ಮಡಿಕೇರಿಯಲ್ಲಿ ‘ಪೊಲೀಸ್ ಸಂಸ್ಮರಣಾ ದಿನಾಚರಣೆ’ – ಹುತಾತ್ಮ ಪೊಲೀಸರಿಗೆ ಗಣ್ಯರ ಗೌರವ ನಮನ

Share this post :

ಮಡಿಕೇರಿ : ಜಿಲ್ಲಾ ಪೊಲೀಸ್ ಘಟಕ ವತಿಯಿಂದ ‘ಪೊಲೀಸ್ ಸಂಸ್ಮರಣಾ ದಿನಾಚರಣೆ’ಯು ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಮಂಗಳವಾರ ನಡೆಯಿತು.
ಪೊಲೀಸ್ ಹುತಾತ್ಮರ ಸ್ಮಾರಕಕ್ಕೆ ಹೂಗುಚ್ಚ ಸಮರ್ಪಿಸಿ ಗಣ್ಯರು ಹಾಗೂ ಅತಿಥಿಗಳು ಗೌರವ ನಮನ ಸಲ್ಲಿಸಿದರು. ಪೊಲೀಸ್ ಹುತಾತ್ಮರ ದಿನದ ಕಾರ್ಯಕ್ರಮದಲ್ಲಿ ಪೆರೆಡ್ ಕಮಾಂಡರ್ ಆರ್.ಪಿ.ಗಣೇಶ್ ಅವರು ಗೌರವ ವಂದನೆ ಸಲ್ಲಿಸಿ, ಮುಖ್ಯ ಅತಿಥಿಗಳಿಂದ ಅನುಮತಿ ಪಡೆದರು.
ಬಳಿಕ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಾರಿಕೆ ದಿನೇಶ್ ಕುಮಾರ್, ಉಪ ಪೊಲೀಸ್ ವರಿಷ್ಠಾಧಿಕಾರಿ ಮಹೇಶ್ ಕುಮಾರ್, ಗುಪ್ತದಳ ವಿಭಾಗದ ಪೊಲೀಸ್ ನಿರೀಕ್ಷರಾದ ಐ.ಪಿ.ಮೇದಪ್ಪ, ಜಿಲ್ಲಾ ಪೊಲೀಸ್ ಲಿಪಿಕ ಸಿಬ್ಬಂದಿಗಳ ಪರವಾಗಿ ಪಿ.ಎ.ನಂಜಪ್ಪ, ನಿವೃತ್ತ ಪೊಲೀಸ್ ಅಧಿಕಾರಿಗಳ ಪರವಾಗಿ ಅಪ್ಪಯ್ಯ, ನಿವೃತ್ತ ಸೇನಾಧಿಕಾರಿಗಳ ಪರವಾಗಿ ಮೊಣ್ಣಪ್ಪ, ಜಿಲ್ಲಾ ಕಾರಾಗೃಹ ಪರವಾಗಿ ಸಂಜಯ್ ಜತ್ತಿ, ನಗರಸಭೆ ಪರವಾಗಿ ಅಧ್ಯಕ್ಷರಾದ ಪಿ.ಕಲಾವತಿ ಹಾಗೂ ಸದಸ್ಯರಾದ ಅನಿತಾ ಪೂವಯ್ಯ, ವಕೀಲರ ಸಂಘದ ಪರವಾಗಿ ಸಿ.ಟಿ.ಜೋಸೆಫ್, ಮಾಧ್ಯಮಗಳ ಪರವಾಗಿ ಚಿನ್ನಸ್ವಾಮಿ, ರೋಟರಿ ಸಂಸ್ಥೆ ಪರವಾಗಿ ಶ್ರೀಮತಿ ಲಲಿತ ರಾಘವನ್, ಲಯನ್ಸ್ ಸಂಸ್ಥೆ ಪರವಾಗಿ ಮದನ್, ವಾಣಿಜ್ಯೋದ್ಯಮಿಗಳ ಸಂಘ ಪರವಾಗಿ ಸಂತೋಷ್, ಹೋಟೆಲ್ ಅಸೋಸಿಯೇಷನ್ ಪರವಾಗಿ ದಿನೇಶ್, ಕೊಡವ ಸಮಾಜಗಳ ಪರವಾಗಿ ಎಂ.ಎನ್. ಮುತ್ತಪ್ಪ, ಗೌಡ ಸಮಾಜಗಳ ಪರವಾಗಿ ಸೂರ್ತಲೆ ಸೋಮಣ್ಣ, ಮುಸ್ಲಿಂ ಒಕ್ಕೂಟಗಳ ಪರವಾಗಿ ಅಮಿನ್ ಮೊಹಿಸಿನ್, ಪೊಲೀಸ್ ಉಪ ನಿರೀಕ್ಷರ ಪರವಾಗಿ ಗೋವಿಂದರಾಜು, ಬ್ಯಾಂಡ್ ಮಾಸ್ಟರ್ ಚೆನ್ನಕೇಶವ, ನಿಸ್ತಂತು ವಿಭಾಗದ ಪರವಾಗಿ ಧನಂಜಯ, ಮಹಿಳಾ ಪೊಲೀಸರ ಪರವಾಗಿ ಸುಮತಿ, ನಿವೃತ್ತ ಸೇನಾಧಿಕಾರಿಗಳ ಪರವಾಗಿ ಮೇಜರ್ ಕಾರ್ಯಪ್ಪ ಮತ್ತಿತರರು ಪೊಲೀಸ್ ಹುತಾತ್ಮರ ಸ್ಮಾರಕಕ್ಕೆ ಹೂಗುಚ್ಚ ಸಮರ್ಪಿಸಿ, ಗೌರವ ನಮನ ಸಲ್ಲಿಸಿದರು.
ನಂತರ ಪೊಲೀಸ್ ಕವಾಯತು ತಂಡದಿಂದ ಮೂರು ಸುತ್ತು ಕುಶಾಲ ತೋಪು ಹಾರಿಸಲಾಯಿತು. ಈ ಸಂದರ್ಭದಲ್ಲಿ ಪೊಲೀಸ್ ಬ್ಯಾಂಡ್ ತಂಡದವರು ರಾಷ್ಟ್ರಗೀತೆ ನುಡಿಸಿದರು. ಎರಡು ನಿಮಿಷ ಮೌನಾಚರಿಸಿ ಗೌರವ ಸಲ್ಲಿಸಲಾಯಿತು. ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ ಹುತಾತ್ಮರಾದ ಪೊಲೀಸರ ಹೆಸರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಸ್ಮರಿಸಿದರು.
೨೦೨೪-೨೫ ರ ಅವಧಿಯಲ್ಲಿ ದೇಶದ ಕಾನೂನು ಸುವ್ಯವಸ್ಥೆ ಕಾಪಾಡುವ ಸಂದರ್ಭದಲ್ಲಿ ರಾಷ್ಟ್ರದಲ್ಲಿ ೧೯೧ ಮಂದಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಹುತಾತ್ಮರಾಗಿದ್ದು, ಇವರಲ್ಲಿ ೮ ಮಂದಿ ಕರ್ನಾಟಕ ರಾಜ್ಯದವರಾಗಿದ್ದಾರೆ. ಮೆಬೂಬ್ ಗುಡ್ಡಲಿಲ್ ಪಿಎಸ್‌ಐ (ಬೆಂಗಳೂರು ನಗರ), ವೆಂಕಟಾಚಲಪತಿ ಕೆ.ಎನ್. ಎಎಸ್‌ಐ (ಕೆಜಿಎಫ್), ಗಿರೀಶ್ ಎಸ್ ಎಆರ್‌ಎಸ್‌ಐ (ಡಿಎಆರ್ ತುಮಕೂರು), ಬಸವರಾಜ ಎಂ (ಬೆಂಗಳೂರು ಜಿಲ್ಲೆ), ನಿಂಗರಾಜ್ ಟಿ.ಎಸ್. (ಡಿಎಆರ್ ತುಮಕೂರು ಜಿಲ್ಲೆ), ಪ್ರಕಾಶ್ ಬಿ.ಯು (೧೧ ನೇ ಪಡೆ ಕೆಎಸ್‌ಆರ್‌ಪಿ ಹಾಸನ), ಮಹೇಶ್ ಎನ್.ಆರ್. (ಬೆಂಗಳೂರು ನಗರ) ಹಾಗೂ ರಾಮಪ್ಪ ಪೂಜಾರಿ (ಡಿಎಆರ್ ದಾವಣಗೆರೆ ಜಿಲ್ಲೆ) ಇವರು ಸೇರಿದಂತೆ ಎಲ್ಲಾ ಪೊಲೀಸ್ ಹುತಾತ್ಮರ ಹೆಸರನ್ನು ಓದಿದರು. .
ರಾಷ್ಟ್ರದ ಆಂತರಿಕ ಭದ್ರತೆಯಲ್ಲಿ ಪೊಲೀಸರ ಸೇವೆ ಅನುಪಮವಾದುದು, ಶಾಂತಿ-ಸುರಕ್ಷತೆ ಕಾಪಾಡುವುದು ಹಾಗೂ ಸಮಾಜ ಘಾತುಕ ಶಕ್ತಿಗಳನ್ನು ನಿಯಂತ್ರಿಸುವಲ್ಲಿ ಪೊಲೀಸರ ಪಾತ್ರ ಹೆಚ್ಚಿನದ್ದಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದರು.
ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ ಮಾತನಾಡಿ, ಸಮಾಜದಲ್ಲಿ ಎಲ್ಲರ ಶಾಂತಿ ಮತ್ತು ನೆಮ್ಮದಿಯ ಬದುಕಿಗೆ ಪೊಲೀಸರು ತಮ್ಮ ಜೀವದ ಹಂಗನ್ನು ತೊರೆದು ಕರ್ತವ್ಯ ನಿರ್ವಹಿಸುತ್ತಾರೆ ಎಂದರು. ಪೊಲೀಸರ ಧೈರ್ಯ ಮತ್ತು ಸಾಹಸ ಶ್ಲಾಘನೀಯವಾಗಿದೆ. ಚೀನಾ ಗಡಿ ಭಾಗದ ರಕ್ಷಣೆಯಲ್ಲಿ ಜೀವವನ್ನು ತೆಕ್ಕಿಸದೆ ರಾಷ್ಟçದ ಗಡಿ ರಕ್ಷಣೆಗೆ ಪೊಲೀಸರು ಹೋರಾಡಿದ್ದಾರೆ. ರಾಷ್ಟ್ರದ ಪ್ರಗತಿ ಮತ್ತು ಅಭಿವೃದ್ಧಿಗೆ ಕಾನೂನು ಸುವ್ಯವಸ್ಥೆ ಹಾಗೂ ನೆಮ್ಮದಿಯ ಬದುಕು ಅತಿ ಮುಖ್ಯವಾಗಿದೆ. ಆ ನಿಟ್ಟಿನಲ್ಲಿ ರಾಷ್ಟ್ರದ ಆಂತರಿಕ ಭದ್ರತೆಯಲ್ಲಿ ಪೊಲೀಸರ ಕಾರ್ಯನಿರ್ವಹಣೆ ಮೆಚ್ಚುವಂತದ್ದು ಎಂದು ಹೇಳಿದರು.

coorg buzz
coorg buzz