ಧರ್ಮಸ್ಥಳ : ನೂರಕ್ಕೂ ಹೆಚ್ಚು ಶವಗಳನ್ನು ಹೂತಿದ್ದಾಗಿ ಹೇಳಿದ ವ್ಯಕ್ತಿಯ ವಿಚಾರದಲ್ಲಿ ತನಿಖೆ ಆರಂಭಿಸಿರುವ ಎಸ್ಐಟಿ ನೇತ್ರಾವತಿ ನದಿ ತೀರದಲ್ಲಿ ಉತ್ಕನನ ಆರಂಭಿಸಿದೆ.
ನಿನ್ನೆ ಈ ವ್ಯಾಪ್ತಿಯ 13 ಸ್ಥಳಗಳನ್ನು ದೂರುದಾರ ವ್ಯಕ್ತಿಯ ಸಮ್ಮುಖದಲ್ಲಿ ಗುರುತು ಮಾಡಲಾಗಿತ್ತು. ಇಂದು ಬೆಳಗ್ಗೆ ತನಿಖಾಧಿಕಾರಿಗಳು ವಿವಿಧ ಅಧಿಕಾರಿಗಳ ಸಮ್ಮುಖದಲ್ಲಿ ಕಾರ್ಮಿಕರ ಸಹಾಯದಿಂದ ಕಳೇಬರಕ್ಕಾಗಿ ಉತ್ಕನನ ಆರಂಭಿಸಿದರು. ಪಾಯಿಂಟ್ 01ರಲ್ಲಿ ಮಳೆಯ ನಡುವೆಯೂ ಮಧ್ಯಾಹ್ನವರೆಗೆ ಅಗೆದಾಗ ಯಾವುದೇ ಕುರುಹು ಸಿಗಲಿಲ್ಲ. ತನಿಖಾ ತಂಡದ ಎಂ.ಎನ್. ಅನುಚೇತ್ ಕೂಡಾ ಖುದ್ದು ಸ್ಥಳದಲ್ಲಿದ್ದು ಕಾರ್ಯಾಚರಣೆ ನೋಡಿಕೊಂಡಿದ್ದಾರೆ.
ಈ ನಡುವೆ ಮಳೆ ಹಾಗೂ ಗುಂಡು ಅಗೆದಾಗ ಅಲ್ಲಿ ಬರುತ್ತಿದ್ದ ಜಲ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಜೆಸಿಬಿ ಬಳಸಿ ಗುಂಡಿ ತೋಡುವಂತೆ ದೂರುದಾರ ತನಿಖಾ ತಂಡಕ್ಕೆ ಮನವಿ ಮಾಡಿದ್ದು, ಮಧ್ಯಾಹ್ನ ಭೋಜನದ ನಂತರ ಸಣ್ಣ ಹಿಟಾಚಿ ಮೂಲಕ ಉತ್ಕನನ ಮುಂದುವರೆಸಲು ತಂಡ ಮುಂದಾಗಿದೆ.
ಉತ್ಕನನ ಆರಂಭವಾದಾಗಿನಿಂದ ಈ ವ್ಯಾಪ್ತಿಯಲ್ಲಿ ಜನ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಕುತೂಹಲದಿಂದ ನೋಡುತ್ತಿರುವ ಚಿತ್ರಣ ಕಂಡುಬರುತ್ತಿದೆ. ಪೊಲೀಸರು ಹೆಚ್ಚಿನ ಭದ್ರತೆ ಕೈಗೊಂಡಿದ್ದಾರೆ.
