ಮಂಜಿನ ನಗರಿ ಮಡಿಕೇರಿಯು ಈಗ ತಾನೇ ಮಳೆಗಾಲದ ಏಕತಾನತೆಯಿಂದ ಮೆಲ್ಲ ಮೆಲ್ಲನೆ ಹೊರಬರುವ ಪ್ರಯತ್ನದಲ್ಲಿದೆ. ಇದನ್ನು ಸಂಭ್ರಮದಿಂದ ಸ್ವಾಗತಿಸಲು ತಯಾರಾಗಿ ನಿಂತಿದೆ ನಾಡಹಬ್ಬ ದಸರಾ ಹಬ್ಬ. ಈಗಾಗಲೇ ವಿಶ್ವ ವಿಖ್ಯಾತ ಮೈಸೂರು ದಸರಾ ಅಲಂಕಾರಗೊಂಡ ನವ ವಧುವಿನಂತೆ ಝಗ ಮಗಿಸುವ ಬೆಳಕಿನ ಅಲಂಕಾರದಲ್ಲಿ ಸಾಂಸ್ಕೃತಿಕ ಕಲರವದೊಂದಿಗೆ ಸದ್ದು ಮಾಡುತ್ತಿದೆ. ಮೈಸೂರು ದಸರಾದಂತೆ ಮಡಿಕೇರಿ ದಸರಾ ಕೂಡ ತನ್ನದೇ ಆದ ಐತಿಹಾಸಿಕ, ಧಾರ್ಮಿಕ, ಹಿನ್ನೆಲೆಯಲ್ಲಿ ಬೆಳೆದು ಬಂದು ವರ್ಷದಿಂದ ವರ್ಷಕ್ಕೆ ವಿಭಿನ್ನವಾಗಿ ಆಚರಿಸಲ್ಪಡುತ್ತಿರುವ ನಾಡ ಉತ್ಸವ. ಮೈಸೂರು ದಸರಾ ವಿಶ್ವ ವಿಖ್ಯಾತ ಜಂಬೂ ಸವಾರಿಯ ಮೆರವಣಿಗಯ ಮೂಲಕ ಹಗಲಿನ ಕಾರ್ಯಕ್ರಮದಲ್ಲಿ ಗಮನ ಸೆಳೆದರೆ ಮಡಿಕೇರಿ ದಸರಾದ ಮೆರವಣಿಗೆ ಆರಂಭಗೊಳ್ಳುವುದೇ ರಾತ್ರಿಯ ಸಂದರ್ಭದಲ್ಲಿ. ಇದೇ ಮಡಿಕೇರಿ ದಸರಾದ ವಿಶೇಷತೆ ಎನ್ನಬಹುದು.
ಕೊಡಗನ್ನು ಆಳಿದ ಹಾಲೇರಿ ರಾಜ ವಂಶಸ್ಥರಲ್ಲಿ ದೊಡ್ಡ ವೀರ ರಾಜೇಂದ್ರರು ಟಿಪ್ಪುವಿನ ಸೆರೆಯಿಂದ ಬಿಡಿಸಿಕೊಂಡು ಬಂದು ಕೊಡಗಿನಲ್ಲಿ ಆಳ್ವಿಕೆ ನಡೆಸುತ್ತಿದ್ದ ಸಂದರ್ಭದಲ್ಲಿ ಇಲ್ಲಿ ಭೀಕರ ಸಾಂಕ್ರಾಮಿಕ ರೋಗಗಳು ಉಲ್ಬಣಿಸಿದವು. ಜನರು ಭಯ ಭೀತಿಯಿಂದ ಊರು ಬಿಡಲು ಪ್ರಾರಂಭಿಸಿದರು. ಪರಿಸ್ಥಿತಿಯ ವಿಕೋಪವನ್ನು ಅರಿತ ರಾಜರು ರೋಗಗಳಿಂದ ಮುಕ್ತಿ ಪಡೆಯಲು ಧಾರ್ಮಿಕ ಮುಖಂಡರ ಸಲಹೆ ಪಡೆಯುತ್ತಾರೆ. ಅವರ ಸಲಹೆಯಂತೆ ಮಡಿಕೇರಿ ನಗರದ ಐದು ಶಕ್ತಿ ದೇವತೆಗಳ ಅನುಗ್ರಹ ಪಡೆಯಲು ನವರಾತ್ರಿಯ ಸಂದರ್ಭದಲ್ಲಿ ಪೂಜಾ ಮಹೋತ್ಸವ ಹಾಗೂ ವಿಜಯ ದಶಮಿ ಆಚರಣೆಗೆ ನಾಂದಿ ಹಾಡಲಾಯಿತು. ಕಾಲಕ್ರಮೇಣ ಜನಜೀವನ ಸಹಜ ಸ್ಥಿತಿಗೆ ಮರಳಿದ ಪರಿಣಾಮ ಈ ಆಚರಣೆಯನ್ನು ಪ್ರತಿ ವರ್ಷ ಸಂಪ್ರದಾಯವಾಗಿ ಆಚರಿಸುತ್ತಾ ಬರಲಾಗಿದೆ. ಮಡಿಕೇರಿ ದಸರಾ ಆಚರಣೆಗೆ 230ಕ್ಕೂ ಹೆಚ್ಚಿನ ವರ್ಷದ ಐತಿಹ್ಯವಿದೆ. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಬ್ರಿಟೀಷ್ ಸರಕಾರ ಎಲ್ಲಾ ಉತ್ಸವಗಳನ್ನು ಬಹಿಷ್ಕರಿಸಿದಾಗಲೂ ಕೂಡ ಮಡಿಕೇರಿ ದಸರಾ ಆ ಸಂದರ್ಭದಲ್ಲಿಯೂ ನಡೆಸಲಾಗಿತ್ತು ಎಂಬುದು ನಮ್ಮ ಹೆಗ್ಗಳಿಕೆ. 1962 ರಲ್ಲಿ ನಡೆದ ಚೀನಾ ಯುದ್ಧ ನಡೆದಾಗಲೂ ಕರಗವನ್ನು ಹೊರಡಿಸಲಾಗಿತ್ತು ಎಂಬುದು ಮಡಿಕೇರಿ ದಸರಾದಲ್ಲಿರುವ ಧಾರ್ಮಿಕ ನಂಬಿಕೆ ಎಷ್ಟೊಂದು ಫಲಪ್ರದವಾಗಿದ್ದಿರಬಹುದು ಎನ್ನುವುದು ವೇದ್ಯವಾಗುತ್ತದೆ.
ಮಡಿಕೇರಿಯ ಆಧುನಿಕ ದಸರಾ ಉತ್ಸವದ ರೂವಾರಿ ರಾಜಸ್ತಾನದ ಮೂಲದವರಾದ ಶ್ರೀ ಭೀಮಸಿಂಗ್ ರವರು. 1950 ರ ಕಾಲ ಘಟ್ಟದಲ್ಲಿಯೇ ನವರಾತ್ರಿಯ ಕೊನೆಯ ದಿನ ವಿಜಯ ದಶಮಿಯಂದು ಭೀಮ ಸಿಂಗ್ ರವರು ತಮ್ಮ ತಲೆಯ ಮೇಲೆ ದೇವರ ಮೂರ್ತಿಯನ್ನು ಇಟ್ಟುಕೊಂಡು ಮನೆ ಮನೆಗೆ ತೆರಳಿ ದೇವರಿಗೆ ಪೂಜೆಯನ್ನು ಮಾಡಿಸುತ್ತಿದ್ದರು. ನಂತರ ದೇವರ ಮೂರ್ತಿ ಪಲ್ಲಕ್ಕಿಯ ಮೇಲೆ ಹೋಗುವಂತಾಯಿತು. ಆ ನಂತರದ ಬೆಳವಣಿಗೆಗಳು ಟ್ರ್ಯಾಕ್ಟರ್, ಮಂಟಪ, ವಾದ್ಯಗಳೊಂದಿಗೆ ಶೋಭಾಯಾತ್ರೆ. ಮಡಿಕೇರಿಯ ದಸರಾ ಎಂದಾಕ್ಷಣ ಕಣ್ ಮುಂದೆ ಬರುವ ದೃಶ್ಯವೆಂದರೆ ಝಗ ಮಗಿಸುವ ವಿದ್ಯುತ್ ಬೆಳಕಿನಿಂದ ಅಲಂಕೃತಗೊಂಡು ಶೋಭಾಯಾತ್ರೆಯಲ್ಲಿ ಸಾಗುವ ದಶ ಮಂಟಪಗಳ ಮೆರವಣಿಗೆ. ಆಯಾ ದೇವಾಲಯಗಳ ಸಮಿತಿಯ ಕಾರ್ಯಕರ್ತರ ತಿಂಗಳುಗಟ್ಟಲೆ ಶ್ರಮ, ಸಿದ್ಧತೆ, ಪೌರಾಣಿಕ ಕಥಾ ಹಂದರದಲ್ಲಿ ದೇವ- ದಾನವರ ಕಲಾಕೃತಿಗಳನ್ನು ನುರಿತ ಕಲಾವಿದರಿಂದ ತಯಾರಿಗೊಳಿಸಿ, ಅವುಗಳ ಚಲನವಲನಗಳಿಗಾಗಿ ಪರಿಣಿತ ತಂತ್ರಜ್ಞರನ್ನು ಬಳಸಿಕೊಂಡು ಒಂದು ಮಾಯಾ ಲೋಕವನ್ನೇ ಸೃಷ್ಟಿಸಲಾಗುತ್ತದೆ. ಪಾತ್ರಗಳಿಗೆ ಹೊಂದುವ ಸ್ವರ ಲಾಲಿತ್ಯ, ಪ್ರಧಾನ ಪಾತ್ರದಲ್ಲಿ ಬರುವ ಸಂಭಾಷಣೆ ಹಾಗೂ ನುರಿತ ತಂತ್ರಜ್ಞಾನದ ಕೌಶಲ್ಯ ಪ್ರದರ್ಶನಕ್ಕಾಗಿ ಲಕ್ಷಾಂತರ ಹಣ ವೆಚ್ಚವನ್ನೂ ಮಾಡಲಾಗುವುದು. ಅತ್ಯದ್ಭುತ ಪ್ರದರ್ಶನಕ್ಕಾಗಿ ದಶಮಂಟಪಗಳಿಗೆ ಮೊದಲ ಮೂರು ಬಹುಮಾನಗಳನ್ನು ನೀಡಿ ಗೌರವಿಸುವುದು ವಾಡಿಕೆ. ರಾತ್ರಿ ಪೂರ್ತಿ ದಶ ಮಂಟಪಗಳ ಶೋಭಾಯಾತ್ರೆ ನಡೆದು ಕೊನೆಯಲ್ಲಿ ಬನ್ನಿ ಪೂಜೆಯೊಂದಿಗೆ ದಸರಾ ಸಂಪನ್ನಗೊಳ್ಳುತ್ತದೆ. ಇದು ಮಡಿಕೇರಿ ದಸರಾದ ಸಾಂಪ್ರದಾಯಿಕ ಆಚರಣೆಯ ಒಂದು ಬಗೆಯಾದರೆ ನವರಾತ್ರಿ ಆಚರಣೆಯ ಸಂದರ್ಭದಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತೊಂದು ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಎಲ್ಲಾ ವಯೋಮಾನದವರ ಆಸಕ್ತಿ ಅಭಿರುಚಿಗೆ ಅನುಗುಣವಾಗಿ ದಸರಾ ಕ್ರೀಡಾಕೂಟ, ಕವಿಗೋಷ್ಠಿ, ಸಂಗೀತ, ನೃತ್ಯದಂತಹ ವಿಭಿನ್ನ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲಾ ಕೊಡಗಿನ ಕಲಾಭಿಮಾನಿಗಳನ್ನು ಸಂತುಷ್ಟಿಗೊಳಿಸುವ ಪ್ರಯತ್ನವೆಂಬುದು ಪ್ರಶಂಶನೀಯ. ಕಳೆದ ಕೆಲವಾರು ವರ್ಷಗಳಿಂದ ಮಕ್ಕಳಿಗಾಗಿ ಮಕ್ಕಳ ದಸರಾ, ಮಹಿಳೆಯರಿಗಾಗಿ ಮಹಿಳಾ ದಸರಾ, ಜಾನಪದ ಸಂಸ್ಕೃತಿ ಬಿಂಬಿಸುವ ಜಾನಪದ ದಸರಾ, ಕೊಡಗಿನ ಮುಖ್ಯ ವಾಣಿಜ್ಯ ಬೆಳೆ ಕಾಫಿಯನ್ನು ಉತ್ತೇಜಿಸಲು ಕಾಫಿ ದಸರಾ.. ಹೀಗೇ ವೈವಿಧ್ಯಮಯ ಗುರಿ ಉದ್ದೇಶಗಳ ಆಧಾರಿತ ದಸರಾ ಉತ್ಸವವು ನಿಜಕ್ಕೂ ಕೊಡಗಿನ ಕೀರ್ತಿಯನ್ನು ದೇಶ ವಿದೇಶಗಳಲ್ಲಿ ಹರಡುವಲ್ಲಿ ತನ್ನದೇ ಆದ ಭೂಮಿಕೆಯಲ್ಲಿ ಪ್ರಯತ್ನಿಸುತ್ತಿದೆ. ಕ್ರೀಡೆ, ಸೇನಾಕ್ಷೇತ್ರ, ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿಕೊಂಡಿರುವ ಕೊಡಗು ತನ್ನ ಸಾಂಸ್ಕೃತಿಕ ಪರಂಪರೆಯ ಅನನ್ಯತೆಯನ್ನು ದಸರಾ ಉತ್ಸವದ ಮೂಲಕ ಜಗಜ್ಜಾಹೀರಾಗಿಸಿದೆ.
ಮಡಿಕೇರಿ ದಸರಾ ಸಾಂಸ್ಕೃತಿಕತೆಯ ಜೊತೆಗೆ ಧಾರ್ಮಿಕ ಸಾಮರಸ್ಯ, ಸಹೋದರತ್ವ, ಐಕ್ಯತೆಯ ಸಂಕೇತ ಎನ್ನುವುದೇ ಹೆಗ್ಗಳಿಕೆಯ ವಿಚಾರ. ಸರಕಾರದ ಸಹಾಯಧನ ಹಾಗೂ ಸ್ಥಳೀಯ ಭಕ್ತರ ಪ್ರೀತಿಯ ದೇಣಿಗೆಯ ಹಣದಿಂದಲೇ ವರ್ಷoಪ್ರತಿ ವಿಜೃಂಭಣೆಯಿಂದ ಜರುಗುವ ದಸರಾ ಹಬ್ಬ ಕೊಡಗು ಜಿಲ್ಲೆ, ಹಾಗೂ ಹೊರಗಿನ ಕಲಾಭಿಮಾನಿಗಳ ಪ್ರೀತಿಯ ಕೊಡುಗೆ.
ವರ್ಷಕ್ಕೊಮ್ಮೆ ಜರುಗುವ ಈ ಉತ್ಸವವನ್ನು ಜಿಲ್ಲಾಡಳಿತ, ನಗರ ಸಭೆ, ದಸರಾ ಸಮಿತಿಗಳ ಜಂಟಿ ಆಶ್ರಯದಲ್ಲಿ ಅತ್ಯುತ್ತಮವಾಗಿ ಆಯೋಜನೆಗೊಳಿಸುವ ಹಾದಿಯಲ್ಲಿ ಅನೇಕ ಸವಾಲುಗಳು, ಅಡ್ಡಿ ಆತಂಕಗಳು ಸಹಜವೇ. ಕಾರ್ಯಕ್ರಮದ ರೂಪು ರೇಷೆಯಿಂದ ಹಿಡಿದು ಒಂಬತ್ತು ದಿನಗಳೂ ನಡೆಯುವ ಕಾರ್ಯಕ್ರಮದ ಆಯೋಜನೆಯಲ್ಲಿ ನೂರೆಂಟು ಸಮಸ್ಯೆಗಳು ಕಾರ್ಯಕ್ರಮದ ಆಯೋಜಕರನ್ನು ಕಂಗೆಡಿಸುತ್ತದೆ. ಸಕಾಲದಲ್ಲಿ ಸಿಗದ ಅನುದಾನದ ಹಣದಲ್ಲಿ ವ್ಯತ್ಯಾಸವಾದಲ್ಲಿ ಖಂಡಿತವಾಗಿಯೂ ದಸರಾ ಕಾರ್ಯಕ್ರಮದ ಆಯೋಜಕರಿಗದು ಬಲವಾದ ಪೆಟ್ಟು ಬಿದ್ದಂತೆ. ತಿಂಗಳಾನುಗಟ್ಟಳೆಯಿಂದ ಸಮಿತಿ ರಚಿಸಿಕೊಂಡು, ವಿವಿಧ ರೂಪು ರೇಷೆಗಳ ಯೋಜನೆಯಲ್ಲಿ ತೊಡಗಿಸಿಕೊಳ್ಳುವ ತಂಡ ಹಣಕಾಸಿನ ಹೊಂದಾಣಿಕೆಯಿಂದಾಗಿ ಕೊನೆಯ ಕ್ಷಣಗಳವರೆಗೂ ಆತಂಕದಿಂದಲೇ ಕಾರ್ಯಕ್ರಮ ನಡೆಸುವುದು ದುಸ್ಸಾಧ್ಯ. ಮಡಿಕೇರಿಯ ಮೌಲ್ಯವನ್ನು ಒಂದು ಹಂತಕ್ಕೆ ಏರಿಸುವ ಈ ದಸರಾ ಉತ್ಸವದ ಪೂರ್ವ ಸಿದ್ಧತೆಯೂ ಗಮನ ಸೆಳೆಯುವಂತಿರಬೇಕು. ಇರುವ ಮೂರು ನಾಲ್ಕು ದಿನಗಳಲ್ಲಿ ಮಡಿಕೇರಿ ನಗರ ಮನಸೆಳೆಯುವ ದಸರಾ ಉತ್ಸವಕ್ಕೆ ಸುಸಜ್ಜಿತವಾಗಿ ತಯಾರಾಗ ಬಲ್ಲುದೆ? ದಸರಾ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಯಾವ ಮಾಧ್ಯಮಗಳಲ್ಲಿಯೂ ಇನ್ನೂ ಪ್ರಕಟಣೆಯ ಭಾಗ್ಯ ಕಂಡಿಲ್ಲ.
ಕಾರ್ಯಕ್ರಮದ ಮಾಹಿತಿಗಳು ಕಲಾಭಿಮಾನಿಗಳಿಗೆ ಇಷ್ಟರಲ್ಲಾಗಲೇ ತಲುಪಬೇಕಿತ್ತು. ಕಾರ್ಯಕ್ರಮ ನಡೆಯುವಾಗ ಸಭೆಯಲ್ಲಿ ಪ್ರೇಕ್ಷಕರ ಸಂಖ್ಯೆ ತೀರಾ ಇಳಿಮುಖವಾಗಲು ಕಾರಣ ಈ ಸಂವಹನ ಕೊರತೆಯೂ ಹೌದು. ಮಡಿಕೇರಿ ನಗರದ ಪ್ರತಿಯೊಂದು ಬೀದಿ ಬೀದಿಗೂ ಬೀದಿ ದೀಪ, ವಿದ್ಯುತ್ ಅಲಂಕಾರಗಳು, ಮುಖ್ಯವಾಗಿ ಸುಗಮ ಸಂಚಾರಕ್ಕಾಗಿ ರಸ್ತೆ ಗುಣಮಟ್ಟ ಇವೆಲ್ಲವೂ ನಮ್ಮ ಮಡಿಕೇರಿಯನ್ನು ಪ್ರತಿನಿಧಿಸುವ ಪ್ರಮುಖ ಅಂಶಗಳು. ಕೊಡಗು ಜಿಲ್ಲೆ, ಹೊರ ಜಿಲ್ಲೆ, ರಾಜ್ಯಗಳಿಂದಲೂ ಆಗಮಿಸುವ ಪ್ರವಾಸಿಗರ, ಕಲಾಭಿಮಾನಿಗಳ ನಿರೀಕ್ಷೆಗೆ ನಿರಾಸೆಯಾಗದಂತೆ ನಾವುಗಳು ತಯಾರಾಗಬೇಕು. ಇದು ನಮ್ಮೂರ ಹಬ್ಬ. ಪ್ರತಿಯೊಬ್ಬ ನಾಗರೀಕರೂ ಕೂಡ ಇದರಲ್ಲಿ ಪಾಲುದಾರರೇ. ದಸರಾ ಮುಗಿಯುವವರೆವಿಗೂ ಪೊಲೀಸ್ ಇಲಾಖೆ ಅದರಲ್ಲಿಯೂ ಟ್ರಾಫಿಕ್ ಪೊಲೀಸ್ ರ ಸೇವೆಯಿಂದ ಹಿಡಿದು ಮಡಿಕೇರಿ ನಗರದ ಸ್ವಚ್ಛತೆ ಕಾಪಾಡುವ ಮುನಿಸಿಪಾಲಿಟಿಯ ವರೆಗಿನ ಪ್ರತಿಯೊಂದು ದಕ್ಷ ಕಾರ್ಯ ನಿರ್ವಹಣೆಯ ಜವಾಬ್ದಾರಿ ನಮ್ಮ ಮೇಲಿದೆ. ದಸರಾ ಸಂಭ್ರಮವನ್ನು ಪೊಲೀಸ್ ಇಲಾಖೆ ನೀಡಿರುವ ಆದೇಶದ ಅನ್ವಯ ಯಾವುದೇ ಕಾನೂನು ನೀತಿ ನಿಯಮಗಳಿಗೆ ತೊಡಕಾಗದಂತೆ, ಶಿಸ್ತಿನ ಜಿಲ್ಲೆಯ ಶಿಸ್ತು ಬದ್ಧ ನಡವಳಿಕೆಗೆ ಪ್ರತಿಯೊಬ್ಬರೂ ಕಾರಣಕರ್ತರು.
ಈ ವರ್ಷದ ಅನುಭವಗಳು ಮುಂದಿನ ದಸರಾ ಹಬ್ಬದ ಆಚರಣೆಗೆ ಪ್ರೇರಣೆ ನೀಡುವಂತಹ ನೆನಪುಗಳಾಗಬೇಕು. ಈ ವರ್ಷದ ಮಡಿಕೇರಿ ದಸರಾ ಆ ನಿಟ್ಟಿನಲ್ಲಿ ಸರ್ವ ದಸರಾ ಸಮಿತಿಗಳ ಮುಂದಾಳತ್ವದಲ್ಲಿ ಅಭೂತ ಪೂರ್ವ ಯಶಸ್ಸು ಕಾಣಲೆಂದು ಹಾರೈಸೋಣವೇ?
ಪ್ರತಿಮಾ ಹರೀಶ್ ರೈ
ಉಪನ್ಯಾಸಕರು
ಸೈಂಟ್ ಆನ್ಸ್ ಪದವಿ ಕಾಲೇಜು
ವಿರಾಜಪೇಟೆ.



