ಬರವಣಿಗೆ ನೀಡುವ ಅಮೂಲ್ಯ ಸಾರವನ್ನು AI, ಗೂಗಲ್‌ ನೀಡಲಾರದು – ಮಾಳೇಟಿರ ಸೀತಮ್ಮ ವಿವೇಕ್‌ ಅಭಿಪ್ರಾಯ

Share this post :

ಮಡಿಕೇರಿ : ಸಾಮಾಜಿಕ ಜಾಲತಾಣಗಳ ಪ್ರಭಾವದಿಂದಾಗಿ ಇಂದು ಪುಸ್ತಕ ಓದುವವರ ಸಂಖ್ಯೆ ಬಹಳ ವಿರಳವಾಗಿದೆ. ಆದರೆ ಬರವಣಿಗೆ ನೀಡುವ ಅಮೂಲ್ಯ ಸಾರವನ್ನು ಎಐ ಅಥವಾ ಗೂಗಲ್ ತಂತ್ರಜ್ಞಾನ ನೀಡಲು ಸಾಧ್ಯವಿಲ್ಲವೆಂದು ಸಾಹಿತಿ ಹಾಗೂ ಸಮಾಜ ಸೇವಕಿ ಮಾಳೇಟಿರ ಸೀತಮ್ಮ ವಿವೇಕ್ ಹೇಳಿದರು.
ಪತ್ರಿಕಾ ಭವನದಲ್ಲಿ ನಡೆದ ಕೊಟ್ಟಂಗಡ ಕವಿತಾ ವಾಸುದೇವ ರಚಿತ, ಕೊಡವ ಮಕ್ಕಡ ಕೂಟದ 119ನೇ ಪುಸ್ತಕ ‘ಬಯಂದ ಬಾಳ್’ ಕೊಡವ ಕೃತಿಯ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಯಾವುದೇ ನಿರೀಕ್ಷೆಗಳಿಲ್ಲದೆ ಸಾಹಿತ್ಯವನ್ನು ಸಮಾಜಕ್ಕೆ ನೀಡಬೇಕು. ಹಾಗಾದಲ್ಲಿ ಸಮಾಜ ಅದನ್ನು ಉತ್ತಮ ರೀತಿಯಲ್ಲಿ ಸ್ವೀಕರಿಸುತ್ತದೆ. ಮೌಲ್ಯಯುತ ಪುಸ್ತಕಗಳನ್ನು ಓದುವ ಸಾಹಿತ್ಯಾಸಕ್ತರು ಸಮಾಜದಲ್ಲಿ ಇದ್ದಾರೆ. ಸಮಾಜವನ್ನು ಬದಲಾಯಿಸುವ ಶಕ್ತಿ ಸಾಹಿತ್ಯಕ್ಕಿದೆ ಎಂದು ಅಭಿಪ್ರಾಯಪಟ್ಟರು.

ಪುಸ್ತಕ ಬಿಡುಗಡೆ ಮಾಡಿದ ಸುಂಟಿಕೊಪ್ಪ ಕೊಡವ ಸಮಾಜದ ಕಾರ್ಯದರ್ಶಿ ಅಜ್ಜಿಕುಟ್ಟೀರ ಸಿ.ಗಿರೀಶ್ ಮಾತನಾಡಿ, ಯುವ ಬರಹಗಾರರು ಪುಸ್ತಕ ರಚನೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು. ಯುವ ಸಾಹಿತಿಗಳಿಗೆ ಪ್ರೋತ್ಸಾಹದ ಅಗತ್ಯವಿದೆ ಎಂದರು.
ಸಮಾಜ ಸೇವಕ ಅವರೆಮಾದಂಡ ಶರಣ್ ಪೂಣಚ್ಚ ಮಾತನಾಡಿ, ಡಿಜಿಟಲ್ ಯುಗದದಲ್ಲಿ ಬರಹಗಾರರ ಸಂಖ್ಯೆ ಕಡಿಮೆಯಾಗುತ್ತಿದ್ದರೂ, ಪುಸ್ತಕಗಳು ಶಾಶ್ವತವಾಗಿ ಉಳಿಯುವುದರಿಂದ ಮುಂದಿನ ಪೀಳಿಗೆಗೆ ಸಾಹಿತ್ಯ ಕ್ಷೇತ್ರ ಹೆಚ್ಚು ಸಹಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ, ಸಮಾಜ ಸೇವಕ ಚೀಯಕಪೂವಂಡ ಸಚಿನ್ ಪೂವಯ್ಯ ಈ ಸಂದರ್ಭದಲ್ಲಿದ್ದರು.

coorg buzz
coorg buzz