ಮಡಿಕೇರಿ : ಸಚಿವ ಸಂಪುಟ ಪುನಾರಚನೆಯಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮವಾಗಿದ್ದು, ಅಗತ್ಯ ಬಿದ್ದಲ್ಲಿ ಸಚಿವ ಸ್ಥಾನ ಬಿಡಲು ಎಲ್ಲರೂ ಸಿದ್ದರಿದ್ದೇವೆ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜ್ ಹೇಳಿದರು.
ಮಡಿಕೇರಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಪ್ರಬುದ್ಧರಿದ್ದಾರೆ. ಕರ್ನಾಟಕಕ್ಕೆ ಹಾಗೂ ಕಾಂಗ್ರೆಸ್ಗೆ ಇಬ್ಬರ ಅಗತ್ಯತೆ ಇದೆ. ಸಂಪುಟ ಪುನಾರಚನೆ ವಿಚಾರದಲ್ಲಿ ಹೈಕಮಾಂಡ್ ಏನು ಹೇಳುತ್ತದೆಯೋ ಹಾಗೆ ನಡೆದುಕೊಳ್ಳುತ್ತೇವೆಂದರು.
140 ವರ್ಷಗಳ ಇತಿಹಾಸವಿರುವ ಕಾಂಗ್ರೆಸ್ನಲ್ಲಿ ಎಲ್ಲಾ ಮುಖ್ಯ ತೀರ್ಮಾನಗಳನ್ನು ಹೈಕಮಾಂಡ್ ತೆಗೆದುಕೊಳ್ಳುತ್ತದೆ. ಹಿಂದಿನಿಂದಲೂ ಬಂದ ಸಂಪ್ರದಾಯ. ನಮ್ಮಲ್ಲಿ ವಿಧಾನ ಪರಿಷತ್ ಸದಸ್ಯರು ಸೇರಿ 175 ಮಂದಿ ಸಚಿವ ಸ್ಥಾನಕ್ಕೆ ಅರ್ಹರಿದ್ದಾರೆ. ಸದ್ಯ ನಡೆಯುತ್ತಿರುವ ಸಿಎಂ ಬದಲಾವಣೆ ಚರ್ಚೆ ಅಪ್ರಸ್ತುತ ಎಂದರು.
ಸಿದ್ದರಾಮಯ್ಯ ಆಪ್ತ, ಮಾಜಿ ಸಚಿವ ಕೆ.ಎನ್ ರಾಜಣ್ಣ ಔತಣಕೂಟ ಹಮ್ಮಿಕೊಂಡಿರುವ ಬಗ್ಗೆ ಪ್ರತಿಕ್ರಿಯಿಸಿ, ಪರಸ್ಪರ ಭೇಟಿಯಾಗುವುದು, ಚರ್ಚೆ ಮಾಡುವುದು ಪಕ್ಷದಲ್ಲಿ ಸಾಮಾನ್ಯ. ಇದರಲ್ಲಿ ರಾಜಕೀಯವೇನಿಲ್ಲ ಅಂತ ಹೇಳಿದರು.



