ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿಯವರ ತಿಂಗಳ ʼಮನದ ಮಾತುʼ ಕಾರ್ಯಕ್ರಮದಲ್ಲಿ ದೇಶದ ವೈಶಿಷ್ಟ್ಯತೆಯನ್ನು ಉಲ್ಲೇಖಿಸುತ್ತಾ ಇರುತ್ತಾರೆ. ಈ ಬಾರಿ ಕಾಫಿ ಬಗ್ಗೆ ಪ್ರಸ್ತಾಪಿಸುತ್ತಾ ಕೊಡಗು ಜಿಲ್ಲೆಯ ಕೊಡುಗೆಯನ್ನು ಕೊಂಡಾಡಿದ್ದಾರೆ.
ಅ.26ರಂದು ಪ್ರಸಾರವಾದ ಮನ್ ಕೀ ಬಾತ್ 127ನೇ ಸಂಚಿಕೆಯಲ್ಲಿ, ದಕ್ಷಿಣ ಭಾರತದಲ್ಲಿ ಬೆಳೆಯುವ ಕಾಫಿಯ ವಿಶೇಷತೆ ಬಗ್ಗೆ ಮಾತನಾಡಿದರು. ದೇಶದ ಒಟ್ಟು ಕಾಫಿ ಉತ್ಪನ್ನದ ಪೈಕಿ ಶೇ 70ರಷ್ಟನ್ನು ಕರ್ನಾಟಕದಲ್ಲೇ ಬೆಳೆಯಲಾಗುತ್ತಿದೆ. ನಂತರದ ಸ್ಥಾನದಲ್ಲಿ ಕೇರಳ, ತಮಿಳುನಾಡು, ಆಂಧ್ರ ಪ್ರದೇಶ ಮತ್ತು ಒಡಿಶಾ ಇದೆ. ದೇಶದಲ್ಲಿ ಬೆಳೆಯುವ ಕಾಫಿ ವಿಶ್ವಾದ್ಯಂತ ಪ್ರಸಿದ್ಧಿ ಪಡೆದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಕೊಡಗು, ಚಿಕ್ಕಮಗಳೂರು, ಹಾಸನ, ತಮಿಳುನಾಡಿನ ಪಳನಿ, ಶೇವರಾಯ್, ನೀಲಗಿರಿ, ಅಣ್ಣಾಮಲೈ, ಕೇರಳದ ವಯನಾಡ್, ತಿರುವಾಂಕೂರು ಮತ್ತು ಮಲಬಾರ್ ಪ್ರದೇಶಗಳಲ್ಲಿ ಕಾಫಿ ಬೆಳೆಯಲಾಗುತ್ತದೆ ಎಂದು ಪ್ರಸ್ತಾಪಿಸಿದ್ದಾರೆ.
ಈ ಬಾರಿ ಕಾಫಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ದಾಖಲೆಯ ಬೆಲೆ ಏರಿಕೆ ಕಂಡಿರುವುದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು. ಇಂಥ ಸಂದರ್ಭದಲ್ಲಿ ಪ್ರಧಾನಿಯವರು ಕಾಫಿ ಬಗ್ಗೆ ಉಲ್ಲೇಖಿಸಿ ಮಾತನಾಡಿರುವುದು ಕೂಡಾ ಬೆಳೆಗಾರರಲ್ಲಿ ಹೊಸ ಆಶಾಭಾವನೆ ಮೂಡಿಸಿದೆ.



