ಮಡಿಕೇರಿ : ಕೂರ್ಗ್ ಹೋಟೇಲ್, ರೆಸಾಟ್೯ ಅಸೋಸಿಯೇಷನ್ ವತಿಯಿಂದ ಬುಧವಾರ ಕೈಗೊಳ್ಳಲಾದ ಸ್ವಚ್ಚ ಕೊಡಗು – ಸುಂದರ ಕೊಡಗು ಸ್ವಚ್ಚತಾ ಅಭಿಯಾನದ ಸಂದರ್ಭ ಜಿಲ್ಲಾದ್ಯಂತ 200 ಟನ್ ತ್ಯಾಜ್ಯ ಸಂಗ್ರಹವಾಗಿದ್ದು ಮೈಸೂರಿನ ತ್ಯಾಜ್ಯ ವಿಲೇವಾರಿ ಸಂಗ್ರಹಾಗಾರ ಸೇರಿದಂತೆ ಕೊಡಗು ಜಿಲ್ಲೆಯ ತ್ಯಾಜ್ಯ ವಿಲೇವಾರಿ ಘಟಕಗಳಿಗೆ ಇವುಗಳನ್ನು ರವಾನಿಸಲಾಗಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ ಕುಂಡ್ಯೋಳಂಡ ದಿನೇಶ್ ಕಾಯ೯ಪ್ಪ ಮಾಹಿತಿ ನೀಡಿದ್ದಾರೆ.
ಸ್ವಚ್ಚ ಕೊಡಗು – ಸುಂದರ ಕೊಡಗು ಅಭಿಯಾನದಲ್ಲಿ ಜಿಲ್ಲೆಯ 30 ಸಾವಿರದಷ್ಟು ಸ್ವಚ್ಚತಾ ಕಾರ್ಯಕರ್ತರಿಗೆ 33,800 ಕೈಕವಚ ಮತ್ತು 9,200 ತ್ಯಾಜ್ಯ ಸಂಗ್ರಹಣಾ ಬ್ಯಾಗ್‌ಗಳನ್ನು ವಿತರಿಸಲಾಗಿತ್ತು. ಜಿಲ್ಲೆಯ 178 ಸ್ಥಳಗಳಲ್ಲಿ 330 ಕ್ಕೂ ಅಧಿಕ ಸಂಘಸಂಸ್ಥಗಳಿಗೆ ಸೇರಿದ ಅಂದಾಜು 30 ಸಾವಿರದಷ್ಟು ಜನರು ಸ್ವಯಂ ಪ್ರೇರಣೆಯಿಂದ ಸ್ವಚ್ಚತಾ ರಾಯಭಾರಿಗಳಾಗಿ ಜಿಲ್ಲಾದ್ಯಂತ ಅಭಿಯಾನದಲ್ಲಿ ಪಾಲ್ಗೊಂಡಿದ್ದರು ಎಂದು ದಿನೇಶ್ ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ವೆಂಕಟ್ ರಾಜಾ ಪ್ರಯತ್ನದಿಂದ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಸಹಕಾರ ಪಡೆದು 17 ಸಂಗ್ರಹಣ ಕೇಂದ್ರಗಳಿಂದ ಪಡೆದುಕೊಂಡ ತ್ಯಾಜ್ಯವನ್ನು ಜಿಲ್ಲೆಯ 145 ತ್ಯಾಜ್ಯ ಸಂಗ್ರಹಣಾ ಮಾರ್ಗಗಳಿಂದ ಟ್ರಕ್ ಮೂಲಕ ಪಡೆದು ಕ್ಲೀನ್ ಕೂರ್ಗ್ ಇನಿಷಿಯೇಟಿವ್ ಸಂಸ್ಥೆಯ ಸಹಕಾರದೊಂದಿಗೆ ಮೈಸೂರಿಗೆ ರವಾನಿಸಲಾಗಿದೆ. ಶಾಸಕರಾದ ಎ.ಎಸ್. ಪೊನ್ನಣ್ಣ, ಡಾ.ಮಂತರ್ ಗೌಡ ಅವರ ಸಹಕಾರದಲ್ಲಿ ಮೈಸೂರಿಗೆ ಕಳುಹಿಸಲಾಗಿದೆ.
ಇದು ಕೇವಲ 1 ದಿನಕ್ಕೆ ಸೀಮಿತವಾದ ಅಭಿಯಾನ ಆಗಬಾರದು. ಸ್ವಚ್ಚ ಪರಿಸರದ ಬಗ್ಗೆ ಜಾಗ್ರತಿ ಮೂಡಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿಯೂ ಕೂರ್ಗ್ ಹೋಟೇಲ್, ರೆಸಾಟ್೯ ಅಸೋಸಿಯೇಷನ್ ವಿವಿಧ ಕಾಯ೯ಯೋಜನೆ ಹಮ್ಮಿಕೊಳ್ಳಲಿದೆ. ಸ್ವಚ್ಚ ಕೊಡಗು ಸುಂದರ ಕೊಡಗು ಅಭಿಯಾನಕ್ಕೆ ಜಿಲ್ಲೆಯಾದ್ಯಂತ ನಿರೀಕ್ಷೆಗೂ ಮೀರಿದ ಸ್ಪಂದನ ದೊರಕಿದ್ದು ಸಮಧಾನ ತಂದಿದೆ. ಕೂರ್ಗ್ ಹೋಟೇಲ್, ರೆಸಾಟ್೯ ಅಸೋಸಿಯೇಷನ್ ಈ ಅಭಿಯಾನದ ಮೂಲಕ ಕೊಡಗಿನಲ್ಲಿ ಜವಬ್ದಾರಿಯುತ ಪ್ರವಾಸೋದ್ಯಮಕ್ಕೆ ಮತ್ತಷ್ಟು ಒತ್ತು ನೀಡಿದೆ ಎಂದು ಅವರು ಹೇಳಿದರು.
ಸ್ವಚ್ಚ ಕೊಡಗು – ಸುಂದರ ಕೊಡಗು
ಸ್ವಚ್ಚ ಕೊಡಗು – ಸುಂದರ ಕೊಡಗು ಎಂಬ ಹೆಸರನ್ನು ಪತ್ರಕರ್ತ ಅನಿಲ್ ಹೆಚ್.ಟಿ. ನೀಡಿದ್ದರು. ಅಂತೆಯೇ ಅಭಿಯಾನಕ್ಕೆ ಸಂಬಂಧಿಸಿದಂತೆ ಅವರು ಸಾಮಾಜಿಕ ಜಾಲತಾಣದಲ್ಲಿ ಕೈಗೊಂಡ ಪ್ರಚಾರಕ್ಕೆ ಜಿಲ್ಲೆಯ ಹಲವೆಡೆಗಳಿಂದ ವಿವಿಧ ಭಾಷೆಗಳಲ್ಲಿ 58 ವಿಡಿಯೋಗಳನ್ನು ನಟ ನಟಿಯರು, ಪರಿಸರ ಪ್ರೇಮಿಗಳು, ಸಾರ್ವಜನಿಕರು, ವಿದ್ಯಾರ್ಥಿಗಳು ಕಳುಹಿಸಿದ್ದು, ಕೇವಲ 3 ದಿನಗಳಲ್ಲಿಯೇ ರೂಪುಗೊಂಡ ಈ ಅಭಿಯಾನದ ಸಫಲತೆಗೆ ಕಾರಣಗಳಲ್ಲೊಂದಾಯಿತು ಎಂದು ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ನಾಸಿರ್ ಅಹಮ್ಮದ್ ಶ್ಲಾಘಿಸಿದ್ದಾರೆ.
ಅಭಿನಂದನೆ ಸಲ್ಲಿಸಿದ ಜಿಲ್ಲಾಧಿಕಾರಿ
ಸ್ವಚ್ಚ ಕೊಡಗು – ಸುಂದರ ಕೊಡಗು ಅಭಿಯಾನ ಯಶಸ್ವಿಯಾದ ಸಂಬಂಧಿತ ಜಿಲ್ಲಾಧಿಕಾರಿ ವೆಂಕಟರಾಜ ಅವರು ಈ ಯಶಸ್ವಿಗೆ ಕಾರಣರಾದ ಕೊಡಗಿನ ಸರ್ವ ಜನತೆಯನ್ನು ಶ್ಲಾಘಿಸಿದ್ದಾರೆ. ಇಂಥ ಅಭಿಯಾನವನ್ನು ಕೆಲವೇ ದಿನಗಳಲ್ಲಿ ಆಯೋಜಿಸಿ ಜಿಲ್ಲೆಯಲ್ಲಿ ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸಿದ ಅಸೋಸಿಯೇಷನ್‌ನ ಸರ್ವ ಸದಸ್ಯರ ಶ್ರಮವನ್ನೂ ಜಿಲ್ಲಾಧಿಕಾರಿ ಅಭಿನಂದಿಸಿದ್ದಾರೆ.



