ಬೆಂಗಳೂರು : ಏ.5ರಿಂದ ಮೇ.2ರವರೆಗೆ ನಾಪೋಕ್ಲುವಿನ ಜ.ತಿಮ್ಮಯ್ಯ ಮೈದಾನದಲ್ಲಿ ನಡೆಯಲಿರುವ ಕೊಡವ ಕೌಟುಂಬಿಕ ‘ಚೇನಂಡ ಕಪ್ ಹಾಕಿ’ ಉತ್ಸವದ ಲಾಂಛನವನ್ನು ಬೆಂಗಳೂರಿನ ಗೃಹ ಕಚೇರಿ ಕೃಷ್ಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅನಾವರಣಗೊಳಿಸಿದರು.
ಈ ವೇಳೆ ಮಾತನಾಡಿದ ಅವರು, ಕೊಡವರು ಅಂದ್ರೆ ಹಾಕಿ. ಹಾಕಿ ಅಂದ್ರೆ ಕೊಡವರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೊಡಗಿನ ಹಾಕಿ ಪಟುಗಳು ಮಿಂಚಿದ್ದಾರೆ. ದೇಶಕ್ಕೆ ಕೀರ್ತಿ ತಂದಿದ್ದಾರೆ. ಏಷ್ಯನ್ ಗೇಮ್ಸ್ ಸೇರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಹೆಮ್ಮೆ ಮತ್ತು ಘನತೆ ತಂದುಕೊಟ್ಟಿದ್ದಾರೆ ಎಂದರು. ಚೇನಂಡ ಹಾಕಿ ಪಂದ್ಯಾವಳಿಗೆ ಸರ್ಕಾರದಿಂದ ಒಂದು ಕೋಟಿ ಅನುದಾನ ಒದಗಿಸಲಾಗುವುದು. ಪಂದ್ಯಾವಳಿ ನೋಡಲು ನಾನೂ ಬರುತ್ತೇನೆ ಎಂದು ಇದೇ ಸಂದರ್ಭ ಸಿಎಂ ಸಿದ್ದರಾಮಯ್ಯ ಹೇಳಿದರು.
ಈ ಸಂದರ್ಭ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ಶಾಸಕರಾದ ಎ.ಎಸ್ ಪೊನ್ನಣ್ಣ, ಸಚಿವರಾದ ಎನ್.ಎಸ್ ಬೋಸರಾಜು, ಬೈರತಿ ಸುರೇಶ್, ಶಿವರಾಜ್ ತಂಗಡಗಿ, ಶಾಸಕ ರಾಘವೇಂದ್ರ ಹಿಟ್ನಾಳ್, ಚೇನಂಡ ಹಾಕಿ ಉತ್ಸವ ಸಮಿತಿ ಅಧ್ಯಕ್ಷ ಸಿ.ಪಿ ಕರುಂಬಯ್ಯ ಸೇರಿದಂತೆ ಪದಾಧಿಕಾರಿಗಳು, ಚೇನಂಡ ಕುಟುಂಬಸ್ಥರು ಹಾಜರಿದ್ದರು.



