ವಿರಾಜಪೇಟೆ : ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ. ಎಂ. ಎ.) ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕೆ. ಎಂ. ಎ. ಪ್ರಧಾನ ಕಛೇರಿಯಿರುವ ವಿರಾಜಪೇಟೆಯ ಮುಖ್ಯ ರಸ್ತೆಯ ಡಿ.ಹೆಚ್.ಎಸ್. ಕಟ್ಟಡದ ಮುಂಭಾಗದಲ್ಲಿ ಶುಕ್ರವಾರ ಬೆಳಿಗ್ಗೆ ಕೆ. ಎಂ. ಎ. ಅಧ್ಯಕ್ಷರಾದ ದುದ್ದಿಯಂಡ ಹೆಚ್. ಸೂಫಿ ಹಾಜಿ ಧ್ವಜಾರೋಹಣ ನೆರವೇರಿಸಿದರು. ನಂತರ ಧ್ವಜ ವಂದನೆಗಳೊಂದಿಗೆ ರಾಷ್ಟ್ರಗೀತೆಯನ್ನು ಸಾಮೂಹಿಕವಾಗಿ ಹಾಡಲಾಯಿತು.
ಬಳಿಕ ಮಾತನಾಡಿದ ದುದ್ದಿಯಂಡ ಎಚ್. ಸೂಫಿ ಹಾಜಿ, ರಾಷ್ಟ್ರಪಿತ ಮಹಾತ್ಮ ಗಾಂಧೀ ಸೇರಿದಂತೆ ಹಲವಾರು ಕ್ರಾಂತಿಕಾರಿ ಹೋರಾಟಗಾರರ ತ್ಯಾಗ ಮತ್ತು ಬಲಿದಾನದ ಫಲವಾಗಿ ದೇಶಕ್ಕೆ ದೊರೆತ ಸ್ವಾತಂತ್ರ್ಯದ ಮಹತ್ವವನ್ನು ಮುಖ್ಯವಾಗಿ ಇಂದಿನ ಯುವ ಸಮೂಹ ಅರಿತುಕೊಳ್ಳಬೇಕು. ದೇಶದಾದ್ಯಂತ ಸಡಗರದಿಂದ ಆಚರಿಸಲ್ಪಡುವ ಸ್ವಾತಂತ್ರ್ಯ ದಿನಾಚರಣೆ ಪ್ರತಿಯೊಬ್ಬರ ಪಾಲಿಗೆ ಸಂಭ್ರಮದ ದಿನವಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸ್ವಾತಂತ್ರ್ಯ ದಿನಾಚರಣೆ ಕೇವಲ ರಜಾ ದಿನವಾಗಬಾರದು. ಬದಲಾಗಿ ನಮ್ಮ ಸ್ವಾತಂತ್ರ್ಯ ಹೋರಾಟಗಾರರಿಗೆ ಧನ್ಯವಾದ ಹೇಳಲು, ಅವರ ಮೌಲ್ಯಗಳನ್ನು ನೆನಪಿಸಿಕೊಳ್ಳಲು ಮತ್ತು ದೇಶದ ಸ್ವತಂತ್ರ ಚಳುವಳಿಯ ಇತಿಹಾಸವನ್ನು ನೆನಪಿಸಿಕೊಳ್ಳಲು ಒಂದು ಅವಕಾಶ ಎಂದು ಪರಿಗಣಿಸಬೇಕು. ಈ ಸ್ವಾತಂತ್ರ್ಯ ದಿನಾಚರಣೆ ಏಕತೆಯ ಮನೋಭಾವನೆಯನ್ನು ಮತ್ತು ಏಕೀಕೃತ ಬಲಿಷ್ಠ ಭಾರತದ ಕುರಿತ ಜಾಗೃತಿಯನ್ನು ಮೂಡಿಸುತ್ತದೆ ಎಂದು ಸೂಫಿ ಹಾಜಿ ಇದೇ ಸಂದರ್ಭದಲ್ಲಿ ಒತ್ತಿ ಹೇಳಿದರು.
ಕೆ.ಎಂ.ಎ ಆಡಳಿತ ಮಂಡಳಿ ನಿರ್ದೇಶಕರೂ ಆಗಿರುವ ನಿವೃತ್ತ ಸೇನಾಧಿಕಾರಿ ಆಲೀರ ಬಿ. ಅಬ್ದುಲ್ಲಾ ಧ್ವಜವಂದನೆ ನಿರ್ವಹಿಸಿದರು. ಕೆ.ಎಂ.ಎ ಪ್ರಧಾನ ಕಾರ್ಯದರ್ಶಿ ಈತಲತಂಡ ರಫೀಕ್ ತೂಚಮಕೇರಿ, ಸಹ ಕಾರ್ಯದರ್ಶಿ ಕರತೊರೆರ ಕೆ. ಮುಸ್ತಫಾ, ಹಿರಿಯ ನಿರ್ದೇಶಕರಾದ ಚಿಮ್ಮಿಚ್ಚಿರ ಕೆ. ಇಬ್ರಾಹಿಂ ಹಾಜಿ (ಉಮ್ಮಣಿ), ಪದಾಧಿಕಾರಿಗಳಾದ ಪೊಯಕೆರ ಎಸ್. ರಫೀಕ್, ಮಂಡೇಂಡ ಎ.ಮೊಯ್ದು, ಕುಪ್ಪೋಡಂಡ ಅಬ್ದುಲ್ ರಶೀದ್, ಪುದಿಯಾಣೆರ ಎಂ. ಹನೀಫ್, ಕೋಳುಮಂಡ ರಫೀಕ್, ದುದ್ದಿಯಂಡ ಹೆಚ್. ಮೊಯ್ದು, ಕೆಂಗೋಟಂಡ ಎಸ್. ಸೂಫಿ, ಆಲೀರ ಹೆಚ್. ಅಬ್ದುಲ್ ಲತೀಫ್, ಮಂದಮಾಡ ಎ. ಮುನೀರ್, ಸಂಸ್ಥೆಯ ಸದಸ್ಯರಾದ ಚೆನ್ನಂಗೋಟ್ ಅಹಮದ್, ಕನ್ನಡಿಯಂಡ ಹನೀಫ್, ದುದ್ದಿಯಂಡ ಮಾಶೂಕ್ ಸೂಫಿ, ಕರತೊರೆರ ಅಮೀನ್ ಮುಸ್ತಫಾ ಮೊದಲಾದವರು ಪಾಲ್ಗೊಂಡಿದ್ದರು.



