ಪೊನ್ನಂಪೇಟೆ : ಸರ್ಕಾರವು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮೂಲಕ ರಾಜ್ಯದ ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ನಡೆಸಲು ಮುಂದಾಗಿರುವುದು ಸ್ವಾಗತಾರ್ಹವಾಗಿದೆ. ಇದೇ ತಿಂಗಳ 22 ರಿಂದ ಆರಂಭಗೊಳ್ಳುವ ಈ ಸಮೀಕ್ಷೆಯಲ್ಲಿ ಕೊಡಗಿನ ಮೂಲ ನಿವಾಸಿಗರಾಗಿರುವ ಕೊಡವ ಮುಸ್ಲಿಮರು ಕಡ್ಡಾಯವಾಗಿ ಪಾಲ್ಗೊಳ್ಳಬೇಕು ಎಂದು ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ಮನವಿ ಮಾಡಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆ.ಎಂ.ಎ. ಅಧ್ಯಕ್ಷ ದುದ್ದಿಯಂಡ ಹೆಚ್. ಸೂಫಿ ಹಾಜಿ, ಮೊಬೈಲ್ ಫೋನ್ ಬಳಸಿಕೊಂಡು ಡಿಜಿಟಲ್ ತಂತ್ರಜ್ಞಾನದ ಮೂಲಕ ಅಕ್ಟೋಬರ್ 7ರವರೆಗೆ ನಡೆಯಲಿರುವ ಈ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ, ಹಿಂದುಳಿದ ವರ್ಗಗಳ ಸಮುದಾಯದ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ರೂಪಿಸಬೇಕಾದ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಅಗತ್ಯವಿರುವ ಮಾಹಿತಿ ದತ್ತಾಂಶಗಳನ್ನು ವೈಜ್ಞಾನಿಕವಾಗಿ ಸಂಗ್ರಹಿಸುದರಲ್ಲಿ ತೀರಾ ಮಹತ್ವದಾಗಿದೆ ಎಂದು ಹೇಳಿದರು.
ಸಮೀಕ್ಷೆಯಲ್ಲಿ ಒಟ್ಟು 60 ಪ್ರಶ್ನೆಗಳ ಪಟ್ಟಿಯನ್ನು ತಯಾರಿಸಲಾಗಿದೆ. ಈ ಸಮೀಕ್ಷೆಯಲ್ಲಿ ಜನರ ಅಗತ್ಯ ಮಾಹಿತಿಗಳೂ ಸೇರಿದಂತೆ ಜಾತಿಯ ಹೆಸರನ್ನು ಸ್ಪಷ್ಟವಾಗಿ ನಮೂದಿಸಲು ಅವಕಾಶ ಕಲ್ಪಿಸಲಾಗಿದೆ. ಆದರಿಂದ ಕೊಡವ ಮುಸ್ಲಿಂ ಸಮುದಾಯದವರು ನಮೂನೆಯ ಕಾಲಂ ಸಂಖ್ಯೆ 8ರಲ್ಲಿರುವ ‘ಧರ್ಮ’ ಕಾಲಂನಲ್ಲಿ ‘ಇಸ್ಲಾಂ’ ಎಂದೂ, ಕಾಲಂ ಸಂಖ್ಯೆ 9ರಲ್ಲಿರುವ ‘ಜಾತಿ’ ಕಾಲಂನಲ್ಲಿ A0702 ಎಂಬ ಸಂಕೇತ (ಕೋಡ್) ಸಂಖ್ಯೆಯಲ್ಲಿರುವ ‘ಕೊಡವ ಮುಸ್ಲಿಂ’ ಎಂದೇ ಬರೆಸಬೇಕು ಎಂದು ಮನವಿ ಮಾಡಿರುವ ಸೂಫಿ ಹಾಜಿ, ಈ ಸಮೀಕ್ಷೆಯ ನಮೂನೆಯ ಅನುಬಂಧ-3ಎ ವಿಭಾಗದಲ್ಲಿರುವ ಜಾತಿಗಳಿಗೆ ‘ಉಪಜಾತಿ ‘ ಕಾಲಂ ಇದ್ದರೂ ‘ಕೊಡವ ಮುಸ್ಲಿಂ’ ಜಾತಿಗೆ ಉಪಜಾತಿಗಳ ಹಾಗೂ ಸಮನಾರ್ಥದ ಹೆಸರುಗಳನ್ನು ಬಳಸುವುದು ಅಗತ್ಯವಿಲ್ಲ. ಈ ಕಾರಣದಿಂದ ನಮೂನೆಯ ಕಾಲಂ ಸಂಖ್ಯೆ 10ರಲ್ಲಿರುವ ‘ಉಪಜಾತಿ’ ಕಾಲಂನಲ್ಲಿ ‘ಅನ್ವಯಿಸುವುದಿಲ್ಲ’ ಎಂದು ಬರೆಸುವಂತೆ ಮಾಹಿತಿ ನೀಡಿದರು.
ಕೊಡವ ಮುಸ್ಲಿಮರ ಸಾಮಾಜಿಕ ಅಸ್ತಿತ್ವಕ್ಕೆ ಸಂಬಂಧಿಸಿದಂತೆ ನಮೂನೆಯ ಕಾಲಂ ಸಂಖ್ಯೆ 15ರಲ್ಲಿ ಕೊಡವ ಮುಸ್ಲಿಮರ ಮಾತೃಭಾಷೆಯನ್ನು ನಮೂದಿಸಬೇಕು. ಈಗಾಗಲೇ ಆಯೋಗ ಸಿದ್ದಪಡಿಸಿರುವ ಮಾತೃಭಾಷೆಗಳ ಆ ಪಟ್ಟಿಯಲ್ಲಿ ಕೊಡವ ಮುಸ್ಲಿಮರ ಮಾತೃಭಾಷೆಯಾದ ‘ಪಯಕ’ ಇರುವುದಿಲ್ಲ. ಆದರಿಂದ ಸಮೀಕ್ಷೆ ಸಂದರ್ಭದಲ್ಲಿ ಮಾತೃಭಾಷೆ ಕಾಲಂನಲ್ಲಿ ಸಂಕೇತ ಸಂಖ್ಯೆ14ರಲ್ಲಿರುವಂತೆ ‘ಇತರೆ’ ಎಂದು ಬರೆಸಿ ಆ ಭಾಗದಲ್ಲಿ ಸಮುದಾಯದ ಮಾತೃಭಾಷೆಯನ್ನು ‘ಪಯಕ’ ಎಂದು ಬರೆಯುವಂತೆ ಸಮೀಕ್ಷೆದಾರರಿಗೆ ಸ್ಪಷ್ಟವಾಗಿ ಹೇಳಬೇಕು ಎಂದು ಕರೆ ನೀಡಿರುವ ಸೂಫಿ ಹಾಜಿ, ಮನೆಯಲ್ಲಿ ಮಾತನಾಡುವ ತಮ್ಮ ಮಾತೃಭಾಷೆಯನ್ನು ನಮೂದಿಸಲು ಇಚ್ಚಿಸಿದರೆ ಅದನ್ನು ‘ಇತರೆ’ ಕಾಲಂನಲ್ಲಿ ಬರೆಸಲು ಈ ಸಮೀಕ್ಷೆಯಲ್ಲಿ ಆಯೋಗ ಅನುವು ಮಾಡಿಕೊಡಿಕೊಟ್ಟಿದೆ ಎಂದು ವಿವರಿಸಿದರು.
ಸಮೀಕ್ಷಾ ವ್ಯಾಪ್ತಿಯಲ್ಲಿರುವ ಮನೆಗಳಿಗೆ ತೆರಳಿ ಈಗಾಗಲೇ ಚೆಸ್ಕಾಂ ಸಿಬ್ಬಂದಿಗಳು ವಿದ್ಯುಚ್ಛಕ್ತಿ ಮೀಟರ್ ಗಳನ್ನು ಆಧರಿಸಿ ಸಿದ್ಧಪಡಿಸಿರುವ ಯು.ಎಚ್.ಐ.ಡಿ. ಸಂಖ್ಯೆಗಳ ಆಧಾರದ ಮೇಲೆ ಸರಕಾರ ನಿಯೋಜಿಸಿರುವ ಸಮೀಕ್ಷೆದಾರರು ಪ್ರತಿ ಮನೆಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಮನೆಯ ಕುಟುಂಬದ ಮುಖ್ಯಸ್ಥರು ಆದಷ್ಟು ಮನೆಯಲ್ಲಿರುವಂತೆ ಆಸಕ್ತಿ ವಹಿಸಬೇಕು. ಸಮೀಕ್ಷೆಯಲ್ಲಿ ಕೇಳುವ ಎಲ್ಲ ಪ್ರಶ್ನೆಗಳಿಗೆ ಪ್ರಾಮಾಣಿಕವಾಗಿ ಉತ್ತರಿಸಿ ನಿಖರವಾದ ಮಾಹಿತಿ ನೀಡಬೇಕು ಎಂದು ಸೂಫಿ ಹಾಜಿ ಅವರು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.
ಗೋಷ್ಠಿಯಲ್ಲಿ ಉಪಸ್ಥಿತರಿದ್ದ ಕೆ.ಎಂ.ಎ. ಹಿರಿಯ ಉಪಾಧ್ಯಕ್ಷರಾದ ಡಾ. ಜೋಯಿಪೆರ ಎ. ಕುಂಜ್ಹಬ್ದುಲ್ಲಾ ಅವರು ಮಾತನಾಡಿ, ವಿಶೇಷವಾಗಿ ಸಣ್ಣ ಸಣ್ಣ ಸಮುದಾಯಗಳು ಮತ್ತು ಅಲ್ಪಸಂಖ್ಯಾತ- ಸೂಕ್ಷ್ಮ ಅಲ್ಪಸಂಖ್ಯಾತ ಸಮುದಾಯಗಳು ಸಾಮಾಜಿಕ ನ್ಯಾಯವನ್ನು ಪಡೆಯುವುದು ಅವರ ಹಕ್ಕಾಗಿದೆ. ಈ ಸಾಮಾಜಿಕ ನ್ಯಾಯ ಹಂಚಿಕೆಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗಳು ಪ್ರಮುಖ ಪಾತ್ರ ವಹಿಸುತ್ತದೆ. ಜೊತೆಗೆ ವಿವಿಧ ಭಾಗಗಳಲ್ಲಿ ವಾಸವಾಗಿರುವ ಹಾಗೂ ವಿಭಿನ್ನ ವೃತ್ತಿಗಳಲ್ಲಿ ತೊಡಗಿರುವ ವ್ಯಕ್ತಿಗಳು ಮತ್ತು ಜನಸಮುದಾಯಗಳಲ್ಲಿ ಇರುವ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಅಸಮಾನತೆಯನ್ನು ಕಡಿಮೆ ಮಾಡುವಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕ ಸ್ಥಿತಿಗಳ ಕುರಿತಂತೆ ವೈಜ್ಞಾನಿಕ ಅಧ್ಯಯನ ನಡೆಸಲು ಈ ಸಮೀಕ್ಷೆ ಹೆಚ್ಚು ಪ್ರಯೋಜನವಾಗಲಿದೆ. ಆದರಿಂದ, ಈ ಸಮೀಕ್ಷೆಯ ಕುರಿತಂತೆ ಕಲ್ಪಿತ ವ್ಯಾಖ್ಯಾನಗಳ ಮೂಲಕ ಜಾತಿ-ಜನಾಂಗಗಳ ಬಗ್ಗೆ ಸಮಾಜದಲ್ಲಿ ತಪ್ಪು ಸಂದೇಶ ನೀಡಲು ಯಾರೂ ಮುಂದಾಗಬಾರದು ಎಂದು ಹೇಳಿದರು.
ಗೋಷ್ಠಿಯಲ್ಲಿ ಕೆ.ಎಂ.ಎ. ಉಪಾಧ್ಯಕ್ಷ ಅಕ್ಕಳತಂಡ ಎಸ್. ಮೊಯ್ದು ಉಪಸ್ಥಿತರಿದ್ದರು.



