ಮಡಿಕೇರಿ: ಯುವ ಜನರು ಮದ್ಯ ಹಾಗೂ ಮಾದಕ ವಸ್ತುಗಳ ಚಟಕ್ಕೆ ತುತ್ತಾಗದೆ ಉತ್ತಮ ಜೀವನ ಕಟ್ಟಿಕೊಳ್ಳಲು ಪ್ರಯತ್ನಿಸಬೇಕು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರರಾಜ್ ಅವರು ಸಲಹೆ ಮಾಡಿದ್ದಾರೆ. ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ವತಿಯಿಂದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಇವರ ಸಹಕಾರದಲ್ಲಿ ‘ಮದ್ಯ ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮ’ ಕುರಿತು ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ (FMC) ಕಾಲೇಜಿನಲ್ಲಿ ಸೋಮವಾರ ನಡೆದ ‘ಜನಜಾಗೃತಿ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಯುವಜನರು ಮದ್ಯ ಹಾಗೂ ಮಾದಕ ವಸ್ತುಗಳ ದುಶ್ಚಟದಿಂದ ದೂರ ಇರಬೇಕು. ಯಾವುದೇ ಕಾರಣಕ್ಕೂ ಮಾದಕ ವಸ್ತುಗಳಿಗೆ ಬಲಿಯಾಗಬಾರದು ಎಂದು ತಿಳಿಸಿದರು. ಮದ್ಯ ಹಾಗೂ ಮಾದಕ ವಸ್ತುಗಳಿಗೆ ತುತ್ತಾದಲ್ಲಿ ಮಾನಸಿಕ ಸ್ಥಿಮಿತತೆ ಕಳೆದುಕೊಳ್ಳಬೇಕಾಗುತ್ತದೆ. ಇದರಿಂದ ಕುಟುಂಬದ ನಿರ್ವಹಣೆ ಕಷ್ಟವಾಗಲಿದೆ. ಜೊತೆಗೆ ಸಮಾಜದಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳಲು ಅಸಾಧ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಮಾದಕ ವಸ್ತುಗಳ ಕಳ್ಳ ಸಾಗಾಣಿಕೆ ಕಂಡುಬಂದಲ್ಲಿ ಕಠಿಣ ಶಿಕ್ಷೆ ಎದುರಿಸಬೇಕಾಗುತ್ತದೆ. ಆದ್ದರಿಂದ ಮದ್ಯ ಹಾಗೂ ಮಾದಕ ವಸ್ತುಗಳಿಗೆ ಯಾರೂ ಸಹ ಬಲಿಯಾಗಬಾರದು. ಉತ್ತಮ ಸಮಾಜ ಕಟ್ಟಲು ಎಲ್ಲರೂ ಕೈಜೋಡಿಸಬೇಕಿದೆ ಎಂದು ಕೆ.ಎಸ್.ಸುಂದರರಾಜ್ ಅವರು ಕರೆ ನೀಡಿದರು. ರಾಷ್ಟ್ರದಲ್ಲಿ ಮಾದಕ ವಸ್ತುಗಳಿಗೆ ಹೆಚ್ಚಾಗಿ ಉತ್ತರಪ್ರದೇಶ, ಮಹಾರಾಷ್ಟ್ರ, ಪಂಚಾಬ್ ಹಾಗೆಯೇ ಕರ್ನಾಟಕದಲ್ಲಿಯೂ ಸಹ ಕಂಡು ಬರುತ್ತಾರೆ. ಆದ್ದರಿಂದ ಮಾದಕ ವಸ್ತುಗಳ ಚಟಕ್ಕೆ ದಾಸರಾಗಬಾರದು ಎಂದು ಅವರು ತಿಳಿಸಿದರು.
ಮಾದಕ ವಸ್ತುಗಳ ಮಾರಾಟ ಮತ್ತು ಸಾಗಾಣಿಕೆ ಸಂಬಂಧ ಕಳೆದ ಮೂರು ವರ್ಷದಲ್ಲಿ 200 ಪ್ರಕರಣಗಳು ದಾಖಲಾಗಿದ್ದು, 400 ಕ್ಕೂ ಹೆಚ್ಚು ಜನರನ್ನು ದಸ್ತಗಿರಿ ಮಾಡಿ ನಿಯಮಾನುಸಾರ ಕ್ರಮಕೈಗೊಳ್ಳಲಾಗಿದೆ ಎಂದು ಸುಂದರ್ ರಾಜ್ ಅವರು ವಿವರಿಸಿದರು. ದುಶ್ಚಟಕ್ಕೆ ಯಾರೂ ಸಹ ಬಲಿಯಾಗಬಾರದು. ಭವಿಷ್ಯವನ್ನು ರೂಪಿಸಿಕೊಳ್ಳುವತ್ತ ಗಮನಹರಿಸಬೇಕು. ಮಾದಕ ವಸ್ತುಗಳ ಮಾರಾಟ ಕಂಡುಬಂದಲ್ಲಿ 112 ಕ್ಕೆ ಮಾಹಿತಿ ನೀಡಬೇಕಾಗಿ ಇದೇ ಸಂದರ್ಭದಲ್ಲಿ ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ.ಸತೀಶ್ ಕುಮಾರ್ ಅವರು ಮಾತನಾಡಿ ಯುವಜನರು ಸ್ನೇಹಿತರ ಜೊತೆ ಸೇರಿ ದುಶ್ಚಟಕ್ಕೆ ಬಲಿಯಾಗಬಾರದು. ಕೆಲವೊಂದು ಸಂದರ್ಭದಲ್ಲಿ ಒತ್ತಾಯಪೂರ್ವಕವಾಗಿ ಚಟಕ್ಕೆ ಬಲಿಯಾಗುವಂತೆ ಮಾಡುತ್ತಾರೆ. ಈ ಬಗ್ಗೆ ಎಚ್ಚರವಹಿಸಬೇಕು. ಒಂದು ಬಾರಿ ಚಟಕ್ಕೆ ತುತ್ತಾದಲ್ಲಿ ಬಿಡಿಸಿಕೊಳ್ಳುವುದು ಕಷ್ಟಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ಮಾದಕ ವಸ್ತುಗಳು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಶ್ವಾಸಕೋಶ, ಹೃದಯ ಸಂಬಂಧಿ ಖಾಯಿಲೆ, ಲಿವರ್ ಹಾಗೂ ಕಿಡ್ನಿ ಸಮಸ್ಯೆಗಳು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟಾಗಿ ಸಾವು ಸಂಭವಿಸುವ ಸಾಧ್ಯತೆ ಹೆಚ್ಚಿದೆ ಎಂದು ತಿಳಿಸಿದರು. 14, 15, 16 ನೇ ವರ್ಷದ ಯುವಜನರು ಚಟಕ್ಕೆ ಬಲಿಯಾಗುವುದು ಹೆಚ್ಚಾಗಿ ಕಂಡು ಬರುತ್ತಿದೆ. ಆದ್ದರಿಂದ ಯಾವುದೇ ರೀತಿಯ ದುಶ್ಚಟಗಳಿಗೆ ಬಲಿಯಾಗಬಾರದು ಕಿವಿಮಾತು ಹೇಳಿದರು.
ಸೈಬರ್ ಕ್ರೈಂ ವಿಭಾಗದ ಡಿವೈಎಸ್‍ಪಿ ರವಿ ಅವರು ಮಾತನಾಡಿ ಮದ್ಯ ಹಾಗೂ ಮಾದಕ ವಸ್ತುಗಳ ದುಶ್ಚಟಕ್ಕೆ ಬಲಿಯಾದಲ್ಲಿ ಕುಟುಂಬದ ನಿರ್ವಹಣೆ ಕಷ್ಟವಾಗಲಿದೆ. ಇದರಿಂದ ಆರ್ಥಿಕ ಪರಿಸ್ಥಿತಿ ಮತ್ತು ಆರೋಗ್ಯ ಕೆಡಲಿದೆ. ಹಾಗೆಯೇ ಚಟಕ್ಕೆ ದಾಸರಾದಲ್ಲಿ ಅತ್ಯಾಚಾರ, ಕಳ್ಳತನ, ಮಾನಸಿಕ ವೇದನೆಗೆ ಒಳಗಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲರಾದ ಮೇ.ಡಾ.ಬಿ.ರಾಘವ ಅವರು ಮಾತನಾಡಿ ಸಮಾಜದ ಅಭಿವೃದ್ಧಿಗೆ ಯುವಜನರ ಪಾತ್ರ ದೊಡ್ಡದಿದೆ. ಆದ್ದರಿಂದ ಕೆಟ್ಟ ಚಟಗಳಿಗೆ ಒಳಗಾಗದೆ ಸಮಾಜದ ಅಭಿವೃದ್ಧಿಗೆ ಯುವಜನರು ಕೈಜೋಡಿಸಬೇಕು ಎಂದರು. ಸುಸ್ಥಿರ ಬದುಕಿನಿಂದ ಸುಂದರ ಬದುಕು ಕಟ್ಟಿಕೊಳ್ಳಬೇಕು. ಆರೋಗ್ಯಯುತ ಜೀವನ ನಡೆಸಬೇಕು. ಯಾವುದೇ ಕಾರಣಕ್ಕೂ ದಾರಿ ತಪ್ಪದೆ ಜವಾಬ್ದಾರಿಯುತ ಪ್ರಜೆಯಾಗಿ ನಡೆದುಕೊಳ್ಳಬೇಕು ಎಂದು ಸಲಹೆ ಮಾಡಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮನೋವೈದ್ಯರಾದ ಡಾ.ಡೆವಿನ್ ಕರ್ಕಡ ಅವರು ಮಾತನಾಡಿ ಮನಸ್ಸಿನ ಚಂಚಲತೆಗೆ ಅವಕಾಶ ಮಾಡದೆ ಒಳ್ಳೆಯ ಪುಸ್ತಕ ಓದುವುದು, ಸಂಗೀತ ಕೇಳುವುದು ಜೊತೆಗೆ ದುಡಿಮೆಯಲ್ಲಿ ತೊಡಗಿಸಿಕೊಳ್ಳುವುದು ಅತೀ ಮುಖ್ಯವಾಗಿದೆ. ಇದರಿಂದ ಬೇರೇಡೆಗೆ ಮನಸ್ಸು ಸೆಳೆಯುವುದಿಲ್ಲ. ಆದ್ದರಿಂದ ಒಳ್ಳೆಯ ಕೆಲಸ ಮಾಡಿದಲ್ಲಿ ಉತ್ತಮ ಬದುಕು ನಡೆಸಬಹುದು ಎಂದರು. ಜೀವನದಲ್ಲಿ ಒಂದಲ್ಲ ಒಂದು ರೀತಿ ದೌರ್ಬಲ್ಯಕ್ಕೆ ಒಳಗಾಗಿರುತ್ತಾರೆ. ದೌರ್ಬಲ್ಯ ಬಳಸಿಕೊಂಡು ಹಾಳು ಮಾಡಲು ಹೋಗುತ್ತಾರೆ. ಆದ್ದರಿಂದ ಯಾವುದೇ ಚಟಕ್ಕೆ ಬಲಿಯಾಗದೆ ಮುನ್ನೆಚ್ಚರವಹಿಸಬೇಕು. ಪ್ರತಿಯೊಬ್ಬರಲ್ಲಿಯೂ ಗುರಿ ಇರಬೇಕು. ಅದನ್ನು ಸಾಧಿಸಬೇಕು ಎಂದರು.
ಕಲಾವಿದ ಇ.ರಾಜು ಮತ್ತು ತಂಡದವರು ಮದ್ಯ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮ ಕುರಿತು ಜಾಗೃತಿ ಗೀತೆ ಹಾಡಿದರು. ಹಾಗೆಯೇ ಈ ಕುರಿತು ಬೀದಿನಾಟಕ ಪ್ರದರ್ಶಿಸಿದರು. ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಎನ್‍ಎಸ್‍ಎಸ್ ಅಧಿಕಾರಿಗಳಾದ ಡಾ.ಶೈಲಾಶ್ರೀ, ಅಲೋಕ್ ವಿಜಯ್, ಇತರರು ಇದ್ದರು. ವಿದ್ಯಾರ್ಥಿನಿ ಸಪ್ನಾ ಮತ್ತು ತಂಡದವರು ಪ್ರಾರ್ಥಿಸಿದರು, ನಿರೂಪಿಸಿದರು, ವಂದಿಸಿದರು.