ಬೆಂಗಳೂರಿನಲ್ಲಿ ಕೊಡಗಿನ ಪೊಲೀಸ್ ಅಧಿಕಾರಿಯ ಸಾಧನೆ

police officer

Share this post :

ಬೆಂಗಳೂರಿನ ಸಿದ್ದಾಪುರ ಪೊಲೀಸ್ (Police) ಠಾಣೆಯಲ್ಲಿ ಸಬ್ ಇನ್ಸ್‌ಪೆಕ್ಟ‌ರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಕೊಡಗು ಜಿಲ್ಲೆಯ ಪೊಲೀಸ್ ಅಧಿಕಾರಿಯೊಬ್ಬರು, ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಮತ್ತು ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಮಾಲು ಸಮೇತ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಡಿಕೇರಿ ತಾಲ್ಲೂಕಿನ ಬೋಯಿಕೇರಿ ಗ್ರಾಮದ ಬಿ.ಟಿ. ಕಿಶೋರ್ ಎಂಬುವವರೇ ಈ ಕಾರ್ಯಾಚರಣೆ ನಡೆಸಿ, ಹಿರಿಯ ಅಧಿಕಾರಿಗಳಿಂದ ಪ್ರಶಂಸೆಗೊಳಗಾದವರಾಗಿದ್ದಾರೆ.

ಬೆಂಗಳೂರು ಸಿದ್ದಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿ ದಿವಂಗತ ಲೋಕೇಶ್ ಎಂಬುವವರ ಪತ್ನಿ ಮಂಜುಳಾರವರು ದಿನಾಂಕ 24-11-2024 ರಂದು ಮನೆಗೆ ಬೀಗ ಹಾಕಿ ಕೆಲಸಕ್ಕೆಂದು ಹೋಗಿದ್ದವರು, ಸಂಜೆ ಹಿಂತಿರುಗಿ ಬಂದಾಗ ಮನೆಯ ಡೋರ್ ಲಾಕ್ ಮುರಿದು ರೂ. 40 ಸಾವಿರ ಮೌಲ್ಯದ ಚಿನ್ನದ ಉಂಗುರ ಕಳ್ಳತನವಾಗಿರುವುದು ಕಂಡು ಬಂದು ಸಿದ್ದಾಪುರ ಪೊಲೀಸ್ ಠಾಣೆಗೆ ಪುಕಾರು ನೀಡಿದ್ದರು.

ಪ್ರಕರಣದ ಜಾಡು ಹಿಡಿದು ತನಿಖೆ ಕೈಗೊಂಡ ಸಬ್ ಇನ್ಸ್ ಪೆಕ್ಟರ್ ಬಿ.ಟಿ. ಕಿಶೋರ್ ಹಾಗೂ ಸಿಬ್ಬಂದಿಗಳ ತಂಡ, ಬೆಂಗಳೂರು ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಲೋಕೇಶ್ ಬಿ. ಜಗಲಾಸರ್, ಜಯನಗರ ಉಪವಿಭಾಗದ ಸಹಾಯುಕ ಪೊಲೀಸ್ ಆಯುಕ್ತರಾದ ನಾರಾಯಣಸ್ವಾಮಿ ವಿ. ರವರ ಮಾರ್ಗದರ್ಶನದಲ್ಲಿ ಬೆಂಗಳೂರು ಸಿದ್ದಾಪುರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಮೋಹನ್ ಡಿ. ಪಟೇಲ್ ರವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ದಿನಾಂಕ 07-04-2025 ರಂದು ಬೆಂಗಳೂರು ದೇವಸಂದ್ರದ ನಿವಾಸಿ ವೃತ್ತಿಯಲ್ಲಿ ಆಟೋ ಚಾಲಕನಾಗಿರುವ ಇಮ್ರಾನ್ ಖಾನ್ ಅಲಿಯಾಸ್ ಕಿಡ್ (31) ಎಂಬಾತನನ್ನು ಬಂಧಿಸಿ 40 ಗ್ರಾಂ ತೂಕದ ಚಿನ್ನದ ಉಂಗುರವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಅಲ್ಲದೇ, ಬೆಂಗಳೂರಿನ ಸಿದ್ದಾಪುರ ಠಾಣೆಯಲ್ಲಿ ದಾಖಲಾಗಿದ್ದ 5, ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ 2, ಆಡುಗೋಡಿ ಠಾಣೆಯಲ್ಲಿ ದಾಖಲಾಗಿದ್ದ 1, ಹಲಸೂರು ಗೇಟ್ ಠಾಣೆಯಲ್ಲಿ ದಾಖಲಾಗಿದ್ದ 1 ಕಳ್ಳತನ ಪ್ರಕರಣಗಳ ಆರೋಪಿ ಬೆಂಗಳೂರು ದಯಾನಂದ ನಗರ ಸ್ಲಂ ನಿವಾಸಿ ಆಯಿಲ್ ವ್ಯಾಪಾರಿ ಸೈಯದ್ ಇಮ್ತಿಯಾಜ್ ಅಲಿಯಾಸ್ ಚಾಕು (28) ಎಂಬಾತನನ್ನು ದಿನಾಂಕ 10-04-2025 ರಂದು ಬಂಧಿಸಿದ್ದಾರೆ. ಈತನಿಂದ 173 ಗ್ರಾಂ ತೂಕದ ಚಿನ್ನಾಭರಣ, 570 ಗ್ರಾಂ ಬೆಳ್ಳಿಯ ಆಭರಣಗಳು, ವಿವಿಧ ಕಂಪೆನಿಗಳ 5 ಮೊಬೈಲ್ ಗಳು, ಹಾಗೂ ಕಳವು ಮಾಡಿದ 4 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಪೊಲೀಸ್ ಕಾನ್ಸ್ಟೇಬಲ್ ಆಗಿ ಪೊಲೀಸ್ ಇಲಾಖೆಗೆ ಸೇರಿ, ಶ್ರಮವಹಿಸಿ ಓದಿ ಸಬ್ ಇನ್ಸ್ ಪೆಕ್ಟರ್ ಪರೀಕ್ಷೆ ಬರೆದು ರಾಜ್ಯಕ್ಕೆ 4ನೇ ರ‍್ಯಾಂಕ್ ಪಡೆಯುವ ಮೂಲಕ ಸಬ್ ಇನ್ಸ್ ಪೆಕ್ಟರ್ ಹುದ್ದೆಗೇರಿರುವ ಬಿ.ಟಿ. ಕಿಶೋರ್ ರವರು ಬೆಂಗಳೂರಿನಂತಹ ಬೃಹತ್ ನಗರದಲ್ಲಿ ಖದೀಮರ ಪಾಲಿಗೆ ಸಿಂಹಸ್ವಪ್ನರಾಗಿ ಕರ್ತವ್ಯ ನಿರ್ವಹಿಸುತ್ತಾ, ಹಲವು ಪ್ರಕರಣಗಳನ್ನು ಭೇದಿಸಿರುವುದು ಕೊಡಗು ಜಿಲ್ಲೆಗೆ ಹೆಮ್ಮೆ ಮೂಡಿಸಿದ್ದಾರೆ.