ಸಿದ್ದಾಪುರ : ಕೊಡಗು ಜಿಲ್ಲೆಯಲ್ಲಿ ಬಹುತೇಕ ರಸ್ತೆಗಳ ಸ್ಥಿತಿ ಬಹಳ ಶೋಚನೀಯವಾಗಿದೆ. ಎಲ್ಲೆಡೆ ಹೊಂಡ ಗುಂಡಿಗಳಿಂದ ಕೂಡಿರುವ ರಸ್ತೆಗಳಿಂದಾಗಿ ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ.
ಕೊಡಗು ಜಿಲ್ಲೆಯಲ್ಲಿ ಎಲ್ಲಿ ಉತ್ತಮ ರಸ್ತೆ ಇದೆ ಅಂತ ಹುಡುಕುವ ಪರಿಸ್ಥಿತಿ ಎದುರಾಗಿದೆ ಎಂದರೆ ತಪ್ಪಾಗಲಾರದು. ಈ ನಡುವೆ ಮಳೆಗಾಲದಲ್ಲಿ ರಸ್ತೆಗಳು ಹಾಳಾಗಿರುವುದರಿಂದಾಗಿ ಸರ್ಕಾರ ವಿಶೇಷ ಪ್ಯಾಕೇಜ್ ಅನ್ನು ಜಿಲ್ಲೆಗೆ ನೀಡಬೇಕೆಂಬ ಆಗ್ರಹವೂ ವ್ಯಕ್ತವಾಗುತ್ತಿದೆ. ಇದರ ನಡುವೆ ಸರ್ಕಾರವನ್ನು ಅಣಕಿಸುವ ರೀತಿಯಲ್ಲಿ ಒಂದಷ್ಟು ಪೋಸ್ಟ್ಗಳು ಗಮನಸೆಳೆಯುತ್ತಿದೆ. ಜಿಲ್ಲೆಯ ನೆಲ್ಯಹುದಿಕೇರಿಯ ಮುಖ್ಯ ರಸ್ತೆ ಬದಿಯಲ್ಲಿ ಒಂದು ಬ್ಯಾನರ್ ಈಗ ಎಲ್ಲರ ಗಮನಸೆಳೆಯುತ್ತಿದೆ. ರಸ್ತೆ ಕಾಣೆಯಾಗಿದೆ ಅಂತ ದೊಡ್ಡ ಅಕ್ಷರದಲ್ಲಿ ಬರೆದಿದ್ದು, ಅದರ ಕೆಳಗೆ ʼವಾಹನ ಸವಾರರು ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಬೇಕಾಗಿ ವಿನಂತಿ. ನಮ್ಮ ಕೊಡಗಿನಲ್ಲಿ ಉತ್ತಮ ಉತ್ತಮವಾದ ರಸ್ತೆ ಕನಸಲ್ಲಿ ಮಾತ್ರʼ ಅಂತ ಬರೆಯಲಾಗಿದೆ. ಬ್ಯಾನರ್ ಅಳವಡಿಸಿರುವ ಫೋಟೋವನ್ನ ಜನ ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.




