ಲೇಖನ : ಡಾ. ಸುನೀಲ್ ಕಾರಂತ್, ಬೆಂಗಳೂರು
ಅಂಗಾಂಗ ದಾನದ ಪ್ರತಿಜ್ಞೆ ಮಾಡುವಲ್ಲಿ ಕರ್ನಾಟಕವು ಈಗ ದೇಶದಲ್ಲಿ ಮೂರನೇ ಸ್ಥಾನದಲ್ಲಿದೆ. ಇದು ಹೆಮ್ಮೆಯ ಸಂಗತಿಯಾಗಿದ್ದು, ಜೀವ ಉಳಿಸುವ ಈ ಕಾರ್ಯದ ಬಗ್ಗೆ ಜಾಗೃತಿ ನಿಧಾನವಾಗಿ ಬೆಳೆಯುತ್ತಿದೆ ಎಂಬುದನ್ನು ತೋರಿಸುತ್ತದೆ. ಆದರೆ, ಸಾಗಬೇಕಾದ ದಾರಿ ಇನ್ನೂ ಬಲು ದೂರವಿದೆ. ಪ್ರತಿದಿನ ನಮ್ಮ ಆಸ್ಪತ್ರೆಯಲ್ಲಿ ಹೃದಯ, ಯಕೃತ್ತು, ಮೂತ್ರಪಿಂಡ, ಶ್ವಾಸಕೋಶ ಅಥವಾ ಕರುಳು ಕಸಿಗಾಗಿ ರೋಗಿಗಳು ಹತಾಶೆಯಿಂದ ಕಾಯುತ್ತಿರುವುದನ್ನು ನಾವು ನೋಡುತ್ತೇವೆ. ಅವರಲ್ಲಿ ಅನೇಕರಿಗೆ ಬಹಳ ಸಮಯ ತಗಲುತ್ತದೆ.
ಅಂಗಾಂಗ ದಾನವು ಒಬ್ಬ ವ್ಯಕ್ತಿ ಅಥವಾ ಅವರ ಕುಟುಂಬವು ಆಯ್ಕೆಮಾಡಬಹುದಾದ ಅತ್ಯಂತ ನಿಸ್ವಾರ್ಥ ಮತ್ತು ಪ್ರಬಲ ಕಾರ್ಯಗಳಲ್ಲಿ ಒಂದಾಗಿದೆ. ದುಃಖದ ನಡುವೆ ನಿರ್ಧಾರ ತೆಗೆದುಕೊಳ್ಳುವುದು ಸುಲಭವಲ್ಲ. ಆದರೆ, ಇದು ದುರಂತವನ್ನು ಭರವಸೆಯಾಗಿ ಪರಿವರ್ತಿಸುವ ಮತ್ತು ಮತ್ತೊಬ್ಬರಿಗೆ ಬದುಕಲು ಎರಡನೇ ಅವಕಾಶವನ್ನು ನೀಡುವ ಶಕ್ತಿಯನ್ನು ಹೊಂದಿದೆ.
ಮನಸ್ಸು ತಟ್ಟುವ ನೈಜ ಕಥೆ
ಇತ್ತೀಚೆಗೆ ನಾವು ಶ್ರೀ ಉಮಾಮಹೇಶ್ವರ ದೇವಾಲಯದಲ್ಲಿ ಸೇವೆ ಸಲ್ಲಿಸುತ್ತಿದ್ದ ಯುವ ಅರ್ಚಕರಾದ ಶ್ರೀ ಆರ್.ಒ. ಗುರುಸಿದ್ಧಲಿಂಗಾರಾಧ್ಯ ಅವರ ನೈಜ ಉದಾಹರಣೆ ತೆಗೆದುಕೊಳ್ಳೋಣ. ತಮ್ಮ ಬೈಕ್ನಿಂದ ಬಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರನ್ನು ತುರ್ತು ಚಿಕಿತ್ಸೆಗಾಗಿ ನಮ್ಮ ಆಸ್ಪತ್ರೆಗೆ ಕರೆತರಲಾಯಿತು. ಅವರು ಬಂದಾಗ, ಅವರ ಪ್ರಜ್ಞೆಯ ಮಟ್ಟದಲ್ಲಿ ಕ್ಷಿಪ್ರ ಇಳಿಕೆ ಕಂಡುಬಂದಿತು. ಆ ಕಾರಣಕ್ಕಾಗಿ ನಾವು ಅವರನ್ನು ವೆಂಟಿಲೇಟರ್ ಬೆಂಬಲದ ಮೇಲೆ ಇರಿಸಿದೆವು. ಸ್ಕ್ಯಾನ್ಗಳಲ್ಲಿ ಮೆದುಳಿಗೆ ತೀವ್ರ ಹಾನಿಯಾಗಿರುವುದು ಕಂಡುಬಂತು.
ನಮ್ಮ ಎಲ್ಲ ಪ್ರಯತ್ನಗಳ ಹೊರತಾಗಿಯೂ, ಅವರ ಸ್ಥಿತಿ ಹದಗೆಟ್ಟಿತು. ಎಲ್ಲಾ ಅಗತ್ಯ ಪರೀಕ್ಷೆಗಳ ನಂತರ, ಅವರನ್ನು ಮೆದುಳು ನಿಷ್ಕ್ರಿಯ (brain dead) ಎಂದು ಘೋಷಿಸಲಾಯಿತು. ಗುರುಸಿದ್ಧಲಿಂಗಾರಾಧ್ಯ ಅವರ ಕುಟುಂಬ- ಹೆತ್ತವರು, ಪತ್ನಿ, ಚಿಕ್ಕ ಮಗಳು ಮತ್ತು ಸಹೋದರಿಯರು ಈ ಸುದ್ದಿಯಿಂದ ತೀವ್ರವಾಗಿ ನೊಂದರು. ಆರಂಭದಲ್ಲಿ, ಅವರು ಕೇವಲ ಅವರ ಕಣ್ಣುಗಳನ್ನು ಮಾತ್ರ ದಾನ ಮಾಡಲು ನಿರ್ಧರಿಸಿದರು. ಆದರೆ ಕೌನ್ಸೆಲಿಂಗ್ ಸಮಯದಲ್ಲಿ, ಬಹು ಅಂಗಾಂಗ ದಾನದ ಮೂಲಕ ಜೀವ ಉಳಿಸುವ ಸಾಧ್ಯತೆಗಳು, ಮತ್ತು ಈ ಕಾರ್ಯಕ್ಕೆ ಬೆಂಬಲ ನೀಡುವ ಸರ್ಕಾರಿ ಯೋಜನೆಗಳ ಬಗ್ಗೆ ನಾವು ಅವರಿಗೆ ವಿವರಿಸಿದೆವು.
ಅವರ ತಂದೆಯವರ ನೇತೃತ್ವದಲ್ಲಿ ಕುಟುಂಬದವರು ಪರಸ್ಪರ ಚರ್ಚಿಸಿದ ನಂತರ, ಹೆಚ್ಚಿನ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದರು. ಈ ನಿರ್ಧಾರದ ಕಾರಣ, ಅವರ ಕಾರ್ನಿಯಾ, ಯಕೃತ್ತು ಮತ್ತು ಹೃದಯ ಕವಾಟಗಳನ್ನು ಯಶಸ್ವಿಯಾಗಿ ಸಂಗ್ರಹಿಸಲಾಯಿತು. ಈಗ ಪವಾಡಕ್ಕಾಗಿ ಕಾಯುತ್ತಿದ್ದ ಹಲವಾರು ಜನರಿಗೆ ಗುರುಸಿದ್ಧಲಿಂಗಾರಾಧ್ಯ ಅವರ ಅಂಗಗಳು ಸಹಾಯ ಮಾಡುತ್ತವೆ.
ಇದು ಗುರುಸಿದ್ಧಲಿಂಗಾರಾಧ್ಯ ಅವರ ಕುಟುಂಬ ತಮಗೆ ಉಂಟಾದ ಅಸಾಧಾರಣ ನಷ್ಟದ ನಡುವೆ ತೋರಿದ ಅಸಾಮಾನ್ಯ ಔದಾರ್ಯದ ಕಾರ್ಯವಾಗಿತ್ತು. ಇಂತಹ ಕ್ಷಣಗಳು ಜಾಗೃತಿ ಏಕೆ ಬಹಳ ಮುಖ್ಯ ಎಂಬುದನ್ನು ನಮಗೆ ನೆನಪಿಸುತ್ತವೆ.
ಅಂಗಾಂಗ ದಾನದ ಬಗ್ಗೆ ಸಾಮಾನ್ಯ ತಪ್ಪು ಕಲ್ಪನೆಗಳು
ಅನೇಕ ಜನರು ಕೆಲವು ಭಯ ಅಥವಾ ತಪ್ಪು ಕಲ್ಪನೆಗಳ ಕಾರಣದಿಂದ ತಮ್ಮ ಅಂಗಾಂಗಗಳನ್ನು ದಾನ ಮಾಡಲು ಹಿಂಜರಿಯುತ್ತಾರೆ. ಅವುಗಳಲ್ಲಿ ಕೆಲವನ್ನು ಇಲ್ಲಿ ತಿಳಿಸಲಾಗಿದೆ:
•”ನಾನು ನೋಂದಾಯಿತ ದಾನಿಯಾದರೆ, ವೈದ್ಯರು ನನ್ನನ್ನು ಉಳಿಸಲು ಪ್ರಯತ್ನಿಸದಿರಬಹುದು.”
ಇದು ನಿಜವಲ್ಲ. ವೈದ್ಯರು ಯಾವಾಗಲೂ ರೋಗಿಯ ಜೀವ ಉಳಿಸಲು ಗಮನ ಹರಿಸುತ್ತಾರೆ. ಕಟ್ಟುನಿಟ್ಟಾದ ವೈದ್ಯಕೀಯ ಪರೀಕ್ಷೆಗಳ ಮೂಲಕ ಮೆದುಳಿನ ನಿಷ್ಕ್ರಿಯತೆಯನ್ನು ದೃಢಪಡಿಸಿದ ನಂತರವೇ ಅಂಗಾಂಗ ದಾನವನ್ನು ಪರಿಗಣಿಸಲಾಗುತ್ತದೆ.
•”ನನಗೆ ವಯಸ್ಸಾಗಿದೆ ಅಥವಾ ಆರೋಗ್ಯ ಸಮಸ್ಯೆಗಳಿವೆ. ಆದ್ದರಿಂದ ನಾನು ದಾನ ಮಾಡಲು ಸಾಧ್ಯವಿಲ್ಲ.”
ಇದಕ್ಕೆ ಯಾವುದೇ ನಿರ್ದಿಷ್ಟ ವಯಸ್ಸಿನ ಮಿತಿಯಿಲ್ಲ. ದಾನ ಮಾಡುವ ಸಮಯದಲ್ಲಿ ನಿಮ್ಮ ಅಂಗಾಂಗಗಳನ್ನು ದಾನ ಮಾಡಬಹುದೇ ಎಂದು ವೈದ್ಯಕೀಯ ತಜ್ಞರು ನಿರ್ಣಯಿಸುತ್ತಾರೆ.
•”ನನ್ನ ಧರ್ಮ ಇದಕ್ಕೆ ಅನುಮತಿಸುವುದಿಲ್ಲ.”
ಭಾರತದ ಬಹುತೇಕ ಪ್ರಮುಖ ಧರ್ಮಗಳು ಅಂಗಾಂಗ ದಾನವನ್ನು ದಯೆ ಮತ್ತು ಮಾನವ ಸೇವಾ ಕಾರ್ಯವೆಂದು ಬೆಂಬಲಿಸುತ್ತವೆ.
•”ದೇಹ ವಿರೂಪಗೊಳ್ಳುತ್ತದೆ.”
ಅಂಗಾಂಗಗಳನ್ನು ಬಹಳ ಗೌರವ ಮತ್ತು ಕಾಳಜಿಯಿಂದ ತೆಗೆದುಹಾಕಲಾಗುತ್ತದೆ. ಯಾವುದೇ ವಿರೂಪತೆ ಇರುವುದಿಲ್ಲ. ಕುಟುಂಬಗಳು ಅಂತ್ಯಸಂಸ್ಕಾರಗಳನ್ನು ಮಾಡಬಹುದು.
ಕೊನೆಯ ಮಾತು
ವೈದ್ಯರಾದ ನಾವು ಅಂಗಾಂಗ ದಾನದಿಂದ ಒಬ್ಬರ ಬದುಕು ಸಂಪೂರ್ಣವಾಗಿ ಬದಲಾಗುವುದನ್ನು ಕಣ್ಣಾರೆ ನೋಡಿದ್ದೇವೆ. ಒಂದು ಜೀವ ಕೊನೆಯಾದಾಗ, ಆ ಜೀವವು ಇನ್ನೊಬ್ಬರ ಬಾಳಿನಲ್ಲಿ ಹೊಸ ಬೆಳಕು ತರಬಹುದು. ಕರ್ನಾಟಕದಲ್ಲಿ ಅಂಗಾಂಗ ದಾನದ ಕುರಿತು ಜಾಗೃತಿ ಹೆಚ್ಚುತ್ತಿರುವುದು ಒಳ್ಳೆಯ ಸಂಗತಿ. ಆದರೆ, ನಮಗೆ ಇನ್ನೂ ಹೆಚ್ಚಿನ ಜನರು ದಾನ ಮಾಡಲು ಮುಂದೆ ಬರಬೇಕು.
ಅಂಗಾಂಗ ದಾನವೆಂದರೆ ಬದುಕಿನ ಅಂತ್ಯವಲ್ಲ. ಅದು ಇನ್ನೊಬ್ಬರಿಗೆ ನೀಡುವ ಹೊಸ ಜೀವನ, ಅವರ ಕುಟುಂಬದೊಂದಿಗೆ ಮತ್ತೊಂದು ದಿನ ಕಳೆಯುವ ಅವಕಾಶ. ಇದು ಎಲ್ಲರೂ ಲೋಕ ಒಳಿತಿಗಾಗಿ ಬಿಟ್ಟುಹೋಗಬಹುದಾದ ಶ್ರೇಷ್ಠ ಪರಂಪರೆ.
(ಲೇಖಕರು: ಡಾ. ಸುನಿಲ್ ಕಾರಂತ್, ಅಧ್ಯಕ್ಷರು, ವಿಭಾಗದ ಮುಖ್ಯಸ್ಥರು ಮತ್ತು ಸಲಹೆಗಾರರು – ಕ್ರಿಟಿಕಲ್ ಕೇರ್ ಮೆಡಿಸಿನ್, ಮಣಿಪಾಲ್ ಆಸ್ಪತ್ರೆ ಓಲ್ಡ್ ಏರ್ಪೋರ್ಟ್ ರೋಡ್, ಬೆಂಗಳೂರು ಮತ್ತು ಡಾ. ಮಹೇಶ ಪಡ್ಯಾನ, ಸಲಹೆಗಾರರು – ಕ್ರಿಟಿಕಲ್ ಕೇರ್ ಮೆಡಿಸಿನ್, ಮಣಿಪಾಲ್ ಆಸ್ಪತ್ರೆ ಓಲ್ಡ್ ಏರ್ಪೋರ್ಟ್ ರೋಡ್, ಬೆಂಗಳೂರು)



