ಅಹಮದಾಬಾದ್‌ ವಿಮಾನ ದುರಂತ – ವಿಮಾನ ಬೆಂಕಿಗಾಹುತಿಯಾದರೂ ಗ್ರೇಟ್‌ ಎಸ್ಕೇಪ್‌ ಆದ ಏಕಮಾತ್ರ ವ್ಯಕ್ತಿ..!

Share this post :

coorg buzz

ಅಹಮದಾಬಾದ್‌ : ಗುಜರಾತ್‌ನ ಅಹಮದಾಬಾದ್‌ನಲ್ಲಿ ಸಂಭವಿಸಿದ ಏರ್‌ ಇಂಡಿಯಾ ವಿಮಾನ ದುರಂತದಲ್ಲಿ ೨೪‌೧ ಮಂದಿ ಮೃತಪಟ್ಟಿದ್ದಾರೆ. ಆದರೆ ಪವಾಡಸದೃಶ ರೀತಿಯಲ್ಲಿ ವ್ಯಕ್ತಿಯೊಬ್ಬರು ಪಾರಾಗಿದ್ದಾರೆ.
ರಮೇಶ್‌ ವಿಶ್ವಕುಮಾರ್‌ ಮಹಾದುರಂತದಲ್ಲಿ ಬದುಕುಳಿದ ವ್ಯಕ್ತಿ. ಭಾರತ ಮೂಲದ ರಮೇಶ್‌ ತನ್ನ ಕುಟುಂಬದೊಂದಿಗೆ ಲಂಡನ್‌ನಲ್ಲಿ ವಾಸವಾಗಿದ್ದರು. ಕೆಲವು ದಿನದ ಹಿಂದೆ ಭಾರತಕ್ಕೆ ಬಂದಿದ್ದ ಅವರು, ಇಂದು ತನ್ನ ಸಹೋದರನೊಂದಿಗೆ ಲಂಡನ್‌ಗೆ ಮರಳುತ್ತಿದ್ದರು. ವಿಮಾನದ ಸೀಟ್‌ ೧೧(ಎ)ನಲ್ಲಿ ರಮೇಶ್‌ ವಿಶ್ವಕುಮಾರ್‌ ಕುಳಿತಿದ್ದರು. ಪಕ್ಕದಲ್ಲಿ ಅವರ ಸಹೋದರ ಇದ್ದರು. ಏರ್‌ ಇಂಡಿಯಾದ ಬೋಯಿಂಗ್‌ ವಿಮಾನ ಟೇಕ್‌ ಆಫ್‌ ಆದ ಕೆಲವೇ ಸೆಕೆಂಡ್‌ನಲ್ಲಿ ದೋಷ ಕಾಣಿಸಿಕೊಂಡಿದ್ದು, ಪೈಲಟ್‌ನಿಂದ ಎಮರ್ಜೆನ್ಸಿ ಸೂಚನೆ ಬಂದಿದೆ. ಅದಾದ ಕ್ಷಣದಲ್ಲೇ ವಿಮಾನ ಅಪ್ಪಳಿಸಿದ್ದು, ತಕ್ಷಣವೇ ತನ್ನ ಸೀಟ್‌ನ ಪಕ್ಕದಲ್ಲಿದ್ದ ಎಮರ್ಜೆನ್ಸಿ ಎಕ್ಸಿಟ್‌ ಡೋರ್‌ ಮೂಲಕ ಹೊರಕ್ಕೆ ಜಿಗಿದಿದ್ದಾರೆ. ಅಷ್ಟೊತ್ತಿಗಾಗಲೇ ವಿಮಾನ ಪತನವಾಗಿ ಬೆಂಕಿಗಾಹುತಿಯಾಗಿದೆ.
ನೆಲಕ್ಕೆ ಜಿಗಿದು ಗಾಯಗೊಂಡ ಬಳಿಕ ರಮೇಶ್‌ ತಾವೇ ನಡೆದುಕೊಂಡು ಹೋಗುತ್ತಿರುವ ವೀಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಅವರ ಪತ್ನಿ, ಮಕ್ಕಳು ಲಂಡನ್‌ನಲ್ಲಿದ್ದಾರೆಂದು ತಿಳಿದುಬಂದಿದೆ. ಇಂಥ ಘೋರ ದುರಂತದಲ್ಲಿ ಬಚಾವಾಗಿ ಬಂದ ರಮೇಶ್‌ ಅವರ ಅದೃಷ್ಟದ ಮನುಷ್ಯ ಅಂತೆಲ್ಲ ಜನ ಮಾತನಾಡಿಕೊಳ್ಳುತ್ತಿದ್ದಾರೆ.