ವಿಶೇಷ ಲೇಖನ : ಡಾ. ಕೆ.ಬಿ. ಸೂರ್ಯಕುಮಾರ್
ಮಹಾಭಾರತದಲ್ಲಿ ಶ್ರೀಕೃಷ್ಣ ತನ್ನ ತಂಗಿ ಸುಭದ್ರೆಗೆ ಯುದ್ಧದಲ್ಲಿನ ಅಭೇದ್ಯವ್ಯೂಹಗಳ ಭೇದನೆಯನ್ನು ವಿವರಿಸುವಾಗ ಗರ್ಭದಲ್ಲಿದ್ದ ಅಭಿಮನ್ಯು ಅದನ್ನು ಕೇಳಿ ತಿಳಿದು, ಮುಂದೆ ಧನುರ್ವಿದ್ಯಾಪಾರಂಗತನಾದ. ವೈಜ್ಞಾನಿಕ ಸಂಶೋಧನೆಯ ಪ್ರಗತಿಯಿಂದ ಗರ್ಭಾಶಯವು ಶಬ್ದರಹಿತವಲ್ಲ ಎಂಬುದು ತಿಳಿದುಬಂದಿದೆ. ಗರ್ಭದೊಳಗಿನ ಮಗುವಿಗೆ ಹೊರ ಜಗತ್ತಿನಿಂದ ಬರುವ ಜೋರಾದ ಶಬ್ದಗಳು ಗರ್ಭರಸದ ( ಅಮ್ನಿಯೋಟಿಕ್ ಫ್ಲೂಯಿಡ್) ಮೂಲಕ ತಲುಪಬಹುದು ಮತ್ತು ನೇರವಾಗಿ ಹಾನಿಕರ ಪರಿಣಾಮ ಬೀರಬಹುದು ಎಂಬುದು ಸಾಬೀತಾಗಿದೆ.
ಗರ್ಭದಲ್ಲಿ ಮಗು ಶಬ್ದವನ್ನು ಹೇಗೆ ಕೇಳುತ್ತದೆ?…
ಮಗುವಿನ ಶ್ರವಣ ಶಕ್ತಿಯು ಗರ್ಭಾವಸ್ಥೆಯ ಆರಂಭದಲ್ಲಿಯೇ ಬೆಳವಣಿಗೆಯಾಗಲು ಪ್ರಾರಂಭವಾಗುತ್ತದೆ. ಹದಿನೆಂಟು ವಾರಗಳಲ್ಲಿ, ತಾಯಿಯ ದೇಹದ ಒಳಗಿನ ಶಬ್ದಗಳಾದ ಹೃದಯ ಬಡಿತ, ಜೀರ್ಣಕ್ರಿಯೆಯ ಶಬ್ದ ಮತ್ತು ತಾಯಿಯ ಧ್ವನಿಯನ್ನು ಕೇಳುವಷ್ಟು ಕಿವಿಯ ರಚನೆ ಬೆಳೆದಿರುತ್ತದೆ. ಮೂರನೇ ತ್ರೈಮಾಸಿಕದ ವೇಳೆಗೆ, ಮಗುವು ಹೊರಗಿನ ಜಗತ್ತಿನಿಂದ ಬರುವ ಶಬ್ದಗಳಾದ ಸಂಗೀತ ಮತ್ತು ಧ್ವನಿಗಳನ್ನು ಗುರುತಿಸಬಹುದು ಮತ್ತು ಅವುಗಳಿಗೆ ಪ್ರತಿಕ್ರಿಯಿಸಬಹುದು.
ಜೋರಾದ ಶಬ್ದದಿಂದ ಉಂಟಾಗುವ ಅಪಾಯಗಳು…
ತಾಯಿಯ ದೇಹದ ಹೊದಿಕೆಗಳಾದ ಹೊಟ್ಟೆಯ ಗೋಡೆ ಮತ್ತು ಗರ್ಭರಸವು ಮಗುವಿಗೆ ಕೆಲವು ರಕ್ಷಣೆಯನ್ನು ಒದಗಿಸಿದರೂ, ಇದು ಸಂಪೂರ್ಣವಲ್ಲ. ಭಾರೀ ಸಂಚಾರದ ಶಬ್ದ, ಮಿಕ್ಸರ್, ಡಿಜೆಗಳಂತಹ 85 ಡೆಸಿಬಲ್‌ಗಿಂತ ಹೆಚ್ಚಿನ ಧ್ವನಿಯು ಗರ್ಭದಲ್ಲಿನ ಮಗುವಿನವರೆಗೆ ತಲುಪಿ ಅದರ ಕಿವಿಯ ಒಳಗಿನ ಕೂದಲಿನಂತಹ ಸೂಕ್ಷ್ಮ ಜೀವಕೋಶಗಳಿಗೆ ಹಾನಿಯುಂಟು ಮಾಡಬಹುದು.
ಸಂಶೋಧನೆಗಳ ಪ್ರಕಾರ, ದೀರ್ಘಕಾಲದವರೆಗೆ ಅಥವಾ ಪದೇ ಪದೇ ಈ ರೀತಿಯ ಶಬ್ದಕ್ಕೆ ಒಡ್ಡಿಕೊಳ್ಳುವುದು ನವಜಾತ ಶಿಶುಗಳಲ್ಲಿ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.
ಕಿವುಡುತನದ ಅಪಾಯ
ಗರ್ಭದ ಮಗುವಿನ ಸೂಕ್ಷ್ಮ ಶ್ರವಣ ವ್ಯವಸ್ಥೆಯು ಇನ್ನೂ ಬೆಳವಣಿಗೆಯಲ್ಲಿರುವುದರಿಂದ, ಜೋರಾದ ಶಬ್ದವು ಶಾಶ್ವತ ಕಿವುಡತನಕ್ಕೆ ಕಾರಣವಾಗಬಹುದು. ಇದು ವಯಸ್ಕರಿಗೆ ಶಬ್ದದಿಂದ ಉಂಟಾಗುವ ಹಾನಿಯಂತೆಯೇ ಗಂಭೀರವಾಗಿದೆ.
– ಕಡಿಮೆ ತೂಕದ ಜನನ ಮತ್ತು ಅಕಾಲಿಕ ಜನನ : ಕೆಲವು ಸನ್ನಿವೇಶಗಳಲ್ಲಿ ತಾಯಿಯು ಜೋರಾದ ಶಬ್ದಕ್ಕೆ ಒಡ್ಡಿಕೊಂಡರೆ, ಕಡಿಮೆ ತೂಕದ ಮಗು ಮತ್ತು ಅಕಾಲಿಕ ಜನನದ ಅಪಾಯ ಹೆಚ್ಚಾಗುತ್ತದೆ .
– ಒತ್ತಡದ ಹೆಚ್ಚಳ : ಜೋರಾದ ಶಬ್ದವು ತಾಯಿಯಲ್ಲಿ ಒತ್ತಡದ ಪ್ರತಿಕ್ರಿಯೆಯನ್ನು ಉಂಟುಮಾಡಿ ಕಾರ್ಟಿಸಾಲ್‌ನಂತಹ ಒತ್ತಡದ ಹಾರ್ಮೋನ್‌ಗಳು ಬಿಡುಗಡೆಯಾಗುತ್ತವೆ. ಈ ಹಾರ್ಮೋನ್‌ಗಳು ಗರ್ಭಕೋಶದ ಮೂಲಕ ಮಗುವಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರಬಹುದು.
ಟಿನಿಟಸ್: ಮಗುವಿಗೆ ಮುಂದೆ ಕಿವಿಯಲ್ಲಿ ಜಿಣ್‌ಜಿಣ್, ಗುಂಞಿಗುಡುವಿಕೆ, ಅಥವಾ ಶಿಳ್ಳೆಯಂತಹ ಶಬ್ದ ಕೇಳಿಸುತ್ತದೆ. ಇದು ನಿದ್ರೆಗೆ, ಗಮನಕ್ಕೆ, ಮತ್ತು ದೈನಂದಿನ ಕೆಲಸಕ್ಕೆ ತೊಂದರೆ ಉಂಟುಮಾಡುತ್ತದೆ.
ಗರ್ಭದಲ್ಲಿರುವ ಮಗುವನ್ನು ಹೇಗೆ ರಕ್ಷಿಸುವುದು?
ಗರ್ಭಾವಸ್ಥೆಯ ಎರಡನೇ ಮತ್ತು ಮೂರನೇ ತ್ರೈಮಾಸಿಕದಲ್ಲಿ ಮಗುವು ಅತ್ಯಂತ ಸೂಕ್ಷ್ಮವಾಗಿರುವುದರಿಂದ, ತಾಯಿಯು ತನ್ನ ಸುತ್ತಮುತ್ತಲಿನ ಶಬ್ದದ ಪರಿಸರದ ಬಗ್ಗೆ ಎಚ್ಚರಿಕೆಯಿಂದಿರಬೇಕು. ಸಂಪೂರ್ಣ ಮೌನದಲ್ಲಿ ಬದುಕುವ ಅಗತ್ಯವಿಲ್ಲವಾದರೂ, ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದು ಕೊಳ್ಳುವುದು ಬುದ್ದಿವಂತಿಕೆಯ ಲಕ್ಷಣಗಳು.
– ಅತಿಯಾದ ಶಬ್ದದ ವಾತಾವರಣವನ್ನು ತಪ್ಪಿಸಿ..
ಜೋರಾದ ಸಂಗೀತ ಕಚೇರಿಗಳು, ಡಿಜೆ ಇರುವ ಸ್ಥಳಗಳು, ನೈಟ್‌ಕ್ಲಬ್‌ಗಳು ಮತ್ತು ಕಟ್ಟದ ನಿರ್ಮಾಣ ಸ್ಥಳಗಳಂತಹ ದೀರ್ಘಕಾಲದ ಜೋರಾದ ಶಬ್ದದ ಸ್ಥಳಗಳಿಂದ ದೂರವಿರಿ.
– ದೈನಂದಿನ ಚಟುವಟಿಕೆಗಳಲ್ಲಿ ಎಚ್ಚರಿಕೆ.. ಹೆಡ್‌ಫೋನ್‌ಗಳು, ಟೆಲಿವಿಷನ್ ಮತ್ತು ಸ್ಪೀಕರ್‌ಗಳ ಧ್ವನಿಯನ್ನು ಕಡಿಮೆ ಮಾಡಿ.
– ನಿಮ್ಮ ಕೆಲಸದ ಸ್ಥಳವು ಶಬ್ದಮಯವಾಗಿದ್ದರೆ, ಶಬ್ದದ ಒಡ್ಡಿಕೊಳ್ಳುವಿಕೆಯನ್ನು ಕಡಿಮೆ ಮಾಡಲು ಸೂಕ್ತ ವ್ಯವಸ್ಥೆಗಳನ್ನು ಮಾಡಿಕೊಳ್ಳಿ.
– ಶಾಂತ ಮತ್ತು ಸೌಮ್ಯವಾದ ವಾತಾವರಣವನ್ನು ಆಯ್ಕೆ ಮಾಡಿಕೊಂಡು ವಿಶ್ರಾಂತಿ ಪಡೆಯಿರಿ. ಇದು ತಾಯಿಯ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು ಮತ್ತು ಮಗುವಿಗೆ ಶಾಂತಿಯುತ ವಾತಾವರಣವನ್ನು ಒದಗಿಸುತ್ತದೆ.
ಆದುದರಿಂದ ಸಾರ್ವಜನಿಕರಲ್ಲಿ ನನ್ನ ಒಂದು ಕಳಕಳಿಯ ಮನವಿ. ಆಸ್ಪತ್ರೆಗಳಿರುವ ಸ್ಥಳಗಳಲ್ಲಿ, ಅದರಲ್ಲೂ ಹೆರಿಗೆ ಆಸ್ಪತ್ರೆಯ ಹತ್ತಿರದಲ್ಲಿ ಅತಿಯಾದ ಡಿಜೆ ಶಬ್ದಗಳನ್ನು ಬಳಸಿ ಇನ್ನೂ ಪ್ರಪಂಚವನ್ನೇ ಕಾಣದಿರುವ ಮುಗ್ದ ಮಕ್ಕಳಿಗೆ ಘೋರ ಅನ್ಯಾಯ ಮಾಡದಿರಿ. ಡಿಜೆ ಸಂಗೀತವು ಕೆಲವರಿಗೆ ಮನರಂಜನೆಯಾದರೂ, ಅದರಿಂದ ಆಗುವ ಆರೋಗ್ಯದ ಹಾನಿಯನ್ನು ನಾವು ನಿರ್ಲಕ್ಷಿಸಬಾರದು. ಇದರಿಂದಾಗುವ ಕಿವಿ ಕೇಳುವ (ಶ್ರವಣ) ಶಕ್ತಿಯ ನಷ್ಟ, ಹೃದಯದ ಮೇಲೆ ಒತ್ತಡ, ಮತ್ತು ಮಾನಸಿಕ ತೊಂದರೆಗಳು ದೀರ್ಘಕಾಲೀನವಾಗಿರಬಹುದು. ಆದ್ದರಿಂದ ಎಲ್ಲರೂ ಒಟ್ಟಾಗಿ, ಧ್ವನಿಯ ಮಾಲಿನ್ಯವನ್ನು ಕಡಿಮೆ ಮಾಡುವ ಮೂಲಕ ಆರೋಗ್ಯಕರ ಸಮಾಜವನ್ನು ಕಾಪಾಡಿಕೊಳ್ಳಬೇಕು. ಕ್ಷಣಿಕ ಮನರಂಜನೆಗಿಂತ ದೀರ್ಘಕಾಲದ ಆರೋಗ್ಯವೇ ಮುಖ್ಯ ಎಂಬುದನ್ನು ಎಲ್ಲರೂ ನೆನಪಿನಲ್ಲಿಟ್ಟುಕೊಳ್ಳಬೇಕು.



