ಅ.12ರಂದು ಕೆ. ಎಂ. ಎ. ಪ್ರತಿಭಾ ಪುರಸ್ಕಾರ ವಿತರಣೆ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭ

KMA

Share this post :

ವಿರಾಜಪೇಟೆ: ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ವತಿಯಿಂದ ಕೊಡವ ಮುಸ್ಲಿಂ ಶಿಕ್ಷಣ ನಿಧಿಯ ಸಹಯೋಗದಲ್ಲಿ ಕೆ.ಎಂ.ಎ. ಪ್ರತಿಭಾ ಪುರಸ್ಕಾರ-2025 ವಿತರಣೆ ಮತ್ತು ಸಮುದಾಯದ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಇದೇ ತಿಂಗಳ 12ರಂದು ಭಾನುವಾರ ವಿರಾಜಪೇಟೆಯಲ್ಲಿ ಅಯೋಜಿಸಲಾಗಿದೆ ಎಂದು ಕೆ.ಎಂ.ಎ. ಅಧ್ಯಕ್ಷರಾದ ದುದ್ದಿಯಂಡ ಹೆಚ್. ಸೂಫಿ ಹಾಜಿ ತಿಳಿಸಿದ್ದಾರೆ.

ಈ ಕುರಿತು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿರಾಜಪೇಟೆಯ ಸಂತ ಅನ್ನಮ್ಮ ಪ್ಯಾರಿಶ್ ಸಭಾಂಗಣದಲ್ಲಿ ಅಂದು ಬೆಳಿಗ್ಗೆ 10:30 ಗಂಟೆಯಿಂದ ನಡೆಯುವ ಸಮಾರಂಭದಲ್ಲಿ ಅರಮೇರಿ ಶ್ರೀ ಕಳಂಚೇರಿ ಮಠದ ಪೀಠಾಧಿಪತಿಗಳಾದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ವಿಶೇಷ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿರಾಜಪೇಟೆ ಕ್ಷೇತ್ರದ ಶಾಸಕರು ಮತ್ತು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಅವರು ಆಗಮಿಸಲಿದ್ದಾರೆ. ಬೆಂಗಳೂರಿನ ಹೈಕೋರ್ಟ್ ವಕೀಲರಾಗಿರುವ ಕುವೇoಡ ಹೆಚ್. ಹಿದಾಯತುಲ್ಲಾ ಅವರು ಸಮಾರಂಭವನ್ನು ಉದ್ಘಾಟಿಸಲಿದ್ದಾರೆ ಅವರು ಎಂದು ವಿವರಿಸಿದರು.

ರಾಜ್ಯದ ಪ್ರಸಿದ್ಧ ಶಿಕ್ಷಣ ತಜ್ಞರು ಹಾಗೂ ವ್ಯಕ್ತಿತ್ವ-ಕಲಿಕೆ-ಪ್ರೇರಣ ತರಬೇತುದಾರರಾಗಿರುವ ಮೈಸೂರಿನ ಆರ್.ಎ. ಚೇತನ್ ರಾಮ್ ಅವರು ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಪ್ರಧಾನಮಂತ್ರಿಗಳ 15 ಅಂಶಗಳ ಕಾರ್ಯಕ್ರಮದ ಕೊಡಗು ಜಿಲ್ಲಾ ಅನುಷ್ಠಾನ ಸಮಿತಿಯ ಸದಸ್ಯರಾದ ನಲ್ವತ್ತೋಕ್ಲಿನ ಪಟ್ಟಿಯಡ ಎ. ಹನೀಫ್ ಸಮಾರಂಭದಲ್ಲಿ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದ ಸೂಫಿ ಹಾಜಿ, ಕೆ.ಎಂ.ಎ. ವತಿಯಿಂದ ಜರುಗುವ ಪ್ರತಿಭಾ ಪುರಸ್ಕಾರ ವಿತರಣೆ ಎಂಬ ವಾರ್ಷಿಕ ಕಾರ್ಯಕ್ರಮ ಸಮುದಾಯದ ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟವನ್ನು ಉತ್ತೇಜಿಸುವ ಜೊತೆಗೆ ಸಮುದಾಯದವರನ್ನು ಪ್ರತಿ ವರ್ಷ ಒಂದೆಡೆ ಸೇರಿಸುವ ಪ್ರಯತ್ನವಾಗಿದೆ ಎಂದು ಅವರು ಹೇಳಿದರು.

ಕಳೆದ ಶೈಕ್ಷಣಿಕ ಸಾಲಿನ ದ್ವಿತೀಯ ಪಿ.ಯು.ಸಿ., ಎಸ್.ಎಸ್. ಎಲ್.ಸಿ. ಹಾಗೂ ಮದರಸಾ ವಿಭಾಗದ 5ನೇ, 7ನೇ ಮತ್ತು 10ನೇ ತರಗತಿಯ ಪರೀಕ್ಷೆಗಳಲ್ಲಿ ಅತೀ ಹೆಚ್ಚು ಅಂಕ ಪಡೆದು ತೇರ್ಗಡೆ ಹೊಂದಿ ವ್ಯಾಸಂಗ ಮುಂದುವರಿಸುತ್ತಿರುವ ಸಂಸ್ಥೆಯ ಸದಸ್ಯರ ಪ್ರತಿಭಾನ್ವಿತ ಮಕ್ಕಳಿಗೆ ಈ ಕಾರ್ಯಕ್ರಮದಲ್ಲಿ ಕೆ.ಎಂ.ಎ. ಪ್ರತಿಭಾ ಪುರಸ್ಕಾರವನ್ನು ಪಾರಿತೋಷಕ ಮತ್ತು ನಗದು ಬಹುಮಾನಗಳೊಂದಿಗೆ ನೀಡಿ ಅವರನ್ನು ಮುಂದಿನ ವಿದ್ಯಾಭ್ಯಾಸಕ್ಕಾಗಿ ಪ್ರೋತ್ಸಾಹಿಸಲಾಗುವುದು. ಅಲ್ಲದೆ ಕಳೆದ ಸಾಲಿನಲ್ಲಿ ಪದವೀಧರರಾಗಿರುವ ಸದಸ್ಯರ ಮಕ್ಕಳಿಗೆ ಕೆ.ಎಂ.ಎ. ಪದವಿ ಪುರಸ್ಕಾರ ನೀಡಿ ಗೌರವಿಸಲಾಗುವುದು. ಜೊತೆಗೆ ಸರಕಾರಿ ಶಾಲೆಗಳಲ್ಲಿ ಓದಿ ಕಳೆದ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದ ಇಬ್ಬರು ವಿದ್ಯಾರ್ಥಿಗಳಿಗೆ, ಕಳೆದ ಎಸ್.ಎಸ್.ಎಲ್. ಸಿ. ಮತ್ತು ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ಇಡೀ ಕೊಡಗು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿರುವ ತಲಾ ಓರ್ವ ಸಾಧಕ ವಿದ್ಯಾರ್ಥಿಗೆ ಮತ್ತು ಈ ಎರಡು ವಿಭಾಗಗಳಲ್ಲೂ ಅತೀ ಹೆಚ್ಚಿನ ಅಂಕ ಪಡೆದ ಜಿಲ್ಲೆಯ ಇಬ್ಬರು ಮುಸ್ಲಿಂ ವಿದ್ಯಾರ್ಥಿಗಳಿಗೆ ಕೆ.ಎಂ.ಎ. ವಿಶೇಷ ಪ್ರತಿಭಾ ಪುರಸ್ಕಾರ-2025 ನೀಡಿ ಗೌರವಿಸಲಾಗುವುದು ಎಂದು ಸೂಫಿ ಹಾಜಿ ತಿಳಿಸಿದರು.

ಹೊಸ ತಲೆಮಾರಿಗೆ ಪ್ರೇರಣೆ ಮೂಡಿಸಲು ಪ್ರತಿ ವರ್ಷ ಸಮುದಾಯದ ಹಿರಿಯ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಸಂಪ್ರದಾಯವಿದೆ. ಈ ಹಿನ್ನೆಲೆಯಲ್ಲಿ ಸಮುದಾಯದ ಶತಾಯುಷಿ ಕುಂಜಿಲದ ಪುದುರೆಕಾರಂಡ ಹುಸೈನಾರ್ ಹಾಜಿ, ಹಿರಿಯ ವಿದ್ವಾಂಸರಾದ ಕುಂಜಿಲದ ಪಾಯಡತಂಡ ಹುಸೈನ್ ಮುಸ್ಲಿಯಾರ್, ನಿವೃತ್ತ ಕೃಷಿ ಅಧಿಕಾರಿ ಬೇಟೋಳಿ ಗ್ರಾಮದ ಪುಡಿಯಂಡ ಎಂ. ಸಾದಲಿ ಹಾಜಿ, ರಾತೀಬ್ ಖಲ್ಫರಾದ ಐಮಂಗಳದ ಕೂತಂಬಟ್ಟಿರ ಹುಸೈನ್, ಕಳೆದ ನೀಟ್ ಪರೀಕ್ಷೆಯಲ್ಲಿ ಅದ್ವಿತೀಯ ಸಾಧನೆಗೈದ ಜೋಯಿಪೆರ ಐ. ಮೊಹಮ್ಮದ್ ಸಫ್ವಾನ್ ಮತ್ತು ತಮ್ಮ ಚೊಚ್ಚಲ ಕೃತಿಯ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನಸೆಳೆದ ದುದ್ದಿಯಂಡ ಮುಸ್ಕಾನ್ ಅವರನ್ನು ಕಾರ್ಯಕ್ರಮದಲ್ಲಿ ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಗುವುದು ಎಂದು ತಿಳಿಸಿದರು.

coorg buzz
coorg buzz