ಮಡಿಕೇರಿ : ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿರುವ ಕೊಡಗಿನ ಹಿರಿಯ ಪತ್ರಕರ್ತ, ಪ್ರತಿನಿಧಿ ಪತ್ರಿಕೆಯ ಸ್ಥಾನಿಕ ಸಂಪಾದಕ ಅಜ್ಜಮಾಡ ರಮೇಶ್ ಕುಟ್ಟಪ್ಪ ಅವರಿಗೆ Coorg Buzz ಬಳಗದಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
ಕೂರ್ಗ್ ಬಝ್ ಸ್ಟುಡಿಯೋದಲ್ಲಿ ಸರಳವಾಗಿ ನಡೆದ ಕಾರ್ಯಕ್ರಮದಲ್ಲಿ ಬಳಗದ ಸದಸ್ಯರು ಫಲ ತಾಂಬೂಲ ನೀಡಿ, ಶಾಲು ಹೊದಿಸಿ ಅಭಿನಂದಿಸಿದರು. ರಮೇಶ್ ಕುಟ್ಟಪ್ಪ ಕಳೆದ ಅವಧಿಯಲ್ಲೂ ರಾಜ್ಯ ಸಂಘದ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಇದೀಗ ಎರಡನೇ ಅವಧಿಗೆ ಸ್ಪರ್ಧೆ ಬಯಸಿ ಸ್ಪರ್ಧಿಸಿದ್ದು, ಪ್ರತಿಸ್ಪರ್ಧಿಗಳು ಇಲ್ಲದ ಕಾರಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ವೇಳೆ ಮಾತನಾಡಿದ ರಮೇಶ್ ಕುಟ್ಟಪ್ಪ, ಅವಿರೋಧ ಆಯ್ಕೆಗೆ ಕಾರಣಕರ್ತರಾದ ಎಲ್ಲರಿಗೂ ಧನ್ಯವಾದ ಹೇಳಿದರು. ಉಪಾಧ್ಯಕ್ಷನಾಗಿ ಸಂಘಟನೆಯಲ್ಲಿ ಮುಂದುವರೆಯಲು ಎರಡನೇ ಬಾರಿಗೆ ಅವಕಾಶ ಸಿಕ್ಕಿದೆ. ಕಟ್ಟಕಡೆಯ ಪತ್ರಕರ್ತರ ಧ್ವನಿಯಾಗುತ್ತೇನೆ. ಜೊತೆಗೆ ಸಂಘ ಕೂಡಾ ರಾಜ್ಯದ ಪತ್ರಕರ್ತರ ಧ್ವನಿಯಾಗಿ ಕೆಲಸ ಮಾಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಚುನಾವಣೆಗೆ ಸ್ಪರ್ಧಿಸಲು ಮುಂದಾದ ಸಂದರ್ಭದಲ್ಲಿ ನನ್ನ ಬಗ್ಗೆ ಪರಿಚಯದ ವಿಡಿಯೋವನ್ನು ಕೂರ್ಗ್ ಬಝ್ ಮಾಡಿಕೊಟ್ಟಿತ್ತು. ಇದು ಸಂಘದ ಸದಸ್ಯರಿಗೆ ನನ್ನ ಬಗ್ಗೆ ತಿಳಿದುಕೊಳ್ಳಲು ನೆರವಾಯಿತು ಎಂದು ಸ್ಮರಿಸಿದರು. ಅಧಿಕೃತವಾಗಿ ಪ್ರಮಾಣಪತ್ರ ನವೆಂಬರ್ 09ಕ್ಕೆ ಸಿಗಲಿದೆ. ಅದಕ್ಕೂ ಮುನ್ನ ಕೂರ್ಗ್ ಬಝ್ ಮೊದಲ ಸನ್ಮಾನ ಮಾಡಿದೆ ಎಂದರು.
ಕೂರ್ಗ್ ಬಝ್ ಬಳಗದ ಕಿಶೋರ್ ರೈ ಕತ್ತಲೆಕಾಡು, ವಿಜಯ್, ಸುಧಾಮ ಪೆರಾಜೆ, ಗಾಯತ್ರಿ ಚೆರಿಯಮನೆ, ಶಾಂತಿ ಈ ಸಂದರ್ಭ ಉಪಸ್ಥಿತರಿದ್ದರು.




