ಸಮಿತಿಯವರ ಸಂಬಂಧಿಕರೇ ತೀರ್ಪುಗಾರರು – ಕರವಲೆ ಭಗವತಿ ದೇವಾಲಯ ಸಮಿತಿ ಗಂಭೀರ ಆರೋಪ..!

Share this post :

ಮಡಿಕೇರಿ : ಮಡಿಕೇರಿ ದಸರಾ ಶೋಭಾಯಾತ್ರೆಯ ಬಹುಮಾನ ವಿತರಣೆ ಸಂದರ್ಭ ಉಂಟಾದ ಗಲಭೆ ಸಂಬಂಧ ದಶಮಂಟಪ ಸಮಿತಿ ವಿರುದ್ಧ ಕರವಲೆ ಭಗವತಿ ದೇವಾಲಯ ಸಮಿತಿಯವರು ಗಂಭೀರ ಆರೋಪ ಮಾಡಿದ್ದಾರೆ.
ಪ್ರತಿ ಬಾರಿ ದಸರಾ ಶೋಭಾಯಾತ್ರೆಯ ಫಲಿತಾಂಶದಲ್ಲಿ ಇದೇ ರೀತಿ ಆಗುತ್ತಿದೆ. ಸಮಿತಿಯವರು ಅವರಿಗೆ ಬೇಕಾದವರನ್ನು ತೀರ್ಪುಗಾರರನ್ನಾಗಿ ಮಾಡಿಕೊಳ್ಳುತ್ತಾರೆ. ಈ ಬಾರಿ ಸಮಿತಿಯಲ್ಲಿರುವ ಸಂಬಂಧಿಕರನ್ನೇ ತೀರ್ಪುಗಾರರನ್ನಾಗಿ ಮಾಡಿಕೊಂಡಿದ್ದರೆಂದು ಕರವಲೆ ಭಗವತಿ ದೇವಾಲಯ ಸಮಿತಿ ಅಧ್ಯಕ್ಷ ಕಾರ್ಯಪ್ಪ ಆರೋಪಿಸಿದ್ದಾರೆ.
ಈ ಬಗ್ಗೆ ಕೂರ್ಗ್‌ ಬಝ್‌ ಜೊತೆ ಮಾತನಾಡಿದ ಅವರು, ಈ ಬಾರಿ ನಮ್ಮ ಸಮಿತಿ ಉತ್ತಮ ಕಥಾ ಸಾರಾಂಶವನ್ನು ಪ್ರಸ್ತುತಪಡಿಸಿತ್ತು. ಸಾರ್ವಜನಿಕ ವಲಯದಲ್ಲೂ ಉತ್ತಮ ಅಭಿಪ್ರಾಯ ಕೇಳಿಬಂದಿತ್ತು. ನಿಗಧಿತ ಸಮಯಕ್ಕಿಂತ ಮುಂಚಿತವಾಗಿಯೇ ನಾವು ನಮಗೆ ನಿಗಧಿಪಡಿಸಿದ್ದ ಸ್ಥಳಕ್ಕೆ ಬಂದು ತೀರ್ಪುಗಾರರು ಬಂದಾಗ ಅವರೊಂದಿಗೆ ಸ್ಪಂದಿಸಿ ಪ್ರದರ್ಶನ ನೀಡಿದ್ದೇವೆ. ಆದರೆ ಸಮಯ ಪಾಲನೆ ಮಾಡಿಲ್ಲವೆಂದು ಅಂಕ ಕಡಿತಗೊಳಿಸಿದ್ದಾರೆ. ಇದೆಲ್ಲ ಸಮಿತಿಯವರ ಕೈವಾಡದಿಂದಲೇ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತೀರ್ಪುಗಾರರು ಯಾರು ಎಂಬುದನ್ನು ಮುಂಚಿತವಾಗಿ ಬಹಿರಂಗಪಡಿಸುವಂತಿಲ್ಲ. ಆದರೆ ಈ ಬಾರಿಯ ಸಮಿತಿಯವರು ಶೋಭಾಯಾತ್ರೆಗೆ ಮುಂಚಿತವಾಗಿ ತೀರ್ಪುಗಾರರು ಯಾರು ಎಂಬುದನ್ನು ಬಹಿರಂಗಪಡಿಸಿದರು. ತೀರ್ಪುಗಾರರು ಯಾರು ಅನ್ನುವುದು ಎಲ್ಲರಿಗೂ ಮುಂಚಿತವಾಗಿಯೇ ತಿಳಿಯಿತು. ಇದರ ಹಿಂದಿನ ಉದ್ದೇಶವೇನು? ಅವರು ಯಾವುದೇ ಒತ್ತಡ ಇಲ್ಲದೆ ಕರ್ತವ್ಯ ನಿರ್ವಹಿಸುವುದಕ್ಕೆ ಸಾಧ್ಯವಾಯಿತಾ ಎಂದು ಪ್ರಶ್ನಿಸಿದರು.
ಇನ್ನೂ ಹಲವು ವಿಚಾರಗಳ ಕುರಿತಾಗಿ ಕಾರ್ಯಪ್ಪ ಮಾತನಾಡಿದ್ದಾರೆ. ಸಂಪೂರ್ಣ ವಿಡಿಯೋ Coorg Buzz ಯೂಟ್ಯೂಬ್‌ ಚಾನಲ್‌ನಲ್ಲಿದೆ, ನೋಡಿ.

ಗಮನಿಸಿ : ನಿನ್ನೆ ಬೆಳಗ್ಗೆ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ದಶಮಂಟಪಗಳಿಗೆ ಬಹುಮಾನ ವಿತರಣೆ ವೇಳೆ ನಡೆದ ಗಲಾಟೆ ಸಂಬಂಧ ದಶಮಂಟಪ ಸಮಿತಿ ಪ್ರಮುಖರ ಅಭಿಪ್ರಾಯ ಪಡೆಯಲು ನಿನ್ನೆ ಮಧ್ಯಾಹ್ನದಿಂದ Coorg Buzz ನಿರಂತರ ಪ್ರಯತ್ನ ಮಾಡಿತು. ಆದರೆ ಯಾರು ಕೂಡಾ ಸ್ಪಂದಿಸಲಿಲ್ಲ. ಇಂದು ಪ್ರತಿಕ್ರಿಯೆ ಕೊಡುತ್ತೇನೆಂದು ಸಮಿತಿ ಅಧ್ಯಕ್ಷರು ಹೇಳಿದ ಮೇರೆಗೆ ಮಧ್ಯಾಹ್ನ 3.30ಕ್ಕೆ ಕೋಟೆ ಆವರಣಕ್ಕೆ ಹೋಗಿ 45 ನಿಮಿಷ ಕಾದೆವು. ಅಲ್ಲಿ ಅವರು ಸಿಗಲಿಲ್ಲ, ಫೋನ್‌ ಕರೆಗೂ ಸ್ಪಂದಿಸಲಿಲ್ಲ.

coorg buzz
coorg buzz