ಮಡಿಕೇರಿ : ಮಡಿಕೇರಿ ದಸರಾ ಜನೋತ್ಸವ ಪ್ರಯುಕ್ತ ಬಹುಭಾಷಾ ಕವಿಗೋಷ್ಠಿ ಗುರುವಾರ ನಡೆಯಿತು. ಗಾಂಧಿ ಮೈದಾನದಲ್ಲಿ ನಡೆದ ಗೋಷ್ಠಿಯನ್ನು ನಿನ್ನೆ ನಮ್ಮನ್ನಗಲಿದ ಹಿರಿಯ ಸಾಹಿತಿ, ಪದ್ಮಭೂಷಣ ಎಸ್.ಎಲ್. ಭೈರಪ್ಪ ಅವರಿಗೆ ಅರ್ಪಿಸಲಾಯಿತು.
ಕವಿಗೋಷ್ಠಿಯನ್ನು ಉದ್ಯಮಿ ಹರಪಳ್ಳಿ ರವೀಂದ್ರ ಅವರು ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಕನ್ನಡ ಚಿತ್ರರಂಗದ ಹಿರಿಯ ಸಾಹಿತಿ, ಕೆಜಿಎಫ್ ಖ್ಯಾತಿಯ ಕಿನ್ನಾಳ ರಾಜ್ ಪಾಲ್ಗೊಂಡಿದ್ದರು.
ಕವಿಗೋಷ್ಠಿಯ ಆರಂಭಕ್ಕೂ ಮುನ್ನ ಗಾಂಧಿ ಮೈದಾನ ರಸ್ತೆಯ ‘ಕುವೆಂಪು ಪುತ್ಥಳಿ’ಗೆ ಕವಿಗೋಷ್ಠಿಯ ಅಧ್ಯಕ್ಷೆ, ಸಾಹಿತಿ ಸುನೀತಾ ಲೋಕೇಶ್, ಬಹುಭಾಷಾ ಕವಿಗೋಷ್ಠಿ ಸಮಿತಿ ಅಧ್ಯಕ್ಷ ಉಜ್ವಲ್ ರಂಜಿತ್ ಮತ್ತು ಪದಾಧಿಕಾರಿಗಳು ಪುಷ್ಪನಮನ ಸಲ್ಲಿಸಿದರು.
ಮುಖ್ಯ ಅತಿಥಿಗಳಾಗಿ ನಿವೃತ್ತ ಸೇನಾಧಿಕಾರಿ ಹಾಗೂ ಸಾಹಿತಿ ಕ್ಯಾಪ್ಟನ್ ಬಿದ್ದಂಡ ನಾಣಯ್ಯ, ಮಡಿಕೇರಿ ನಗರ ದಸರಾ ಸಮಿತಿ ಅಧ್ಯಕ್ಷೆ ಪಿ.ಕಲಾವತಿ, ಕಾರ್ಯಾಧ್ಯಕ್ಷ ಬಿ.ಕೆ. ಅರುಣ್ ಕುಮಾರ್ ಮುಂತಾದವರಿದ್ದರು.
ನಂತರ ಸುನೀತ ಲೋಕೇಶ್ ಅಧ್ಯಕ್ಷತೆಯಲ್ಲಿ ಜರುಗಿದ ಕವಿಗೋಷ್ಠಿಯಲ್ಲಿ ಜಿಲ್ಲೆಯ ವಿವಿಧೆಡೆಯ 70ಕ್ಕೂ ಅಧಿಕ ಮಂದಿ ವಿವಿಧ ಭಾಷೆಯಲ್ಲಿ ಕವನ ವಾಚಿಸಿದರು.



