ಉಡುಪಿ : ಕನ್ನಡ ರಂಗಭೂಮಿ ಹಾಗೂ ಚಿತ್ರರಂಗದ ಪ್ರಖ್ಯಾತ ಹಾಸ್ಯ ನಟ ರಾಜು ತಾಳಿಕೋಟೆ(58) ಹೃದಯಾಘಾತದಿಂದ ನಿಧನರಾಗಿದ್ದಾರೆ.
ಶೈನ್ ಶೆಟ್ಟಿ ನಟನೆಯ ಚಿತ್ರವೊಂದರ ಚಿತ್ರೀಕರಣಕ್ಕಾಗಿ ಉಡುಪಿಗೆ ಆಗಮಿಸಿದ್ದರು. ನಿನ್ನೆ ಚಿತ್ರೀಕರಣ ಮುಗಿಸಿ ವಿಶ್ರಾಂತಿಯಲ್ಲಿದ್ದಾಗ ಹೃದಯಾಘಾತವಾಗಿದೆ. ತಕ್ಷಣ ಉಡುಪಿಯ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ. ಈ ಹಿಂದೊಮ್ಮೆ ಹೃದಯಾಘಾತಕ್ಕೊಳಗಾಗಿದ್ದ ಅವರಿಗೆ ಸ್ಟಂಟ್ ಅಳವಡಿಸಲಾಗಿತ್ತು ಎಂದು ತಿಳಿದುಬಂದಿದೆ. ವಿಜಯಪುರ ಜಿಲ್ಲೆಯ ಅವರ ಹುಟ್ಟೂರಿಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.
ರಾಜು ತಾಳಿಕೋಟೆ ಅವರ ಬಗ್ಗೆ ಒಂದಷ್ಟು ಮಾಹಿತಿ.
ರಾಜು ತಾಳಿಕೋಟೆ ಅವರ ಮೂಲ ಹೆಸರು ರಾಜೆಸಾಬ್ ಮಕ್ತುಂಸಾಬ್ ಯಂಕಂಚಿ. 1965ರಲ್ಲಿ ಜನಿಸಿದ ಅವರು ತನ್ನ ಹುಟ್ಟೂರಿನ ಹೆಸರನ್ನು ತನ್ನ ಹೆಸರಿನ ಜೊತೆಗೆ ಬಳಸಿಕೊಂಡು ಖ್ಯಾತರಾದರು. ಪೋಷಕರು ಕೂಡಾ ರಂಗಭೂಮಿ ಕಲಾವಿದರಾಗಿದ್ದ ಕಾರಣ ಇವರು ಬಾಲ್ಯದಲ್ಲೇ ರಂಗಭೂಮಿಯತ್ತ ಆಸಕ್ತರಾದರು. ಜೀವನದಲ್ಲಿ ಹಲವು ತಿರುವುಗಳನ್ನು ಕಂಡು ಜೀವನ ನಿರ್ವಹಣೆಗಾಗಿ ಹೋಟೆಲ್, ಲಾರಿ ಕ್ಲೀನ್ ಆಗಿಯೂ ಕೆಲಸ ಮಾಡಿದವರು. ಅವರ ವಿಶೇಷ ಪ್ರತಿಭೆ, ಆಸಕ್ತಿಯಿಂದಾಗಿ ಜೀವನದಲ್ಲಿ ನಟನೆ ಕೈ ಹಿಡಿಯಿತು.
‘ಕಲಿಯುಗದ ಕುಡುಕ’ ನಾಟಕದ ಮೂಲಕ ರಾಜು ತಾಳಿಕೋಟೆ ರಾಜ್ಯಾದ್ಯಂತ ಪ್ರಖ್ಯಾತಿ ಗಳಿಸಿದರು. ತಮ್ಮದೇ ಆದ ವಿಭಿನ್ನ ಶೈಲಿಯ ನಟನೆ, ಡೈಲಾಗ್‌ಗಳ ಮೂಲಕ ಜನಮಾನಸದಲ್ಲಿ ಅಚ್ಚು ಒತ್ತಿದ್ದರು.
‘ಹೆಂಡತಿ ಅಂದರೆ ಹೆಂಡತಿ’, ‘ಪಂಜಾಬಿ ಹೌಸ್’, ‘ಮನಸಾರೆ’, ‘ಪಂಚರಂಗಿ’, ‘ರಾಜಧಾನಿ’, ‘ಲೈಫು ಇಷ್ಟೇನೇ’, ‘ಅಲೆಮಾರಿ’, ‘ಮೈನಾ’, ‘ಟೋಪಿವಾಲಾ’ ಮುಂತಾದ ಸಿನಿಮಾಗಳಲ್ಲಿ ರಾಜು ನಟಿಸಿದ್ದರು. ‘ಬಿಗ್ ಬಾಸ್ ಕನ್ನಡ ಸೀಸನ್ 7’ ರಿಯಾಲಿಟಿ ಶೋನಲ್ಲಿ ಕೂಡಾ ಸ್ಪರ್ಧಿಯಾಗಿ ಪಾಲ್ಗೊಂಡಿದ್ದರು. ಪ್ರಸ್ತುತ ಧಾರವಾಡ ರಂಗಾಯಣದ ನಿರ್ದೇಶಕರಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದರು.



