ಮಡಿಕೇರಿ : ಗಾಳಿಬೀಡು ಗ್ರಾಮದಲ್ಲಿ ಅಪರಿಚಿತರು ಮೃತ ಹಂದಿಗಳನ್ನು ರಸ್ತೆ ಬದಿ ಎಸೆದು ಹೋಗಿದ್ದ ಪ್ರಕರಣಕ್ಕೆ ಸ್ಥಳೀಯ ಪಂಚಾಯಿತಿ ಸ್ಪಂದಿಸಿದೆ. ಯಾಳದಾಳು ಶರತ್ ಎಂಬವರ ತೋಟಕ್ಕೆ ಹೋಗುವ ರಸ್ತೆಯಲ್ಲಿ ಮೃತ ಹಂದಿಯನ್ನು ಎಸೆದು ಹೋಗಿರುವ ಬಗ್ಗೆ ಸ್ಥಳೀಯರಾದ ದಿಶಾಂತ್ ಪಂಚಾಯಿತಿ ಗಮನಕ್ಕೆ ತಂದಿದ್ದರು.
ಇದಕ್ಕೆ ಸ್ಪಂದಿಸಿದ ಪಿಡಿಒ ಜೆಸಿಬಿ ಮೂಲಕ ಅದನ್ನು ತೆರವು ಮಾಡಲು ಸೂಚಿಸಿದರು. ಗುಂಡಿ ತೆಗೆದು ಜೆಸಿಬಿ ಮೂಲಕ ಹೂಳಲಾಯಿತು. ಗ್ರಾಮಸ್ಥರಾದ ದಿಶಾಂತ್, ಯಾಳದಳು ಶರತ್, ಯಾಳದಾಳು ನಿತಿನ್, ಪಂಚಾಯಿತಿ ಸಿಬ್ಬಂದಿಯ ಮನು ಕುಮಾರ್ ಇದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿದ ದಿಶಾಂತ್, ಹಂದಿಗಳಿಗೆ ಮಾರಣಾಂತಿಕ ಕಾಯಿಲೆ ಬಂದು ಕಳೆದು ನಾಲ್ಕು ತಿಂಗಳ ಹಿಂದೆ ಹಲವಾರು ಹಂದಿಗಳು ಮೃತಪಟ್ಟಿದೆ. ಆ ಮಾರಣಾಂತಿಕ ಕಾಯಿಲೆಗೆ ಔಷಧಿ ಇಲ್ಲ. ಹೀಗಾಗಿ ಜನ ಕೂಡಾ ಹಂದಿ ಸಾಕುವುದನ್ನು ಕಡಿಮೆ ಮಾಡಿದ್ದಾರೆ. ಅನಾರೋಗ್ಯದಿಂದ ಮೃತಪಟ್ಟ ಹಂದಿಯನ್ನು ಅವೈಜ್ಞಾನಿಕವಾಗಿ ಎಲ್ಲೆಂದರಲ್ಲಿ ಎಸೆದು ಹೋಗುವವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.



