ಬೆಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದಾಗಿ ವ್ಯಕ್ತಿಯೊಬ್ಬ ಹೇಳಿದ ವಿಚಾರ ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು. ಈ ವಿಚಾರವಾಗಿ ತನಿಖೆ ನಡೆಸಲು ವಿಶೇಷ ತನಿಖಾ ತಂಡ(SIT)ವನ್ನು ರಾಜ್ಯ ಸರ್ಕಾರ ರಚಿಸಿದೆ.
ಪೊಲೀಸ್ ಮಹಾ ನಿರ್ದೇಶಕ ಡಾ. ಪ್ರಣವ್ ಮೊಹಾಂತಿ ಈ ತಡದ ಮುಖ್ಯಸ್ಥರಾಗಿರಲಿದ್ದು, ಸದಸ್ಯರಾಗಿ ಉಪ ಪೊಲೀಸ್ ಮಹಾನಿರ್ದೇಶಕ ಎಂ.ಎಂ. ಅನುಚೇತ್, ಉಪ ಪೊಲೀಸ್ ಆಯುಕ್ತರಾದ ಸೌಮ್ಯಲತಾ, ಪೊಲೀಸ್ ಅಧೀಕ್ಷ ಜಿತೇಂದ್ರ ಕುಮಾರ್ ದಯಾಮ ಇರಲಿದ್ದಾರೆ.
ಪ್ರಕರಣದ ತನಿಖೆಯ ಪ್ರಗತಿಯನ್ನು ಆಗಿಂದಾಗ್ಗೆ ಡಿಜಿ ಮತ್ತು ಐಜಿಪಿಗೆ ವರದಿ ಮಾಡಬೇಕು. ಜೊತೆಗೆ ಶೀಘ್ರದಲ್ಲಿ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಲಾಗಿದೆ.
ಪ್ರಕರಣದ ಹಿನ್ನೆಲೆ : ಕೆಲವು ದಿನದ ಹಿಂದೆ ವ್ಯಕ್ತಿಯೊಬ್ಬ ತಾನು ಈ ಹಿಂದೆ ಇಲ್ಲಿ ಕೆಲಸ ಮಾಡಿಕೊಂಡಿದ್ದು. ನೂರಾರು ಶವಗಳನ್ನು ಈ ವ್ಯಾಪ್ತಿಯಲ್ಲಿ ಹೂತು ಹಾಕಿದ್ದೇನೆ. ಇದೀಗ ನನಗೆ ಪಾಪ ಪ್ರಜ್ಞೆ ಕಾಡುತ್ತಿದೆ. ಅವಕಾಶ ನೀಡಿದರೆ ಹೂಡಿಟ್ಟ ಶವಗಳ ಕಳೇಬರವನ್ನು ಹೊರತೆಗೆದು ತೋರಿಸುತ್ತೇನೆ ಎಂದು ಹೇಳಿದ್ದ. ನಂತರದಲ್ಲಿ ವಕೀಲರ ಸಮ್ಮುಖದಲ್ಲಿ ಪೊಲೀಸ್ ಠಾಣೆ ಹಾಗೂ ನ್ಯಾಯಾಲಯದಲ್ಲೂ ಹೇಳಿಕೆ ದಾಖಲಿಸಿದ್ದ. ಈ ಬೆಳವಣಿಗೆ ಸಾಕಷ್ಟು ಸಂಚಲನಕ್ಕೆ ಕಾರಣವಾಗಿತ್ತು.
ಇದಾದ ನಂತತರದಲ್ಲಿ ಈ ಪ್ರಕರಣವನ್ನು ಸಮಗ್ರ ತನಿಖೆ ನಡೆಸಬೇಕು. ವಿಶೇಷ ತನಿಖಾ ತಂಡ ರಚಿಸಬೇಕೆಂಬ ಆಗ್ರಹ ಕೇಳಿಬಂದಿತ್ತು. ಇದೀಗ ಸರ್ಕಾರ ಆಗ್ರಹಕ್ಕೆ ಮಣಿದು SIT ರಚಿಸಿದೆ.