿ ಹಾಲುಣಿಸುವುದು ಮಾಡಬಾರದು. ಔಷಧಿ ರೂಪದಲ್ಲಿ ಯಾವುದೇ ಸೊಪ್ಪಿನ ರಸಗಳನ್ನು ಮಕ್ಕಳಿಗೆ ಕುಡಿಸಬಾರದು. ಶಿಶು ಮರಣ ಪ್ರಮಾಣ ತಗ್ಗಿಸುವಲ್ಲಿ ಸ್ತನ್ಯಪಾನವು ಮಹತ್ತರವಾದದ್ದು. ಹಾಲುಣಿಸಿದ ನಂತರ ಮಕ್ಕಳಿಗೆ ಹೊಟ್ಟೆಯಲ್ಲಿ ಗಾಳಿ ನಿಲ್ಲದಂತೆ ತೇಗಿಸುವುದು ಮುಖ್ಯ ಎಂದರು.
ಮಕ್ಕಳ ತಜ್ಞ ಡಾಕ್ಟರ್ ಶಿವಕುಮಾರ್ ಮಾತನಾಡಿದರು. ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ಇಂದಿರಾ, ಆಶಾ ಕಾರ್ಯಕರ್ತರು, ಗರ್ಭಿಣಿಯರು, ಬಾಣಂತಿಯರು ಪಾಲ್ಗೊಂಡಿದ್ದರು.




