ವಿರಾಜಪೇಟೆಯ ಕಾಡಂಚಿನ ಪ್ರದೇಶಗಳಲ್ಲಿ ಕಾಡಾನೆ ಹಾವಳಿಯನ್ನು ನಿಯಂತ್ರಿಸಲು ಸರ್ಕಾರ 22 ಕೋಟಿ ರೂ, ಬಿಡುಗಡೆಗೆ ಮಂಜೂರಾತಿ ನೀಡಿದ್ದು, ಆ ನಿಟ್ಟಿನಲ್ಲಿ ವಿವಿಧ ಪ್ರದೇಶದ 15 ಕಿ.ಮೀ. ವ್ಯಾಪ್ತಿಯಲ್ಲಿ ರೈಲ್ವೆ ಬ್ಯಾರಿಕೇಡ್ ನಿರ್ಮಾಣದ ಪ್ರಕ್ರಿಯೆಗೆ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಮಂಗಳವಾರ ಚಾಲನೆ ನೀಡಿದರು.
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಬಿ.ಶೆಟ್ಟಿಗೇರಿ ಗ್ರಾ.ಪಂ.ವ್ಯಾಪ್ತಿಯ ಕುಟ್ಟಂದಿಯಲ್ಲಿ 3 ಕಿ.ಮೀ.ಉದ್ದ ಹಾಗೂ ನಾಗರಹೊಳೆ ಆಭಯಾರಣ್ಯ ವ್ಯಾಪ್ತಿಯ 11 ಕಿ.ಮೀ.ಉದ್ದದ ರೈಲ್ವೆ ಬ್ಯಾರಿಕೇಡ್ ನಿರ್ಮಾಣದ ಪ್ರಕ್ರಿಯೆಗೆ ಶಾಸಕರಾದ ಎ.ಎಸ್.ಪೊನ್ನಣ್ಣ (A S Ponnanna) ಅವರು ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಹಾಗೂ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಅವರು ಕೊಡಗು ಜಿಲ್ಲೆಯಲ್ಲಿ ಮಾನವ ಮತ್ತು ವನ್ಯಪ್ರಾಣಿಗಳ ಸಂಘರ್ಷವು ಹಲವು ವರ್ಷಗಳಿಂದ ಇದೆ.
ಇದರಿಂದ ಸ್ಥಳೀಯರು ತುಂಬಾ ತೊಂದರೆಯಾಗಿದೆ.ಶಾಶ್ವತವಾಗಿ ವನ್ಯಪ್ರಾಣಿ ಹಾವಳಿ ನಿಯಂತ್ರಿಸಲು ಅಗತ್ಯವಿರುವ ಕಡೆ ರೈಲ್ವೆ ಬ್ಯಾರಿಕೇಡ್, ಸೋಲಾರ್ ಬೇಲಿ ನಿರ್ಮಾಣ ಹಾಗೂ ಆನೆ ಕಂದಕ ನಿರ್ಮಾಣಕ್ಕೆ ಮುಂದಾಗಲಾಗಿದೆ ಎಂದರು. ವನ್ಯಪ್ರಾಣಿ ಹಾವಳಿ ತಡೆಯಲು ಸರ್ಕಾರ ಹಲವು ಯೋಜನೆಗಳು ಹಾಗೂ ಕಾರ್ಯಕ್ರಮ ರೂಪಿಸಿದೆ. ಆ ನಿಟ್ಟಿನಲ್ಲಿ ನಾಗರಿಕರು, ಅಧಿಕಾರಿಗಳು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ ಎಂದರು.
ವನ್ಯಪ್ರಾಣಿ ಹಾವಳಿ ನಿಯಂತ್ರಿಸುವಲ್ಲಿ ಅಗತ್ಯ ಕ್ರಮಕೈಗೊಂಡು ಮಾನವ ಪ್ರಾಣ ಉಳಿಸುವುದು, ಬೆಳೆ ಹಾನಿಯನ್ನು ತಡೆಯುವುದು ಪ್ರಮುಖವಾಗಿದೆ. ಆ ನಿಟ್ಟಿನಲ್ಲಿ ಅರಣ್ಯ ಸಚಿವರು ಮತ್ತು ಮುಖ್ಯಮಂತ್ರಿ ಅವರ ಗಮನಕ್ಕೆ ತಂದಾಗ, 22 ಕೋಟಿ ರೂ. ವಿಶೇಷ ಅನುದಾನ ಬಿಡುಗಡೆಗೆ ಮಂಜೂರಾತಿ ನೀಡಿದ್ದಾರೆ ಎಂದು ಎ.ಎಸ್.ಪೊನ್ನಣ್ಣ ಅವರು ತಿಳಿಸಿದರು.
ದಕ್ಷಿಣ ಕೊಡಗಿನ ವಿವಿಧ ಕಡೆಗಳಲ್ಲಿ ವನ್ಯಪ್ರಾಣಿಗಳ ಹಾವಳಿ ಪ್ರದೇಶಕ್ಕೆ ಭೇಟಿ ನೀಡಿ ಸ್ಥಳೀಯರಿಂದ ಮಾಹಿತಿ ಪಡೆದು ವನ್ಯಪ್ರಾಣಿಗಳ ಹಾವಳಿ ತಪ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದರು. ವನ್ಯಪ್ರಾಣಿಗಳ ಹಾವಳಿ ಪ್ರದೇಶಕ್ಕೆ ಭೇಟಿ ನೀಡಿ ಸ್ಥಳೀಯರ ವಿಶ್ವಾಸ ಪಡೆದು, ಕೃಷಿಕರು, ಅರಣ್ಯ ಇಲಾಖೆ ಅಧಿಕಾರಿಗಳು, ವನ್ಯಜೀವಿ ಮಂಡಳಿಯವರು ಹೀಗೆ ಎಲ್ಲರ ಜೊತೆ ಚರ್ಚಿಸಿ ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗಿದೆ ಎಂದು ಎ.ಎಸ್.ಪೊನ್ನಣ್ಣ ಅವರು ವಿವರಿಸಿದರು.
ರೈಲ್ವೆ ಬ್ಯಾರಿಕೇಡ್‍ಗಳ ನಿರ್ಮಾಣ, ಸೋಲಾರ್ ಬೇಲಿ ನಿರ್ಮಾಣದಿಂದ ಶೇ.80 ರಷ್ಟಾದರೂ ವನ್ಯಪ್ರಾಣಿಗಳನ್ನು ನಿಯಂತ್ರಿಸಬಹುದಾಗಿದೆ ಎಂದರು. ಪರಿಸರ ಸಂರಕ್ಷಣೆ ಜೊತೆಗೆ ವನ್ಯಪ್ರಾಣಿಗಳಿಗೂ ಯಾವುದೇ ರೀತಿಯ ತೊಂದರೆಯಾಗದಂತೆ ಗಮನಹರಿಸಲಾಗಿದೆ. ಎಲ್ಲರ ಸಹಕಾರದಿಂದ ಕಾಡುಪ್ರಾಣಿ ಹಾವಳಿ ತಡೆಯಲು ಮುಂದಾಗಲಾಗಿದೆ ಎಂದರು.
ಈ ಸಂದರ್ಭದಲ್ಲಿ ವನ್ಯಜೀವಿ ಮಂಡಳಿ ಸದಸ್ಯರಾದ ಸಂಕೇತ್ ಪೂವಯ್ಯ ಅವರು ಮಾತನಾಡಿ ವನ್ಯಜೀವಿ ಹಾಗೂ ಮಾನವ ಸಂಘರ್ಷವನ್ನು ತಡೆದು ಶಾಶ್ವತವಾಗಿ ವೈಜ್ಞಾನಿಕ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗಿದೆ ಎಂದರು. ಮಾನ್ಯ ಶಾಸಕರ ಪ್ರಯತ್ನದಿಂದ 21 ಕೋಟಿ ರೂ. ವಿಶೇಷ ಅನುದಾನ ಬಿಡುಗಡೆಯಾಗಿದೆ. ವನ್ಯಪ್ರಾಣಿಗಳ ಹಾವಳಿ ನಿಯಂತ್ರಿಸಲು ವೈಜ್ಞಾನಿಕವಾಗಿ ಪರಿಹಾರ ಕಂಡುಕೊಳ್ಳುವಲ್ಲಿ ಶ್ರಮಿಸಲಾಗುತ್ತದೆ ಎಂದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ನೆಹರು ಅವರು ಮಾತಮಾಡಿ ಮಾನವ ಮತ್ತು ವನ್ಯಪ್ರಾಣಿಗಳ ಸಂಘರ್ಷ ತಪ್ಪಿಸುವಲ್ಲಿ ಸರ್ವೆ ಕಾರ್ಯಕ್ಕೆ ಚಾಲನೆ ನೀಡಿ ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಮಾಡಲಾಗುತ್ತಿದೆ. ಅಗತ್ಯವಿರುವ ಕಡೆ ಸೋಲಾರ್ ಬೇಲಿ ನಿರ್ಮಾಣ ಮಾಡಲಾಗುತ್ತದೆ ಎಂದರು. ಅರಣ್ಯ ಇಲಾಖೆ ಎಲ್ಲಾ ಹಂತದ ಸಿಬ್ಬಂದಿಗಳು ಸದಾ ಜಾಗೃತರಾಗಿದ್ದು, ವನ್ಯಪ್ರಾಣಿಗಳ ಹಾವಳಿ ತಪ್ಪಿಸಲು ಶ್ರಮಿಸುತ್ತಿದ್ದಾರೆ. ಆ ನಿಟ್ಟಿನಲ್ಲಿ ಸ್ಥಳೀಯರ ಸಹಕಾರವು ಅತ್ಯಗತ್ಯ ಎಂದು ಹೇಳಿದರು.
ಮತ್ತೊಬ್ಬ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್ ಅವರು ಮಾತನಾಡಿ ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲ್ಲೂಕಿನಲ್ಲಿ ಕಾಡಂಚಿನ ಸುಮಾರು 182 ಗ್ರಾಮಗಳು ಬರಲಿದ್ದು, ವನ್ಯಪ್ರಾಣಿಗಳ ಹಾವಳಿಯನ್ನು ನಿಯಂತ್ರಿಸಲು ಪ್ರಯತ್ನಿಸಲಾಗಿದೆ. ವನ್ಯಪ್ರಾಣಿಗಳ ಚಲನವಲನಗಳ ಬಗ್ಗೆ ಹೆಚ್ಚಿನ ನಿಗಾವಹಿಸಲಾಗಿದ್ದು, ಆ ನಿಟ್ಟಿನಲ್ಲಿ ಸ್ಥಳೀಯರಿಗೆ ಮಾಹಿತಿ ನೀಡಲಾಗುತ್ತಿದೆ ಎಂದರು. ಆ ನಿಟ್ಟಿನಲ್ಲಿ ಅರಣ್ಯ ಇಲಾಖೆಯಿಂದ 17 ತಂಡಗಳನ್ನು ರಚಿಸಲಾಗಿದೆ. ಸ್ಥಳೀಯರಿಗೆ ಎಸ್‍ಎಂಎಸ್ ಮೂಲಕ ವನ್ಯಪ್ರಾಣಿಗಳ ಚಲನವಲನ ಬಗ್ಗೆ ಮಾಹಿತಿ ನೀಡಲಾಗುತ್ತಿದೆ ಎಂದರು.