ಅಮ್ಮತ್ತಿಯಲ್ಲಿ ‘ಕೊಡವ ಬಲ್ಯ ನಮ್ಮೆ’ ಆಕರ್ಷಕ ಮೆರವಣಿಗೆ

Kodava Ballya Namme

Share this post :

ಕಾವೇರಿ ನಾಡಿನ ಪುಣ್ಯ ಭೂಮಿಯಲ್ಲಿ ಹುಟ್ಟಿ ಬೆಳೆದ ನಾವುಗಳು ಕೊಡವ ಭಾಷೆ, ಕಲೆ, ಸಾಹಿತ್ಯ, ಸಂಸ್ಕøತಿಯನ್ನು ಎಲ್ಲೆಡೆ ಪಸರಿಸುವಂತಾಗಬೇಕು. ಆ ದಿಸೆಯಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಸಾಹಿತ್ಯ ಮತ್ತು ಸಂಸ್ಕøತಿ ಚಟುವಟಿಕೆಗೆ ಸರ್ಕಾರದಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ತಿಳಿಸಿದ್ದಾರೆ.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಅಮ್ಮತ್ತಿ ಕೊಡವ ಸಮಾಜದಲ್ಲಿ ಶನಿವಾರ ನಡೆದ ‘ಕೊಡವ ಬಲ್ಯ ನಮ್ಮೆ’ (Kodava Ballya Namme) ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕೊಡವ ಭಾಷೆ, ನಾಡು ನುಡಿ ಬಗ್ಗೆ ವಿಶೇಷ ಪ್ರೀತಿ ಇರಬೇಕು. ಕೊಡವ ಭಾಷೆ ಕೊಡಗಿನ ಪರಿಸರ ಮತ್ತು ಪ್ರಕೃತಿಯನ್ನು ಸಂರಕ್ಷಿಸಬೇಕು. ಕೊಡವ ಭಾಷೆ ಸಂಸ್ಕøತಿ, ಕಲೆಗಳು ಉಳಿದಾಗ, ಸಮಾಜ ಉಳಿಯಲು ಸಾಧ್ಯ. ಆ ನಿಟ್ಟಿನಲ್ಲಿ ಕೊಡವ ಭಾಷೆ ಸಂಸ್ಕøತಿ ಕಲೆಗಳನ್ನು ಮತ್ತಷ್ಟು ಔನ್ನತ್ಯಕ್ಕೆ ಕೊಂಡೊಯ್ಯಬೇಕು ಎಂದು ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ನುಡಿದರು.

ಕೊಡವ (Kodava) ಭಾಷಿಕ ಜನರು ಸೇನೆ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಕೇಂದ್ರ ನಾಗರಿಕ ಸೇವೆಯಲ್ಲಿಯೂ ಹಲವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆ ದಿಸೆಯಲ್ಲಿ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಒಳ್ಳೆಯ ಹೆಸರು ಗಳಿಸಬೇಕು ಎಂದರು. ಕೊಡವ ಭಾಷೆ, ಸಂಸ್ಕೃತಿ, ಕಲೆ ಸಾಹಿತ್ಯ ಉಳಿಸುವಲ್ಲಿ ಎಲ್ಲರೂ ಕೈಜೋಡಿಸಬೇಕು. ಎಲ್ಲರ ಪ್ರೀತಿ ವಿಶ್ವಾಸ ಗಳಿಸುವಂತಾಗಬೇಕು ಎಂದರು.

ಕೋವಿಹಕ್ಕು ಕುರಿತು ಮಾತನಾಡಿದ ಶಾಸಕರು ಕೊಡವ ಭಾಷಿಕರ ಸಂಪ್ರದಾಯ, ಪರಂಪರೆ, ಆಚಾರಗಳಿಗೆ ಯಾವುದೇ ರೀತಿಯ ಅಡ್ಡಿಯಿಲ್ಲ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಅಜ್ಜಿನಿಕಂಡ ಮಹೇಶ್ ನಾಚಯ್ಯ ಅವರು ಮಾತನಾಡಿ ಕೊಡವ ಭಾಷಿಕರ ಪರಂಪರೆ ಹೆಗ್ಗುರುತುಗಳಾದ ಐನ್‍ಮನೆ, ಮುಂದ್‍ಮನೆ, ಕೈಮಡ, ಅಂಬಲ, ಮಂದ್-ಮಾನಿ, ಕೇಕೊಳ- ತೂಟ್‍ಂಗಳ, ಆರೋಡಗಳನ್ನು ಉಳಿಸಿಕೊಂಡು ಹೋಗಲು ಸರ್ಕಾರದಿಂದ ಸೌಲಭ್ಯ ಒದಗಿಸುವಂತಾಗಬೇಕು. ಜೊತೆಗೆ ಪ್ರತ್ಯೇಕ ಪರಿಹಾರ ನಿಧಿ ಸ್ಥಾಪಿಸುವಂತಾಗಬೇಕು ಎಂದು ಕೋರಿದರು.

Kodava Ballya Namme

ಕೊಡಗಿನ ಮೂಲ ಹಾಗೂ ಆದಿ ಜನಸಂಕುಲವಾಗಿರುವ ಕೊಡವ ಜನಾಂಗದ ಅಸ್ತಿತ್ವ, ಪುರಾಣ, ಸೇವೆ-ಸಾಧನೆ, ಪಾಂಡಿತ್ಯ, ನೆಲ-ಜಲ ಸಂರಕ್ಷಿಸುವಲ್ಲಿ ಕೊಡಗಿನ ಊರು-ನಾಡು, ಕೇರಿ-ಕಾಡು, ಗದ್ದೆ-ತೋಟ, ಬೆಟ್ಟ-ಗುಡ್ಡ, ಓಣಿ, ಗಿರಿ ಕಂದರಗಳ ಹೆಸರುಗಳನ್ನು ಹೊಂದಿದ್ದು, ಕೊಡಗಿನ ಅಸ್ಮಿತೆ ಮತ್ತು ನಾಗರಿಕತೆಯ ಕುರುಹುಗಳಾಗಿವೆ. ಇವುಗಳ ಸಂರಕ್ಷಣೆ ಅತ್ಯಗತ್ಯವಾಗಿದೆ ಎಂದರು.

ಪುತ್ತರಿ ಹುತ್ತರಿಯಾಗಿ, ಕೈಲ್ ಪೊವ್ದ್ ಕೈಲು ಮೂಹೂರ್ತವಾಗಿ, ಮೂಂದ್ ನಾರ್ಡ್-ಮೂರ್ನಾಡು ಆಗಿ, ಪೆಗ್ಗಳ-ಹೆಗ್ಗಳವಾಗಿ, ಬಲಂಬೇರಿ-ಬಲಮುರಿಯಾಗಿ, ಪುದಿಕೇರಿ-ಹುದಿಕೇರಿಯಾಗಿ, ಬೊಳ್ಳರಿಮಾಡ್-ಬೆಳ್ಳೆರಿಮಾಡು ಆಗಿ, ಬುಟ್ಟಂಗಾಲ -ಬಿಟ್ಟಿಂಗಾಲವಾಗಿ, ಪಟ್ಟಿಪೊಳೆ-ಹಟ್ಟಿಹೊಳೆಯಾಗಿ, ಬೊಳ್ಳುಮಾಡ್-ಬೆಳ್ಳುಮಾಡು ಆಗಿ, ಬೊಳ್ಯಪ್ಪ-ಬೆಳ್ಯಪ್ಪ, ಬೆಂಜಕಾರ್ಡ್-ಬೆಂದಕಾಡು ಆಗಿ ಬದಲಾಗಿದೆ. ಆದ್ದರಿಂದ ಈ ಸ್ಥಳದ ಮರು ನಾಮಕರಣ ಮಾಡುವಂತಾಗಬೇಕು ಎಂದು ಶಾಸಕರಲ್ಲಿ ಕೋರಿದರು.

ಕೊಡವ ಸಂಸ್ಕೃತಿಯ ಅವಿಭಾಜ್ಯ ಅಂಗ ಎಣಿಸಿಕೊಂಡಿರುವ ಕೊಡವ ಆಭರಣಗಳಾದ ಪತ್ತಾಕ್, ಅಡ್ಡಿಗೆ, ಕೊಕ್ಕೆತಾತಿ, ಜೋಮಾಲೆ, ಎಣೆ ಕಡಗ ಮೊದಲಾದ ಸಾಂಪ್ರದಾಯಿಕ ಆಭರಣ ಹಾಗೆಯೇ ಉಡುಪುಗಳಾದ ಬೊಳ್‍ತ ಕುಪ್ಯ, ಕರ್ತ ಕುಪ್ಯ, ಚೇಲೆ, ಪೀಚೆ ಕತ್ತಿ, ಕೋರೆ ಕೆಟ್ಟ್, ಪಾನಿ ಕೆಟ್ಟ್, ಕೊಡವತಿ ಪೊಡಿಯ(ಸೀರೆ) ಕೊಡವರ ಪಾರಂಪರಿಕ ಉಡುಪುಗಳಾಗಿ ಘೋಷಿಸಬೇಕು ಎಂದರು.

ಕೊಡವ ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇಧಕ್ಕೆ ಸೇರ್ಪಡೆಗೊಳಿಸಬೇಕು. ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವ ಮೂಲಕ ಕೊಡವ ಭಾಷೆಗೆ ಸಂವಿಧಾನಿಕ ಭದ್ರತೆ ಒದಗಿಸಿಕೊಡಬೇಕೆಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರು ಮನವಿ ಮಾಡಿದರು. ಕೊಡವ ಸಂಸ್ಕøತಿ, ಜಾನಪದ ಕಲೆ, ಇತಿಹಾಸ, ಪುರಾಣಗಳನ್ನು ಹೊಂದಿರುವ ಶ್ರೀಮಂತ ಸಂಸ್ಕøತಿಯ ಭಾಷೆಯಾಗಿದ್ದು, ಕರ್ನಾಟಕ ರಾಜ್ಯದ ಆಡಳಿತದಲ್ಲಿ 2 ನೇ ಭಾಷೆಯ ಸ್ಥಾನ ನೀಡಬೇಕು ಎಂದು ಕೋರಿದರು.

ಆಕರ್ಷಕ ಮೆರವಣಿಗೆ: ಅಮ್ಮತ್ತಿಯ ಹೊಸೂರು ಜಂಕ್ಷನ್‍ನಿಂದ ಕೊಡವ ಸಮಾಜದವರೆಗೆ ನಡೆದ ಕೊಡವ ಸಾಂಸ್ಕøತಿಕ ಜಾನಪದ ಮೆರವಣಿಗೆಗೆ ಅಮ್ಮತ್ತಿ ನಾಡಿನ ಹಿರಿಯರು ಹಾಗೂ ಸಮಾಜ ಸೇವಕರಾದ ನೆಲ್ಲಮಕ್ಕಡ ಶಂಭು ಸೋಮಯ್ಯ ಹಾಗೂ ಅಮ್ಮತ್ತಿ ರೈತ ಸಂಘದ ಅಧ್ಯಕ್ಷರಾದ ಕಾವಾಡಿಚಂಡ ಯು.ಗಣಪತಿ ಅವರು ಚಾಲನೆ ನೀಡಿದರು. ಕೊಂಬು-ಕೊಟ್ಟ್, ತಳಿಯತಕ್ಕಿ ಬೊಳಕ್, ದುಡಿಕೊಟ್ಟ್ ಪಾಟ್, ಅಜ್ಜಪ್ಪ-ತಾಯವ್ವ ತೆರೆ, ಕೊಡವ ಪೊರಪಾಡ್‍ಲ್, ನಿಪ್ಪುಲ್ ತೋಕಾಯಿ, ಒಡಿಕತ್ತಿ, ಕೈಲಾಯಿ, ಅಂದೋಳತ ಮೆರವಣಿಗೆಯಲ್ಲಿ ಆಕರ್ಷಣೀಯವಾಗಿತ್ತು. ಅಮ್ಮತ್ತಿಯ ಮುಖ್ಯ ವೃತ್ತದಲ್ಲಿ ಶಾಸಕರು ಸೇರಿದಂತೆ ಹಲವರು ಕೊಡವ ನೃತ್ಯ ಪ್ರದರ್ಶಿಸಿ ಗಮನ ಸೆಳೆದರು.

 

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷರಾದ ಅಮ್ಮಾಟಂಡ ಪಾರ್ವತಿ ಅಪ್ಪಯ್ಯ, ಬಿದ್ದಾಟಂಡ ಎಸ್.ತಮ್ಮಯ್ಯ, ಐಮುಡಿಯಂಡ ರಾಣಿಮಾಚಯ್ಯ, ಬಾಚರಣಿಯಂಡ ಪಿ.ಅಪ್ಪಣ್ಣ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಪುತ್ತರಿರ ಪಪ್ಪು ತಿಮ್ಮಯ್ಯ, ಕಂಬೆಯಂಡ ಡೀನ ಬೋಜಣ್ಣ, ಮೊಳ್ಳೆಕುಟ್ಟಂಡ ದಿನು ಬೋಜಪ್ಪ, ಕೊಂಡಿಜಮ್ಮನ ಎಂ.ಬಾಲಕೃಷ್ಣ, ಪಾನಿಕುಟ್ಟಿರ ಕೆ.ಕುಟ್ಟಪ್ಪ, ಪೊನ್ನಿರ ಯು.ಗಗನ್, ಕುಡಿಯರ ಎಂ.ಕಾವೇರಪ್ಪ, ನಾಯಂದಿರ ಆರ್.ಶಿವಾಜಿ, ಚೆಪ್ಪುಡಿರ ಎಸ್.ಉತ್ತಪ್ಪ, ನಾಯಕಂಡ ಬೇಬಿ ಚಿಣ್ಣಪ್ಪ, ಚೊಟ್ಟೆಯಂಡ ಎ.ಸಂಜು ಕಾವೇರಪ್ಪ, ನಾಪಂಡ ಸಿ.ಗಣೇಶ್, ರಿಜಿಸ್ಟ್ರಾರ್ ಚಿನ್ನಸ್ವಾಮಿ, ಅಮ್ಮತ್ತಿ ಕೊಡವ ಸಮಾಜದ ಆಡಳಿತ ಮಂಡಳಿ ಹಾಗೂ ಕೊಡವ ಬಲ್ಯ ನಮ್ಮೆ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ಇದ್ದರು. ಜಮುನ ಪ್ರಾರ್ಥಿಸಿದರು. ಅಶ್ವಿನಿ ಮತ್ತು ತಂಡದವರು ಕೊಡವ ನೃತ್ಯ ಪ್ರದರ್ಶಿಸಿದರು. ಅಜ್ಜಿಕುಟ್ಟೀರ ಗಿರೀಶ್ ಮತ್ತು ಅನಿತಾ ಅವರು ನಿರೂಪಿಸಿದರು.

coorg buzz
coorg buzz