ಕೆಲವು ದಿನದ ಹಿಂದಷ್ಟೇ ರಸ್ತೆ ದುಸ್ಥಿತಿ ಬಗ್ಗೆ ವರದಿ ಮಾಡಿ ಸಾರ್ವಜನಿಕ ಕಾಳಜಿ – ಅದೇ ರಸ್ತೆಯಲ್ಲಿ ಬಿದ್ದು ಗಾಯಗೊಂಡ ಪತ್ರಕರ್ತೆ..!

Share this post :

ಮಡಿಕೇರಿ : ಜಿಲ್ಲೆಯ ಬಹುತೇಕ ಕಡೆ ರಸ್ತೆಗಳ ಸ್ಥಿತಿ ಶೋಚನೀಯವಾಗಿದೆ. ಹಲವೆಡೆ ವಾಹನಗಳು ಸಂಚರಿಸುವುದೇ ದುಸ್ತರವಾಗಿದೆ.
ಅದರಲ್ಲೂ ದ್ವಿಚಕ್ರ ವಾಹನ ಸವಾರರ ಪಾಡಂತೂ ಹೇಳತೀರದು. ಒಂದೆಡೆ ಹೊಂಡ ಗುಂಡಿಗಳು ರಸ್ತೆಯನ್ನು ಆವರಿಸಿದ್ದರೆ, ಮತ್ತೊಂದೆಡೆ ಈ ಬಾರಿಯ ನಿರಂತರ ಮಳೆಗೆ ಎಲ್ಲೆಲ್ಲಿಂದೋ ಬಂದು ರಸ್ತೆಯಲ್ಲಿ ಹರಡಿಕೊಂಡಿರುವ ಮಣ್ಣು & ಮರಳಿನ ರಾಶಿ ದ್ವಿಚಕ್ರ ವಾಹನ ಸವಾರರನನು ಯಮಸ್ವರೂಪಿಯಾಗಿ ಕಾಡುತ್ತಿದೆ. ಅದೆಷ್ಟೋ ಮಂದಿ ಹೊಂಡ, ಗುಂಡಿಗಳನ್ನು ತಪ್ಪಿಸಲು ಹೋಗಿ, ಮಣ್ಣು, ಮರಳಿನ ರಾಶಿಯಲ್ಲಿ ವಾಹನ ಜಾರಿದ ಪರಿಣಾಮ ಬಿದ್ದು ಗಾಯಗೊಂಡಿರುವ ನಿದರ್ಶನಗಳೂ ಇವೆ.
ಎರಡು ದಿನದ ಹಿಂದೆ ಕರ್ತವ್ಯ ಯುವ ಪತ್ರಕರ್ತೆ ದ್ವಿಚಕ್ರ ವಾಹನದಿಂದ ಬಿದ್ದು ತೀವ್ರ ಸ್ವರೂಪದ ಗಾಯಗೊಂಡಿದ್ದಾರೆ. ಸ್ಥಳೀಯ ಕೇಬಲ್ ವಾಹಿನಿಯಲ್ಲಿ ವರದಿಗಾರ್ತಿಯಾಗಿರುವ ಉಕ್ಕೇರಿಯಂಡ ವಿಷ್ಮಾ ಪೆಮ್ಮಯ್ಯ ಗಾಯಗೊಂಡವರು. ಮಕ್ಕಂದೂರು-ಸಿಂಕೋನ ಸಂಪರ್ಕ ಮಾರ್ಗದಲ್ಲಿ ತೆರಳುತ್ತಿದ್ದ ವೇಳೆ ರಸ್ತೆಯಲ್ಲಿ ಹರಡಿದ್ದ ಮರಳಿನ ರಾಶಿಯಲ್ಲಿ ದ್ವಿಚಕ್ರ ವಾಹನ ಜಾರಿದೆ. ಅವರ ನಿಯಂತ್ರಣಕ್ಕೆ ಸಿಗದ್ದರಿಂದ ವಾಹನ ಸಮೇತ ರಸ್ತೆಗೆ ಬಿದ್ದು ಮೊಣಕಾಲಿಗೆ ತೀವ್ರ ಸ್ವರೂಪದಲ್ಲಿ ಗಾಯವಾಗಿದೆ. ಮೊಣಕಾಲಿಗೆ ಹೊಲಿಗೆ ಹಾಕಲಾಗಿದ್ದು, ಹೆಚ್ಚಿನ ಅಪಾಯವಿಲ್ಲ. ಎರಡು ವಾರದ ವಿಶ್ರಾಂತಿಗೆ ವೈದ್ಯರು ಸೂಚಿಸಿದ್ದಾರೆ.
ಈ ದುಸ್ಥಿತಿಯ ಮಾರ್ಗದಲ್ಲಿ ಕೆಲವು ದಿನದ ಹಿಂದಷ್ಟೆ ಟಿಂಬರ್‌ ಲಾರಿಯೊಂದು ರಸ್ತೆ ಬದಿಯ ತೋಟಕ್ಕೆ ಪಲ್ಟಿಯಾಗಿತ್ತು. ಚಾಲಕ ಮತ್ತು ಅದರಲ್ಲಿದ್ದವರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದರು. 3 ವರ್ಷಗಳಿಂದ ಈ ರಸ್ತೆ ತೀವ್ರ ಸ್ವರೂಪದಲ್ಲಿ ರಸ್ತೆ ಹದಗೆಟ್ಟು ಹೋಗಿದ್ದು, ಜಲ್ಲಿಕಲ್ಲುಗಳೆಲ್ಲಾ ಮೇಲೆ ಬಂದು ರಸ್ತೆಯ ತುಂಬಾ ಹರಡಿಕೊಂಡಿದೆ.
ತಿಂಗಳ ಹಿಂದೆ ಇದೇ ಜಾಗದಲ್ಲಿ ಶಾಲಾ ವಾಹನವೊಂದು ಸ್ವಲ್ಪದರಲ್ಲೇ ದೊಡ್ಡ ಅನಾಹುತದಿಂದ ಪಾರಾಗಿತ್ತು. ಇದೀಗ ಈ ರಸ್ತೆಯಲ್ಲಿ ಶಾಲಾ ವಾಹನದ ಸಂಚಾರ ನಿಂತು ಹೋಗಿದೆ. ಸ್ವಲ್ಪ ದೂರದವರೆಗೆ ಮಾತ್ರ ಸ್ಕೂಲ್ ಬಸ್ ಬರುತ್ತೆ. ಅಲ್ಲಿವರೆಗೆ ಮಕ್ಕಳು ನಡೆದುಕೊಂಡೇ ಹೋಗಬೇಕಿದೆ. ಜನ, ವಿದ್ಯಾರ್ಥಿಗಳು ನಿತ್ಯ ಸಮಸ್ಯೆ ಅನುಭವಿಸುತ್ತಿದ್ದರೂ ಯಾರೂ ಕೂಡಾ ಇತ್ತ ಗಮನಹರಿಸದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಅಕ್ಷರಶಃ ಅನಾಹುತಕ್ಕೆ ಕಾದು ಕುಳಿತಂತಿರುವ ಈ ರಸ್ತೆಗೆ ಹೊಸ ರೂಪ ನೀಡಿ, ಜನರ ನೋವಿಗೆ ಸ್ಪಂದಿಸುವುದಕ್ಕೆ ಜನಪ್ರತಿನಿಧಿಗಳು, ಅಧಿಕಾರಿಗಳು ಯಾವಾಗ ಮುಂಗಾಗುತ್ತಾರೋ ಗೊತ್ತಿಲ್ಲ.

ಶೋಚನೀಯ ಸ್ಥಿತಿಗತಿ ಬಗ್ಗೆ ವರದಿ ಮಾಡಿದ್ದ ವಿಷ್ಮಾ..!
ಈ ರಸ್ತೆಯ ದುಸ್ಥಿತಿ ಬಗ್ಗೆ ವಿಷ್ಮಾ ಪೆಮ್ಮಯ್ಯ ಕೆಲವು ದಿನದ ಹಿಂದಷ್ಟೇ ತಾನು ಕಾರ್ಯನಿರ್ವಹಿಸುತ್ತಿರುವ ವಾಹಿನಿಯಲ್ಲಿ ಸವಿವರವಾದ ವರದಿ ಮಾಡಿದ್ದರು. ಆಕೆ ಮಾಡಿದ್ದ ವರದಿಯಲ್ಲಿ ʼಈ ರಸ್ತೆಯ ಕೆಲ ಗುಂಡಿಗಳಂತೂ ಅಕ್ಷರಶಃ ಮೃತ್ಯು ಕೂಪವಾದಂತಿದೆ. ದ್ವಿಚಕ್ರ ವಾಹನ ಸವಾರರು ಆಯತಪ್ಪಿ ಬಿದ್ದರೆ ಕೈಕಾಲು ಮುರಿದುಕೊಳ್ಳುವುದು ಖಚಿತ. ಭಾರೀ ಎಚ್ಚರಿಕೆಯಿಂದ ಈ ಮಾರ್ಗದಲ್ಲಿ ಸಂಚರಿಸಬೇಕಾಗಿದೆʼ ಅಂತ ಉಲ್ಲೇಖಿಸಿದ್ದರು. ಸಾರ್ವಜನಿಕರಿಗೆ ಎಚ್ಚರಿಕೆಯ ಸಂದೇಶವನ್ನು ತನ್ನ ವರದಿಯಲ್ಲಿ ನೀಡಿದ್ದ ವಿಷ್ಮಾ ಕೂಡಾ ಎಚ್ಚರಿಕೆಯಿಂದಲೇ ಈ ರಸ್ತೆಯಲ್ಲಿ ತೆರಳುತ್ತಿದ್ದರು. ವಿಪರ್ಯಾಸ ಅಂದ್ರೆ‌ ಅದೇ ರಸ್ತೆಯಲ್ಲಿ ಅವರೇ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ಯಾವ ಎಚ್ಚರಿಕೆಯೂ ಈ ರಸ್ತೆಯಲ್ಲಿ ಸಾಲೋದಿಲ್ಲ ಅನ್ನೋದು ಸಾಬೀತಾಗಿದೆ. ವಿಷ್ಮಾ ಪೆಮ್ಮಯ್ಯ ಶೀಘ್ರ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸೋಣ.

 

#coorg #road #mla #mantargowda

coorg buzz
coorg buzz