ಮಡಿಕೇರಿ ಗ್ರಾಮಾಂತರ ಪೊಲೀಸ್ (Police) ಠಾಣಾ ವ್ಯಾಪ್ತಿಯ ಗಾಳಿಬೀಡಿನಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ/ಸರಬರಾಜು ಮಾಡುತ್ತಿದ್ದ ಆರೋಪಿ ಓರ್ವನನ್ನು ಪೊಲೀಸರು ಮಾಲು ಸಮೇತ ಬಂಧಿಸಿದ್ದಾರೆ. ಬೆಟ್ಟತ್ತೂರು ನಿವಾಸಿ ಜಿ.ಆರ್. ಕಿರಣ್ ಕುಮಾರ್ (35) ಎಂಬಾತ ಬಂಧಿಸಲ್ಪಟ್ಟಿರುವ ಆರೋಪಿಯಾಗಿದ್ದಾನೆ.
ಆರೋಪಿ ದಿನಾಂಕ 28-02-2025 ರಂದು ಗಾಳಿಬೀಡು ಗ್ರಾಮದ ಗಣಪತಿ ದೇವಾಲಯದ ಸಮೀಪದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಸರಬರಾಜು ಮಾಡಲು ಯತ್ನಿಸುತ್ತಿದ್ದುದರ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿ 43 ಗ್ರಾಂ ಗಾಂಜಾವನ್ನು ವಶ ಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಮಡಿಕೇರಿ ಪೊಲೀಸ್ ಉಪವಿಭಾಗದ ಡಿಎಸ್ಪಿ ಸೂರಜ್, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವೃತ್ತ ನಿರೀಕ್ಷಕರಾದ ಚಂದ್ರಶೇಖರ್, ಪೊಲೀಸ್ ಸಬ್ ಇನ್ಸ್ ಪೆಕ್ಟರ್ ವೆಂಕಟ್ ಮತ್ತು ಸಿಬ್ಬಂದಿಗಳ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.