ಅರೆಭಾಷೆಯು ಜಾತಿ, ಸಮುದಾಯ, ಗಡಿಯನ್ನು ಮೀರಿ ಬೆಳೆಯುತ್ತಿದ್ದು, ಇದನ್ನು ಇನ್ನಷ್ಟು ವಿಸ್ತರಿಸಲು ಗಡಿನಾಡು ಉತ್ಸವ ಸೇರಿದಂತೆ ವಿನೂತನ ಕಾರ್ಯಕ್ರಮಗಳನ್ನು ಕರ್ನಾಟಕ ಅರೆಭಾಷೆ (Arebhashe) ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ನುಡಿದರು. ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದಲ್ಲಿರುವ ಕುಡೆಕಲ್ಲು ಐನ್‍ಮನೆಯಲ್ಲಿ ನಡೆದ ಅರೆಭಾಷಿಕರ ಐನ್‍ಮನೆ ಐಸಿರಿ (Ainmane Aisiri) ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.`
ಮುಂದುವರಿದು ಮಾತನಾಡಿದ ಅವರು ಐನ್‍ಮನೆ ಎನ್ನುವುದು ಎಲ್ಲರನ್ನು ಒಗ್ಗೂಡಿಸುವ ಜಾಗ. ಇಲ್ಲಿ ನಮ್ಮ ಸಂಸ್ಕೃತಿ, ಪರಂಪರೆಯನ್ನು ತಿಳಿಸುವುದರೊಂದಿಗೆ ಅರೆಭಾಷೆಯನ್ನು ವಿಸ್ತರಿಸುವ ಪೂರಕ ಸ್ಥಳ ಇದಾಗಿರುವುದರಿಂದ ಐನ್‍ಮನೆಯಲ್ಲಿ ಅಕಾಡೆಮಿ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ನುಡಿದರು.
ಕುಡೆಕಲ್ಲು ಕುಟುಂಬದ ಹಿರಿಯರಾದ ಸಾವಿತ್ರಿ ರವೀಂದ್ರನಾಥ್ ಕುಡೆಕಲ್ಲು ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ ಅವರು ಕುಡೆಕಲ್ಲು ಐನ್‍ಮನೆಯ ವಂಶವೃಕ್ಷ ಚಾರ್ಟ್ ಅನ್ನು ಅನಾವರಣಗೊಳಿಸಿದರು. ಅಕಾಡೆಮಿ ಹೊರತರುವ ಹಿಂಗಾರ ತ್ರೈಮಾಸಿಕದ ಹೊಸ ಸಂಚಿಕೆಯನ್ನು ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದ ಜಯಪ್ರಕಾಶ್ ಕುಂಚಡ್ಕ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಜೇನು ವ್ಯವಸಾಯಗಾರರ ಸಹಕಾರ ಸಂಘದ ಅಧ್ಯಕ್ಷ ಚಂದ್ರಾ ಕೋಲ್ಚಾರ್, ಅಕ್ರಮ-ಸಕ್ರಮ ಸಮಿತಿ ಸದಸ್ಯೆ ಗೀತಾ ಕೋಲ್ಚಾರ್, ಕುಡೆಕಲ್ಲು ಐನ್‍ಮನೆಯ ಮಾಜಿ ಆಡಳಿತಗಾರರಾದ ವಾಸುದೇವ ಗೌಡ ಕುಡೆಕಲ್ಲು, ಸುಳ್ಯ ಗೌಡರ ಯುವ ಸೇವಾ ಸಂಘದ ಉಪಾಧ್ಯಕ್ಷ ಯತಿರಾಜ ಭೂತಕಲ್ಲು, ಆಲೆಟ್ಟಿ ಗ್ರಾಮ ಗೌಡ ಸಮಿತಿ ಅಧ್ಯಕ್ಷ ಸತೀಶ್ ಕೊಯಿಂಗಾಜೆ, ಕುಡೆಕಲ್ಲು ಐನ್‍ಮನೆಯ ಹಾಲಿ ಆಡಳಿತಗಾರರಾದ ಬಿಪಿನ್ ಕುಡೆಕಲ್ಲು, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ಅಚ್ಚುತ ಮಾಸ್ತರ್ ನಾರ್ಕೋಡು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಅರೆಭಾಷಿಕರ ಐನ್‍ಮನೆಗಳ ಬಗ್ಗೆ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅರೆಭಾಷಿಕ ಪರಂಪರೆಯ ಸಂಶೋಧಕರಾದ ಅನಂತರಾಜ ಗೌಜ ಪುತ್ತೂರು ವಹಿಸಿದ್ದರು. ಮೀನುಗಾರಿಕಾ ಇಲಾಖಾ ಸಹಾಯಕ ನಿರ್ದೇಶಕರಾದ ಮಿಲನ ಭರತ್ ಇವರು ಅರೆಭಾಷೆ ಕುಟುಂಬಗಳ ಆಡಳಿತ ಸಂಬಂಧದ ಬಗ್ಗೆ ಉಪನ್ಯಾಸ ನೀಡಿದರು. ಹಾಗೆಯೇ ಕುಡೆಕಲ್ಲು ಐನ್‍ಮನೆ ನಡೆದು ಬಂದ ದಾರಿ ವಿಷಯದ ಕುರಿತು ಯುವ ಸಾಹಿತಿ ಮನೋಜೋ ಕುಡೆಕಲ್ಲು ಮಾಹಿತಿ ನೀಡಿದರು.
ಅಕಾಡೆಮಿ ಸದಸ್ಯರಾದ ಡಾ.ಎನ್.ಎ.ಜ್ಞಾನೇಶ್ ಸ್ವಾಗತಿಸಿದರು. ಕಾರ್ಯಕ್ರಮದ ಸದಸ್ಯ ಸಂಚಾಲಕರಾದ ತೇಜಕುಮಾರ್ ಕುಡೆಕಲ್ಲು ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿನೋದ್ ಮೂಡಗದ್ದೆ ಕಾರ್ಯಕ್ರಮ ನಿರೂಪಿಸಿದ್ದು, ಲತಾ ಪ್ರಸಾದ್ ಕುದ್ಪಾಜೆ ವಂದಿಸಿದರು.ಅಕಾಡೆಮಿ ಸದಸ್ಯರಾದ ಚಂದ್ರಾವತಿ ಬಡ್ಡಡ್ಕ, ಚಂದ್ರಶೇಖರ ಪೇರಾಲು, ಪಿ.ಎಸ್.ಕಾರ್ಯಪ್ಪ, ಸೂದನ ಎಸ್.ಈರಪ್ಪ, ಲೋಕೇಶ್ ಊರುಬೈಲು, ಸಂದೀಪ್ ಪೂಳಕಂಡ, ಗೋಪಾಲ್ ಪೆರಾಜೆ ಮತ್ತಿತರರು ಉಪಸ್ಥಿತರಿದ್ದರು.