ಮಡಿಕೇರಿ : ಪಾಲಿಬೆಟ್ಟದ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕಿಯರ ನಿಲಯದಲ್ಲಿ ಪೋಲೀಸ್ ಇಲಾಖೆ ಮತ್ತು ಆರೋಗ್ಯ ಇಲಾಖೆ ಸಹಯೋಗದೊಂದಿಗೆ ಕಾನೂನು ಅರಿವು ಮತ್ತು ಹದಿಹರೆಯದ ಮಕ್ಕಳ ಆರೋಗ್ಯ ಮಾಹಿತಿ ಕಾರ್ಯಾಗಾರ ನಡೆಯಿತು.
ಪೊಲೀಸ್ ಉಪನಿರೀಕ್ಷಕ ಹೆಚ್.ಕೆ. ಮಂಜುನಾಥ್ ಅವರು ಪೋಕ್ಸೊ ಕಾಯ್ದೆ,112 ತುರ್ತು ಸಂಖ್ಯೆ, ಮಕ್ಕಳ ಸಹಾಯವಾಣಿ, ಮಾದಕ ಪದಾರ್ಥಗಳ ದುಷ್ಪರಿಣಾಮ, ಮೊಬೈಲ್ ಬಳಕೆ, ಸೈಬರ್ ಅಪರಾಧ, ಬಾಲ ಅಪರಾಧ, ಗುಡ್ ಟಚ್-ಬ್ಯಾಡ್ ಟಚ್ ಇವುಗಳ ಕುರಿತಾಗಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಮಕ್ಕಳ ಆರೋಗ್ಯದ ಬಗ್ಗೆ ಆರೋಗ್ಯ ಕಾರ್ಯಕರ್ತೆ ಪ್ರಮೀಳ ಮಾಹಿತಿ ನೀಡಿದರು. ಹದಿಹರೆಯದ ಗರ್ಭಧರಿಸುವಿಕೆ, ಆರೋಗ್ಯದ ಮೇಲೆ ಪರಿಣಾಮ, ದೈಹಿಕ ಬದಲಾವಣೆ, ಸುತ್ತಲಿನ ಪರಿಸರ ಮತ್ತು ವೈಯಕ್ತಿಕ ಸ್ವಚ್ಛತೆ ಕುರಿತಾಗಿ ವಿವರಿಸಿದರು.
ಪೊಲೀಸ್ ಸಿಬ್ಬಂದಿ ಸಜಿಲ್, ಆಶಾ ಕಾರ್ಯಕರ್ತೆ ಶೈಲ, ಮೇಲ್ವಿಚಾರಕಿ ಕೆ.ಎಂ. ಸುಮಯ್ಯ, ವಿದ್ಯಾರ್ಥಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.