ಕುಶಾಲನಗರ : ಜಿಲ್ಲಾದ್ಯಂತ ಎಡೆಬಿಡದೆ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾಗಿದೆ. ಕಣಿವೆ ಬಳಿ ಕಾವೇರಿ ಮೈದುಂಬಿ ಹರಿಯುತ್ತಿದ್ದು, ಅಪಾಯಮಟ್ಟ ತಲುಪಿದೆ. ಹೀಗಾಗಿ ತೂಗುಸೇತುವೆ ಪ್ರವೇಶಕ್ಕೆ ತಾತ್ಕಾಲಿಕ ನಿರ್ಬಂಧ ಹೇರಲಾಗಿದೆ.
ಈ ಪ್ರದೇಶವನ್ನು ಪರಿಶೀಲಿಸಿ ತಹಸೀಲ್ದಾರ್ ಕಿರಣ್ ಗೌರಯ್ಯ, ತೂಗು ಸೇತುವೆ ಪ್ರವೇಶ ದ್ವಾರವನ್ನು ಬಂದ್ ಮಾಡಿಸಿದ್ದಾರೆ. ಸೇತುವೆ ಮೇಲೆ ಸಾರ್ವಜನಿಕರು ಅಪಾಯವನ್ನೂ ಲೆಕ್ಕಿಸದೆ ಓಡಾಡುತ್ತಾ, ಸೆಲ್ಫಿ ತೆಗೆದುಕೊಳ್ಳುತ್ತಾ ಇದ್ದರು. ಈ ಬಗ್ಗೆ ಸ್ಥಳೀಯರು ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಇದನ್ನು ಗಂಭೀರವಾಗಿ ತೆಗೆದುಕೊಂಡ ಅಧಿಕಾರಿಗಳು, ತೂಗು ಸೇತುವೆ ಮೇಲೆ ಸ್ಥಳೀಯರ ದೈನಂದಿನ ಪ್ರವೇಶಕ್ಕೆ ಅವಕಾಶ ನೀಡಿದ್ದಾರೆ. ಸ್ಥಳೀಯರಲ್ಲದೆ ಪ್ರವಾಸಿಗರು & ಇತರೆ ಮಂದಿ ತೆರಳದಂತೆ ಸೇತುವೆಯ ಪ್ರವೇಶದ್ವಾರಕ್ಕೆ ತಾತ್ಕಾಲಿಕ ಬೀಗ ಜಡಿದಿದ್ದಾರೆ. ಈ ಸಂದರ್ಭ ಕಂದಾಯ ಅಧಿಕಾರಿ ಸಂತೋಷ್ ಕುಮಾರ್ ಇದ್ದರು.



