ಬೇಟೋಳಿ ಪುದುಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಶ್ರದ್ಧಾ ಭಕ್ತಿಯಿಂದ ಜರುಗಿದ ಶ್ರೀ ಅಯ್ಯಪ್ಪ ಮಹೋತ್ಸವ

Share this post :

ವಿರಾಜಪೇಟೆ: ಸಮೀಪದ ಬೇಟೋಳಿ ರಾಮನಗರದಲ್ಲಿರುವ ಪುದುಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ಅಯ್ಯಪ್ಪ ಮಹೋತ್ಸವ ಹಾಗೂ ಮಕರ ಜ್ಯೋತಿ ಪೂಜಾ ಕಾರ್ಯಕ್ರಮವನ್ನು ಶ್ರದ್ಧಾ ಭಕ್ತಿಯಿಂದ ನೆರವೇರಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರುವಿನ ಅರ್ಚಕರಾದ ಪ್ರವೀಣ್ ಭಟ್ ರವರು ಪೂಜಾ ಕಾರ್ಯಕ್ರಮವನ್ನು ನೆರವೇರಿಸಿದರು. ಶ್ರೀ ಅಯ್ಯಪ್ಪ ಉತ್ಸವದ ಪ್ರಯುಕ್ತ ಬೆಳಿಗ್ಗೆ ದೇವಸ್ಥಾನದಲ್ಲಿ ದೇವತಾ ಪ್ರಾರ್ಥನೆಯನ್ನು ಮಾಡಲಾಯಿತು. ತದನಂತರ ಅರ್ಚಕರು ಗಣಪತಿ ಹೋಮವನ್ನು ನೆರವೇರಿಸಿದರು. ಶ್ರೀ ಅಯ್ಯಪ್ಪ ದೇವಸ್ಥಾನದ ಒಳ ಆವರಣದಲ್ಲಿರುವ ಶ್ರೀ ಮಹಾಗಣಪತಿ, ಶ್ರೀ ನಾಗ, ಶ್ರೀ ವನದುರ್ಗೆ ದೇವರುಗಳ ಗುಡಿಯಲ್ಲಿ ಪೂಜೆಯನ್ನು ಸಲ್ಲಿಸಲಾಯಿತು. ತದನಂತರ ಅರ್ಚಕರು ಶ್ರೀ ಅಯ್ಯಪ್ಪ ಸ್ವಾಮಿಗೆ ಹೂವಿನ ಅಲಂಕಾರವನ್ನು ಮಾಡಿ ಪೂಜೆಯನ್ನು ಸಲ್ಲಿಸಿದರು. ವಿವಿಧ ಸೇವೆಗಳನ್ನು ಈ ಸಂದರ್ಭದಲ್ಲಿ ನಡೆಸಿದರು. ದೇವಸ್ಥಾನದ ಒಳ ಆವರಣದಲ್ಲಿ ನಿರ್ಮಿಸಲಾಗಿದ್ದ ಹದಿನೆಂಟು ಮೆಟ್ಟಿಲುಗಳುಳ್ಳ ಮಂಟಪದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ಅರ್ಚಕರು ಹಾಲಿನ ಅಭಿಷೇಕ, ತುಪ್ಪದ ಅಭಿಷೇಕ, ಸೀಯಾಳದ ಅಭಿಷೇಕ ಹಾಗೂ ಪಂಚಾಮೃತ ಅಭಿಷೇಕ ಸೇವೆಗಳನ್ನು ನಡೆಸಿಕೊಟ್ಟರು. ಶ್ರೀ ಅಯ್ಯಪ್ಪ ಸ್ವಾಮಿಯಲ್ಲಿ ಭಕ್ತಿಯಿಂದ ಪ್ರಾರ್ಥಿಸಿ, ಪೂಜಿಸಿ ಅರ್ಚಕರು ಮಹಾ ಮಂಗಳಾರತಿ ಸೇವೆಯನ್ನು ನೆರವೇರಿಸಿದರು. ತದನಂತರ ಭಕ್ತಾದಿಗಳಿಗೆ ಪ್ರಸಾದ ವಿತರಣೆಯು ಜರುಗಿತು.

ಸಂಜೆ ಶಬರಿಮಲೆಯಲ್ಲಿ ಮಕರ ಜ್ಯೋತಿಯ ದರುಶನದ ಬಳಿಕ ಪುದುಪಾಡಿ ಶ್ರೀ ಅಯ್ಯಪ್ಪ ದೇವಸ್ಥಾನದಲ್ಲಿ ಮಕರ ಜ್ಯೋತಿ ಪೂಜೆಯು ಶಾಸ್ತ್ರೋಕ್ತವಾಗಿ ಜರುಗಿತು. ಈ ಸಂದರ್ಭದಲ್ಲಿ ಶ್ರೀ ಅಯ್ಯಪ್ಪ ಮೂರ್ತಿಯ ಮಂಟಪದ ಎದುರು ಪಡಿ ಪೂಜೆಯನ್ನು ನೆರವೇರಿಸಲಾಯಿತು. ಅರ್ಚಕರು ಅಯ್ಯಪ್ಪ ಸ್ವಾಮಿಗೆ ಸಂಕಲ್ಪ ವನ್ನು ಸಲ್ಲಿಸಿ ವಿಶೇಷ ಪೂಜೆಯನ್ನು ನೆರವೇರಿಸಿದರು. ತದನಂತರ ಭಕ್ತಾದಿಗಳಿಗೆ ಪ್ರಸಾದ ವಿತರಣೆಯು ಜರುಗಿತು. ಮಹಿಳಾ ಭಜನಾ ಮಂಡಳಿಯ ವತಿಯಿಂದ ಭಜನಾವಳಿ, ಸ್ಥಳೀಯ ಶಾಲಾ ಮಕ್ಕಳಿಂದ ಕುಣಿತ ಭಜನೆಯು ನಡೆಯಿತು. ಶ್ರೀ ಅಯ್ಯಪ್ಪ ಮಹೋತ್ಸವದ ಪ್ರಯುಕ್ತ ಮಧ್ಯಾಹ್ನ ಹಾಗೂ ರಾತ್ರಿ ಭಕ್ತಾದಿಗಳಿಗೆ ಅನ್ನ ಸಂತರ್ಪಣ ಸೇವೆಯು ಜರುಗಿತು. ಸ್ಥಳೀಯ ಚಿತ್ರಕಲಾ ಕಲಾವಿದರಾದ ಸುನಾದ್ ಭಾರದ್ವಾಜ್ ರವರು ಶ್ರೀ ಅಯ್ಯಪ್ಪ ಸಭಾಭವನಕ್ಕೆ ಕ್ಯಾನ್ವಾಸ್ ಪೇಂಟಿಂಗ್ ನಲ್ಲಿ ರಚಿಸಿದ ಗಣಪತಿ ಹಾಗೂ ಅಯ್ಯಪ್ಪ ಸ್ವಾಮಿ ದೇವರುಗಳ ಚಿತ್ರ ಕಲಾಕೃತಿಗಳನ್ನು ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯವರಿಗೆ ಹಸ್ತಾಂತರಿಸಿದರು.

ಮಹಾಗಣಪತಿ ದೇವರಿಗೆ ಬೆಳ್ಳಿಯ ಮುಖ ಕವಚದ ಸಮರ್ಪಣೆ:
ಶ್ರೀ ಅಯ್ಯಪ್ಪ ಮಹೋತ್ಸವದ ಸಂದರ್ಭದಲ್ಲಿ ತಮ್ಮ ಮನದ ಇಷ್ಟಾರ್ಥಗಳು ಈಡೇರಿದ ಫಲವಾಗಿ ದಾನಿಗಳು ಹಾಗೂ ದೇವಸ್ಥಾನದ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಬಿ . ಜಿ.ನಂದ ಬೋರ್ಕರ್, ಗೀತಾ ಬೋರ್ಕರ್ ದಂಪತಿಗಳು ಹಾಗೂ ಬೆಂಗಳೂರಿನ ದಾನಿಗಳಾದ ಪದ್ಮನಾಭ ಮಡ್ಕೇಕರ್, ಜಯ ದಂಪತಿಗಳು ದೇವಸ್ಥಾನದ ಒಳ ಆವರಣದಲ್ಲಿರುವ ಶ್ರೀ ಮಹಾಗಣಪತಿ ದೇವರಿಗೆ ಬೆಳ್ಳಿಯ ಮುಖ ಕವಚ ಹಾಗೂ ಶ್ರೀ ನಾಗದೇವರಿಗೆ ಹಿತ್ತಾಳೆಯ ಮುಖ ಕವಚವನ್ನು ಕೊಡುಗೆಯಾಗಿ ನೀಡಿದ್ದು ಇದನ್ನು ಈ ಸಂದರ್ಭದಲ್ಲಿ ದೇವರಿಗೆ ತೊಡಿಸುವುದರ ಮೂಲಕ ಸಮರ್ಪಣೆಯನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಸಂತೋಷ್,ಉಪಾಧ್ಯಕ್ಷರುಗಳಾದ ನಂದ ಬೋರ್ಕರ್, ಶೈಲೇಶ್ ಕಾಮತ್, ಕಾರ್ಯದರ್ಶಿ ಶಾಂತಿಭೂಷಣ್,ಸದಸ್ಯರುಗಳಾದ ರಾಮಶರ್ಮ ,ವಾಸುದೇವ ಬಿ. ಆರ್., ಶ್ರೀಕಾಂತ್ ರಾವ್, ವೀಣಾ, ತೀರ್ಥರಾಮ್, ಸುಮನ ಬಿ. ಪಿ., ದಿನೇಶ್, ಸೀತಮ್ಮ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

coorg buzz
coorg buzz