ವಿರಾಜಪೇಟೆ ಮಲೆ ತಿರಿಕೆ ಬೆಟ್ಟದಲ್ಲಿ ಆಕಸ್ಮಿಕ ಬೆಂಕಿ: ಬೆಂಕಿ ನಂದಿಸುವಲ್ಲಿ ಯಶಸ್ವಿ

Virajpet Male Tirike Hill

Share this post :

ವಿರಾಜಪೇಟೆ: ನಗರದ ಮಲೆ ತಿರಿಕೆ ಬೆಟ್ಟದಲ್ಲಿ ಸೋಮವಾರ ಮಧ್ಯಾಹ್ನ 2:30 ವೇಳೆಯಲ್ಲಿ ವ್ಯೂ ಪಾಯಿಂಟ್ ಸಮೀಪ ರಸ್ತೆ ಬದಿಯಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಸ್ಥಳೀಯ ನಿವಾಸಿಗಳು ವಿರಾಜಪೇಟೆ (Virajpet) ಪೊಲೀಸ್ ಇಲಾಖೆಗೆ ಈ ಕುರಿತು ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸ್ ಇಲಾಖೆ ಅಗ್ನಿಶಾಮಕ ದಳಕ್ಕೆ ಈ ಕುರಿತ ಮಾಹಿತಿಯನ್ನು ರವಾನಿಸಿದ್ದ, ಕೆಲವೇ ಕ್ಷಣದಲ್ಲಿ ಸ್ಥಳಕ್ಕೆ ಅಗ್ನಿಶಾಮಕದಳ, ಅರಣ್ಯ ಇಲಾಖೆ, ಕಂದಾಯ ಇಲಾಖೆ, ಪುರಸಭೆಯ ಸಿಬ್ಬಂದಿಗಳು ಬಂದು ಬೆಂಕಿ ನಂದಿಸುವ ಕಾರ್ಯಚರಣೆಯಲ್ಲಿ ತೊಡಗಿದರು.

ಈ ಬೆಂಕಿಯ ಕೆನ್ನಾಲಿಗೆ ಸುಮಾರು 3 ರಿಂದ 4 ಏಕರೆ ಅರಣ್ಯ ಪ್ರದೇಶವು ಆಹುತಿಯಾಗಿದೆ. ಸತತ 3 ಗಂಟೆಗಳ ಕಾರ್ಯಾಚರಣೆಯಿಂದ ವಿವಿಧ ಇಲಾಖೆಯ ಸಿಬ್ಬಂದಿಗಳು ಹಾಗೂ ಸ್ಥಳೀಯರ ಸಹಕಾರದಿಂದ ಬೆಂಕಿ ನಂದಿಸುವ ಕಾರ್ಯ ಸಫಲವಾಗಿದೆ. ಈ ವೇಳೆಯಲ್ಲಿ ಗೋಣಿಕೊಪ್ಪಲು ಅಗ್ನಿಶಾಮಕ ದಳದ ಠಾಣಾಧಿಕಾರಿ ಡಿ.ಜಿ.ಮಂಜೇ ಗೌಡ , ಅರಣ್ಯ ಇಲಾಖೆಯ ವಲಯ ಅರಣ್ಯ ಅಧಿಕಾರಿ ಕೆ.ವಿ. ಶಿವರಾಂ , ಡಿ.ಆರ್.ಎಪ್.ಒ ಆನಂದ್, ಪುರಸಭೆ ಅಧ್ಯಕ್ಷೆ ದೇಚಮ್ಮ ಕಾಳಪ್ಪ, ಪುರಸಭಾ ಮುಖ್ಯಾಧಿಕಾರಿ ನಾಚಪ್ಪ , ನಗರ ಠಾಣೆಯ ಪ್ರಭಾರ ಠಾಣಾಧಿಕಾರಿ ವಾಣೀ ಶ್ರೀ ಹಾಗೂ ಪುರಸಭೆ , ಕಂದಾಯ ಇಲಾಖೆ, ಅರಣ್ಯ ಇಲಾಖೆ, ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಾಗೂ ಸ್ಥಳೀಯರು ಹಾಜರಿದ್ದರು.