ಕೇರಳದ ತಿರುವನಂತಪುರದಿಂದ ಕೊಡಗಿಗೆ ಅಕ್ರಮವಾಗಿ ಕೋಟ್ಯಾಂತರ ರೂ. ಮೌಲ್ಯದ ತಿಮಿಂಗಿಲ ವಾಂತಿಯನ್ನು (Ambergris) ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಭೇದಿಸಿರುವ ಪೊಲೀಸರು ಮಾಲು ಸಮೇತ 10 ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ. ಈ ಘಟನೆಯು ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಬೇಟೋಳಿ ಗ್ರಾಮದಲ್ಲಿ ನಡೆದಿದೆ.
ಕೇರಳದ ತಿರುನಂತಪುರಂನಿಂದ ತಂದು ಆಂಧ್ರಪ್ರದೇಶ ಅಥವಾ ಬೆಂಗಳೂರಿನಲ್ಲಿ (Bengaluru) ಮಾರಾಟ ಮಾಡಲು ಯತ್ನಿಸಿದ್ದ ಆರೋಪಿಗಳನ್ನು ಖಚಿತ ಮಾಹಿತಿ ಮೇರೆಗೆ ಡಿವೈಎಸ್ಪಿ ಮಹೇಶ್ ಕುಮಾರ್ ಹಾಗೂ ವೃತ್ತ ನಿರೀಕ್ಷಕರಾದ ಅನುಪ್ ಮಾದಪ್ಪ ರವರ ನೇತೃತ್ವದ ತಂಡ ಹಾಗೂ ಅಪರಾಧ ಪತ್ತೆದಳ ತಂಡ ಏಪ್ರಿಲ್ 10 ರಂದು ಬೆಟೋಳಿ ಗ್ರಾಮದ ಹೆಗ್ಗಳ ಜಂಕ್ಷನ್ ಬಳಿ ದಾಳಿ ನಡೆಸಿ ಅಂಬರ್ ಗ್ರೀಸ್ ಸಾಗಿಸುತ್ತಿದ್ದ ಕೇರಳ ಮೂಲದ ಹತ್ತು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಳಿಕ ಬಂಧಿತರಿಂದ 10 ಕೋಟಿ ರೂ. ಮೌಲ್ಯದ 10 ಕೆ.ಜಿ 390 ಗ್ರಾಂ ತೂಕದ ತಿಮಿಂಗಿಲ ವಾಂತಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಶಂಶುದ್ದೀನ್ (45), ಎಂ.ನವಾಜ್ (54 ವರ್ಷ), ವಿ.ಕೆ ಲತೀಶ್ (53), ಜೇಶ್.ವಿ (40), ಪ್ರಶಾಂತ್.ಟಿ (52), ಎ.ವಿ ಶಂಶುದ್ದೀನ್ (48), ಬಾಲಚಂದ್ರನಾಯಕ್ (55), ಕೆ.ಕೆ ಜೋಬಿಸ್ (33) ವರ್ಷ ಬಂಧಿತ ಆರೋಪಿಗಳು.
ಅಂಬರ್ ಗ್ರೀಸ್ ಅಥವಾ ತಿಮಿಂಗಿಲ ವಾಂತಿ ಎನ್ನುವುದು ಮೇಣದಂಥ ವಸ್ತುವಾಗಿದೆ. ಇದನ್ನು ಸುಗಂಧ ದ್ರವ್ಯಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಕಚ್ಚಾವಸ್ತುವಾಗಿದ್ದಾಗಲೂ ಅಂಬರ್ ಗ್ರೀಸ್ ಕೊಂಚ ಸುವಾಸನೆ ಬೀರುವಂಥದ್ದಾಗಿದೆ. ಕೆಲವು ದೇಶಗಳಲ್ಲಿ ಕಾಮೋತ್ತೇಜಕ ವಸ್ತುಗಳ ತಯಾರಿಕೆಯಲ್ಲೂ ಇದನ್ನ ಬಳಸಲಾಗುತ್ತದೆ. ತಿಮಿಂಗಿಲ ವಾಂತಿ ಸಿಗುವುದು ಬಹಳ ಅಪರೂಪ.
ತಿಮಿಂಗಿಲಗಳು ಸಮುದ್ರದಲ್ಲಿ ವಾಂತಿ ಮಾಡಿಕೊಳ್ಳುವುದು ಬಹಳ ಅಪರೂಪ ಅಲ್ಲದೇ ಜನಸಾಮಾನ್ಯರಿಗೆ ಸಿಗುವುದು ಕಡಿಮೆ. ಇದರಿಂದ ಈ ವಸ್ತುವಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇರುವುದರಿಂದ ಕಳ್ಳಸಾಗಣೆದಾರರು ಅಂಬರ್ ಗ್ರೀಸ್‌ಗಾಗಿ ಸಮುದ್ರಗಳಿಗೆ ದಾಂಗುಡಿ ಇಡುವುದನ್ನು ತಪ್ಪಿಸಲು ಬಹುತೇಕ ದೇಶಗಳು ಮಾರಾಟವನ್ನು ನಿಷೇಧಿಸಿವೆ. ಇದರಿಂದ ಇದು ಕಳ್ಳಸಾಗಣೆಯಾಗುತ್ತಿದೆ.