ಮಡಿಕೇರಿ : ಕೊಡಗು ಜಿಲ್ಲೆಯ ಖ್ಯಾತಿಗೆ ಧಕ್ಕೆ ತರುವಂತೆ ಪೋಸ್ಟ್ ಹಾಕಿದ್ದ ವ್ಯಕ್ತಿಯನ್ನು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.
ಕೆಲವು ದಿನದ ಹಿಂದೆ ಇನ್ಸ್ಟಾಗ್ರಾಂನಲ್ಲಿ ಮಡಿಕೇರಿಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ವಿಡಿಯೋ ಬಳಸಿಕೊಂಡು ʼಮಡಿಕೇರಿ ಜಿಲ್ಲೆಯಲ್ಲಿ ಹುಡುಗಿ ಆಂಟಿ ಡೇಟಿಂಗ್ ಮಾಡೋದಕ್ಕೆ ಸರ್ವಿಸ್ ಬೇಕಾದ್ರೆ ಕಾಲ್ ಮಾಡಿʼ ಅಂತ ಪೋಸ್ಟ್ ಹಾಕಲಾಗಿತ್ತು. ಈ ವಿಚಾರವಾಗಿ ಅನೇಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಸಂಬಂಧ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮಡಿಕೇರಿ ಡಿವೈಎಸ್ಪಿ ಪಿ.ಎ. ಸೂರಜ್, ಸಿಪಿಐ ಪಿ.ಕೆ. ರಾಜು, ಪಿಎಸ್ಐ ಅನ್ನಪೂರ್ಣ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ಕೈಗೆತ್ತಿಕೊಂಡಿತ್ತು. ಪೋಸ್ಟ್ ಮಾಡಿದ್ದ ವ್ಯಕ್ತಿ ಬಾಗಲಕೋಟೆಯ ಮುಧೋಳ ತಾಲೂಕಿನ ಬೆಳಗಲಿ ಗ್ರಾಮದ ನಾಗಪ್ಪ ಹನುಮಂತ ಲಮಾಣಿ(26) ಎಂಬಾತನನ್ನು ಈ ತಂಡ ಬಂಧಿಸಿದೆ. ಈ ಬಗ್ಗೆ ಜಿಲ್ಲಾ ಎಸ್ಪಿ ಕೆ. ರಾಮರಾಜನ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸಾಮಾಜಿಕ ಜಾಲತಾಣಗಳಲ್ಲಿ ಸಮಾಜದ ಸ್ವಾಸ್ಥ್ಯಕ್ಕೆ ಹಾನಿಯಾಗುವ ರೀತಿ ಮಾಹಿತಿ, ಪೋಸ್ಟ್ ಹಂಚಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಸ್ಪಿ ಎಚ್ಚರಿಸಿದ್ದಾರೆ.



