ಭಾಗಮಂಡಲ : ಇಲ್ಲಿನ ಗಜಾನನ ಯುವಕ ಸಂಘ ವತಿಯಿಂದ ಗ್ರಾಮ ವ್ಯಾಪ್ತಿಯ ಜನರ ಅನುಕೂಲಕ್ಕಾಗಿ ಆಂಬುಲೆನ್ಸ್ ಸೇವೆ ಆರಂಭಿಸಲಾಗಿದೆ.
ನೂತನ ಆಂಬುಲೆನ್ಸ್‌ಗೆ ಭಾಗಮಂಡಲ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಹ್ಯಾರಿಸ್ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು ಸಂಘದ ಕಾರ್ಯಚಟುವಟಿಕೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಗಜಾನನ ಯುವಕ ಸಂಘ ಸಮಾಜಕ್ಕೆ ಅನುಕೂಲವಾಗುವ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ. ಯುವಕರು ಇನ್ನಷ್ಟು ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಗ್ರಾಮಸ್ಥರು ಕೂಡಾ ಸಹಕಾರ ನೀಡಬೇಕೆಂದರು.
ಸಂಘದ ಅಧ್ಯಕ್ಷ ಗೌರೀಶ್ ರೈ ಮಾತನಾಡಿ, 6.5 ಲಕ್ಷ ರೂ. ವೆಚ್ಚದಲ್ಲಿ ಸಂಘದ ವತಿಯಿಂದ ಆಂಬುಲೆನ್ಸ್ ಖರೀದಿಸಲಾಗಿದೆ. ಬಡ ವರ್ಗದ ಜನರ ಅನುಕೂಲಕ್ಕಾಗಿ ಈ ಸೇವೆ ಆರಂಭಿಸಲಾಗಿದೆ. ಅರ್ಥಿಕವಾಗಿ ದುರ್ಬಲರಿಗೆ ಉಚಿತವಾಗಿ ಸೇವೆ ನೀಡಲಾಗುವುದೆಂದು ತಿಳಿಸಿದರು. ಯುವಕ ಸಂಘ ಆರಂಭವಾಗಿ 4 ವರ್ಷವಾಗಿದೆ. ಈ ಅವಧಿಯಲ್ಲಿ ಹಲವು ಸಮಾಜಮುಖಿ ಕಾರ್ಯ ಮಾಡಿ ಜನರ ಮೆಚ್ಚುಗೆ ಹಾಗೂ ವಿಶ್ವಾಸ ಗಳಿಸಿದ್ದೇವೆ. ಮುಂದೆಯೂ ಕೂಡಾ ಸಾಮಾಜಿಕ ಕಾರ್ಯಗಳನ್ನು ಮುಂದುವರೆಸಲಿದ್ದೇವೆಂದು ತಿಳಿಸಿದರು.
ಭಾಗಮಂಡಲ ಭಗಂಡೇಶ್ವರ ಸೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಚೆಟ್ಟಿಮಾನಿವರೆಗೆ ವಾಹನ ಜಾಥಾ ಸಾಗಿ ಆರೋಗ್ಯದ ಅರಿವು ಮೂಡಿಸಲಾಯಿತು. ಖಜಾಂಚಿ ಮನೋಜ್, ಕಾರ್ಯದರ್ಶಿ ಅನಂತ್, ನಿರ್ದೇಶಕರಾದ ಜಯಂತ್, ಸಂತೋಷ್, ಕೀರ್ತನ್ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.
