ವಿರಾಜಪೇಟೆ : ಹಿರಿಯರನ್ನು ಪ್ರತಿಯೊಬ್ಬರು ಕೂಡ ಗೌರವಿಸಬೇಕು ಎಂದು ವಿರಾಜಪೇಟೆಯ ಸಂತ ಅನ್ನಮ್ಮ ಚರ್ಚ್‌ನ ಪ್ರಧಾನ ಗುರುಗಳು ಹಾಗೂ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ರೆ.ಫಾ. ಜೇಮ್ಸ್ ಡೊಮಿನಿಕ್ ಅಭಿಪ್ರಾಯಪಟ್ಟರು.
ಸಂತ ಅನ್ನಮ್ಮ ದ್ವಿ-ಶತಮಾನೋತ್ಸವ ಸಭಾಂಗಣದಲ್ಲಿ ಮದರ್ ಥೆರೇಸಾ ರವರ ಜನ್ಮ ದಿನಾಚರಣೆಯ ಪ್ರಯುಕ್ತ ಥೆರೇಸಾ ಸೇವಾ ಕೇಂದ್ರದ ವತಿಯಿಂದ ಆಯೋಜಿಸಲಾಗಿದ್ದ ಹಿರಿಯ ನಾಗರಿಕರ ದಿನಾಚರಣೆ ಹಾಗೂ ಸನ್ಮಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಹಿರಿಯರನ್ನು ಗೌರವಿಸುವುದು ಗಮನಾರ್ಹ ವಿಚಾರವಾಗಿದೆ. ಈ ಧರ್ಮಸಭೆಯನ್ನು ಹಿರಿಯರು ಕಟ್ಟಿ ಬೆಳೆಸಿರುತ್ತಾರೆ. ಧರ್ಮ ಕೇಂದ್ರದಲ್ಲಿ ಹಲವಾರು ಜನರು ಸೇವೆ ಸಲ್ಲಿಸಿರುತ್ತಾರೆ. ಮಾತ್ರವಲ್ಲದೆ ಪ್ರತಿಭೆಗಳನ್ನು ಗುರುತಿಸಿ ಗೌರವಿಸುವುದು ಪ್ರಶಂಸನೀಯ ಎಂದರು.
ಮದರ್ ತೆರೇಸಾ ಸೇವಾ ಕೇಂದ್ರದ ಸಾಮಾಜಿಕ ಕಳಕಳಿ ಮಹತ್ವದ್ದಾಗಿದೆ. ಮತ್ತಷ್ಟು ಸಮಾಜಮುಖಿ ಕಾರ್ಯಗಳು ಸೇವಾ ಕೇಂದ್ರದ ಮುಖಾಂತರ ಜರುಗಲಿ ಎಂದು ಶುಭ ಹಾರೈಸಿದರು.
ವಿದ್ಯಾರ್ಥಿಗಳಾದ ಮರಿಯಾ ಕುರಿಯಕೋಸ್, ಏನನ್ ಮೆಂಡೋಂಜಾ, ದಿಯಾ, ಜನಿಫರ್ ಅಲ್ವರಿಸ್, ದಿವಿನ ಸಾಲ್ಡನಗೆ ವಿದ್ಯಾರ್ಥಿ ವೇತನವನ್ನು ನೀಡಲಾಯಿತು. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಹಲವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಹಾಯಕ ಗುರು ಫಾ. ಅಭಿಲಾಶ್, ಬೆಂಗಳೂರು ಸಂತ ಜೋಸೆಫರ ಸ್ವಾಯತ್ತ ವಿಶ್ವವಿದ್ಯಾನಿಲಯದ ಪರೀಕ್ಷಾಂಗ ವಿಭಾಗದ ಮುಖ್ಯಸ್ಥ ಗಾಡ್ವಿನ್ ಡಿಸೋಜಾ, ರಾಜ್ಯಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಪುರಸ್ಕೃತೆ ಅರುಣ ಆನ್ಸಿ ಡಿಸೋಜ, ದಂತ ವೈದ್ಯರಾದ ಡಾ. ಮರಿಯ, ಸಮಾಜ ಸೇವಕ ಲಾರೆನ್ಸ್, ಗಾಯಕರಾದ ಪಿಯೂಷ್ ಮೆನೇಜಸ್ ಹಾಗೂ ಜಾಯ್ ಪಿ.ಜೆ. ಅವರನ್ನು ಅತಿಥಿಗಳು ಸನ್ಮಾನಿಸಿ ಗೌರವಿಸಿದರು.
75 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮದರ್ ತೆರೇಸಾ ಸೇವಾ ಕೇಂದ್ರದ ಅಧ್ಯಕ್ಷ ಪಿ.ಎಸ್. ಮಚ್ಚಾಡೋ ಮಾತನಾಡಿ, ನಮ್ಮ ಸೇವಾ ಕೇಂದ್ರದ ವತಿಯಿಂದ ಹಿಂದೂ ಹಿರಿಯ ನಾಗರಿಕರಿಗೆ ಗೌರವವನ್ನು ನೀಡುವುದರ ಜೊತೆಗೆ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ. ಧರ್ಮ ಕೇಂದ್ರದ ಭಕ್ತರ ನೆರವಿನಿಂದ ಹಾಗೂ ದಾನಿಗಳ ನೆರವಿನಿಂದ ಈ ಕಾರ್ಯವು ಯಶಸ್ವಿಯಾಗಿ ನಡೆಯುತ್ತಿದೆ. ಇನ್ನು ಮುಂದೆಯೂ ಹಲವಾರು ಸಮಾಜಮುಖಿ ಕಾರ್ಯಗಳನ್ನು ನಡೆಸುವ ಉದ್ದೇಶ ಸೇವಾ ಕೇಂದ್ರಕ್ಕಿದೆ ಎಂದರು.
ಸಂತ ಅನ್ನಮ್ಮ ಪಾಲಕ ಶಿಕ್ಷಕರ ಸಂಘದ ಉಪಾಧ್ಯಕ್ಷ ಜೋಕಿಂ ರಾಡ್ರಿಗೀಸ್ ಸ್ವಾಗತಿಸಿದರು. ಜಾನ್ ಪ್ರಸನ್ನ ಪ್ರಾರ್ಥಿಸಿದರು. ನಿವೃತ್ತ ಪ್ರಾಂಶುಪಾಲ ಚಾರ್ಲ್ಸ್ ಡಿಸೋಜಾ ಹಾಗೂ ಡೀನ್ ಸಾಲ್ವೋ ಡಿಸೋಜ ನಿರೂಪಿಸಿದರು. ಸಂಘದ ಸದಸ್ಯ ಕೆ.ಟಿ. ಥೋಮಸ್ ವಂದಿಸಿದರು. ವೇದಿಕೆಯಲ್ಲಿ ಮದರ್ ತೆರೇಸಾ ಸೇವಾ ಕೇಂದ್ರದ ಉಪಾಧ್ಯಕ್ಷರಾದ ಮಾರ್ಟಿನ್ ಬರ್ನಾಡ್, ಉದ್ಯಮಿ ಚೋಪಿ ಜೋಸೆಫ್, ಜೇಮ್ಸ್ ಮೆನೇಜಸ್, ಅನಿತಾ ನರೋನ ಉಪಸ್ಥಿತರಿದ್ದರು.



