ಕ್ಲೋಸ್‌ಬರ್ನ್ : ವರ್ಗಾವಣೆಯಾದ ಶಿಕ್ಷಕಿ ಸುಜಾತ ಅವರಿಗೆ ಆತ್ಮೀಯ ಬೀಳ್ಕೊಡುಗೆ

Share this post :

ಮಡಿಕೇರಿ : ಕ್ಲೋಸ್‌ಬರ್ನ್‌ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ವರ್ಗಾವಣೆಯಾದ ಮುಖ್ಯಶಿಕ್ಷಕಿ ಡಿ.ಎಂ. ಸುಜಾತ ಅವರಿಗೆ ಬೀಳ್ಕೊಡುಗೆ ಸಮಾರಂಭ ಶುಕ್ರವಾರ ನಡೆಯಿತು.
ಶಾಲಾಭಿವೃದ್ಧಿ ಸಮಿತಿ ಹಾಗೂ ಪೋಷಕರ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಸುಜಾತ ಅವರ ಸೇವೆಯನ್ನು ಗೌರವಿಸಿ ಆತ್ಮೀಯವಾಗಿ ಬೀಳ್ಕೊಡಲಾಯಿತು. ಶಾಲೆಯಲ್ಲಿ 11 ವರ್ಷ ಕಾಲ ಮುಖ್ಯಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದ ಸುಜಾತ ಅವರು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದರು. ಜೊತೆಗೆ ಶಾಲೆಯ ಅಭಿವೃದ್ಧಿ ವಿಚಾರದಲ್ಲೂ ಯಾವುದೇ ರೀತಿಯಲ್ಲಿ ರಾಜೀಯಾಗದೆ ಶ್ರಮಿಸಿದರು ಎಂದು ಪೋಷಕರು ನೆನಪಿಸಿಕೊಂಡರು.
ಗೌರವ ಸ್ವೀಕರಿಸಿ ಮಾತನಾಡಿದ ಸುಜಾತ, ತನಗೆ ಆರಂಭದಿಂದಲೂ ಗ್ರಾಮಸ್ಥರು ಹಾಗೂ ಪೋಷಕರಿಂದ ಉತ್ತಮ ಸಹಕಾರ ಸಿಕ್ಕಿತು. ಅದರ ಪರಿಣಾಮವಾಗಿ ಶಾಲೆಯಲ್ಲಿ ಹಲವು ಕಾರ್ಯಕ್ರಮಗಳನ್ನು ಪರಿಚಯಿಸಲು ಸಾಧ್ಯವಾಯಿತು. ಮಕ್ಕಳಿಗೆ ಪಠ್ಯ ಕಲಿಕೆ ಜೊತೆಗೆ ಕ್ರೀಡಾಕೂಟ, ಸಾಂಸ್ಕೃತಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಅನೇಕ ಹೆಚ್ಚಿನ ಪ್ರೋತ್ಸಾಹ ನೀಡಿದ್ದೇವೆ. ಜೊತೆಗಿದ್ದ ಸಹಶಿಕ್ಷಕರ ಸಹಕಾರದಿಂದ ಎಲ್ಲವೂ ಸಾಧ್ಯವಾಯಿತು ಎಂದು ಸ್ಮರಿಸಿದರು.
ಎಸ್‌ಡಿಎಂಸಿ ಮಾಜಿ ಅಧ್ಯಕ್ಷರಾದ ಹೊನ್ನಪ್ಪ ಆಚಾರ್ಯ, ಕೆ.ಕೆ. ಬಾಲಕೃಷ್ಣ, ಹಳೆ ವಿದ್ಯಾರ್ಥಿ ಕಿಶೋರ್‌ ರೈ ಕತ್ತಲೆಕಾಡು, ಗ್ರಾಮ ಪಂಚಾಯಿತಿ ಸದಸ್ಯೆ ಪ್ರಭಾವತಿ, ಸ್ಥಳೀಯರಾದ ಚಂದ್ರಶೇಖರ ರೈ ಮಾತನಾಡಿದರು.
ಶಾಲಾಭಿವೃದ್ಧಿ ಸಮಿತಿ ಹಾಗೂ ಪೋಷಕರು ಉಡುಗೊರೆ ನೀಡಿ ಸುಜಾತ ಅವರನ್ನು ಗೌರವಿಸಿದರು. ಸುಜಾತ ಅವರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಭೋಜನ ವ್ಯವಸ್ಥೆ ಕಲ್ಪಿಸಿದ್ದರು. ಎಸ್‌ಡಿಎಂಸಿ ಅಧ್ಯಕ್ಷ ನವೀನ್‌ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಜಯಶ್ರೀ, ಪ್ರಭಾರ ಮುಖ್ಯಶಿಕ್ಷಕಿ ಲಕ್ಷ್ಮೀ, ಕಡಗದಾಳು ಗ್ರಾಪಂ ಸದಸ್ಯೆ ಬಿ.ಎನ್.‌ ಪುಷ್ಪಾವತಿ, ಶಿಕ್ಷಣ ಇಲಾಖೆಯ ಪ್ರಸಾದ್‌, ಸಹಶಿಕ್ಷಕರು ಮತ್ತಿತರರಿದ್ದರು. ಶಾಲೆ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಿಕ್ಷಕಿ ಉಷಾ ಕಾರ್ಯಕ್ರಮ ನಿರೂಪಿಸಿದರು.

coorg buzz
coorg buzz