ಅಮೃತ್-2 ಯೋಜನೆ ಅನುಷ್ಠಾನದಿಂದ ನಗರದಲ್ಲಿ ಭೂಕುಸಿತ ಭೀತಿ – ಕೆ.ಎಂ. ಗಣೇಶ್‌ ಆತಂಕ

Share this post :

ಮಡಿಕೇರಿ : ನಗರದಲ್ಲಿ ಅಮೃತ್-2 ಯೋಜನೆಯ ಕಾಮಗಾರಿ ಅವೈಜ್ಞಾನಿಕವಾಗಿ ನಡೆಯುತ್ತಿದೆ ಎಂದು ನಗರಸಭೆ ಮಾಜಿ ಸದಸ್ಯ ಕೆ.ಎಂ. ಗಣೇಶ್‌ ಆರೋಪಿಸಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರ ನಗರ ಪುನರುಜ್ಜೀವನ ಮತ್ತು ಜಲ ಸಂರಕ್ಷಣೆಗಾಗಿ ಅಮೃತ್ 2 ಯೋಜನೆ ಜಾರಿಗೆ ತಂದಿದೆ. ನಗರದ ಜನತೆಗೆ ಈ ಯೋಜನೆಯಿಂದ ಮೂರು ಕಾಸಿನ ಪ್ರಯೋಜನವಿಲ್ಲ. ರಸ್ತೆಗಳನ್ನು ಅಗೆದು ಹಾಳು ಮಾಡಲಾಗುತ್ತಿದೆ. ಬಯಲು ಸೀಮೆಯಾದರೆ ಸಮತಟ್ಟು ಪ್ರದೇಶವಾಗಿರುವುದರಿಂದ ಸಮಸ್ಯೆ ಉಂಟಾಗುವುದಿಲ್ಲ. ಆದರೆ ಮಡಿಕೇರಿ ಗುಡ್ಡಗಾಡು ಪ್ರದೇಶ. ಇಲ್ಲಿ ಕಾಮಗಾರಿಯಿಂದ ಭೂಕುಸಿತ ಸಂಭವವೂ ಹೆಚ್ಚಿದೆ ಎಂದು ಸುದ್ದಿಗೋಷ್ಠಿಯಲ್ಲಿ ಆತಂಕ ವ್ಯಕ್ತಪಡಿಸಿದರು.
ಯುಜಿಡಿ ಕಾಮಗಾರಿಯಿಂದ ನಗರದ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಎಂಬಂತೆ ಸರ್ಕಾರದ ಹಣ ಪೋಲಾಗಿದೆ. ಈ ಬಗ್ಗೆ ಯಾರ ಮೇಲೆ ಕೇಸ್ ದಾಖಲಿಸುವುದು ಎಂದು ಪ್ರಶ್ನಿಸಿದರು. 38 ಕೋಟಿ ವೆಚ್ಚದ ಅಮೃತ್ 2 ಯೋಜನೆ ಅನುಷ್ಠಾನಗೊಳಿಸುವ ಬದಲು ರಸ್ತೆ ದುರಸ್ಥಿ ಕಾರ್ಯ ಕೈಗೆತ್ತಿಕೊಳ್ಳಬಹುದಿತ್ತು. ‘ಅಮೃತ ಅತಿಯಾದರೆ ವಿಷ’ ಎಂಬ ಮಾತಿನಂತೆ ಈ ಯೋಜನೆಯಿಂದಾಗಿ ಸಮಸ್ಯೆಗಳೇ ಹೆಚ್ಚಾಗಿದೆ. ನಗರಸಭೆ ಸದಸ್ಯರು ತುರ್ತು ಸಭೆ ನಡೆಸಿ ಇದರ ಲಾಭ-ನಷ್ಟದ ಬಗ್ಗೆ ಚರ್ಚಿಸಿ ಸೂಕ್ತ ನಿರ್ಧಾರಕ್ಕೆ ಬರಲಿ ಎಂದು ಆಗ್ರಹಿಸಿದರು.
ಪ್ರಮುಖರಾದ ಮಂಜುನಾಥ್, ಎಂ.ಪಿ ಕೃಷ್ಣರಾಜು, ಅನಿಲ್ ಕೃಷ್ಣಾನಿ, ಸುನಿಲ್, ಜಗದೀಶ್ ಸುದ್ದಿಗೋಷ್ಠಿಯಲ್ಲಿದ್ದರು.

coorg buzz
coorg buzz