KMA: ಕನ್ನಡದಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

Share this post :

coorg buzz

ಪೊನ್ನಂಪೇಟೆ: ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ವತಿಯಿಂದ ಕೊಡವ ಮುಸ್ಲಿಂ ಶಿಕ್ಷಣ ನಿಧಿಯ ಸಹಯೋಗದಲ್ಲಿ ಪ್ರಾಯೋಜಕರ ನೆರವಿನಿಂದ ನೀಡಲಾಗುವ ಈ ಸಾಲಿನ ಕೆ.ಎಂ.ಎ. ವಿಶೇಷ ಪ್ರತಿಭಾ ಪುರಸ್ಕಾರಕ್ಕೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 2024-25ನೇ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್. ಸಿ. ಪರೀಕ್ಷೆಯ ‘ಕನ್ನಡ ವಿಷಯ’ದಲ್ಲಿ ಇಡೀ ಕೊಡಗು ಜಿಲ್ಲೆಗೆ ಅತೀ ಹೆಚ್ಚು ಅಂಕ ಪಡೆದ “ಜಿಲ್ಲೆಯ ಸರಕಾರಿ ಶಾಲೆಯ” ಇಬ್ಬರು ವಿದ್ಯಾರ್ಥಿಗಳಿಗೆ ಕೆ.ಎಂ.ಎ. ಅಧ್ಯಕ್ಷರಾದ ದುದ್ದಿಯಂಡ ಹೆಚ್. ಸೂಫಿ ಹಾಜಿಯವರು ತಮ್ಮ ದಿವಂಗತ ತಂದೆ ದುದ್ದಿಯಂಡ ಹುಸೈನಾರ್ ಹಾಜಿ ಮತ್ತು ದಿವಂಗತ ತಾಯಿ ಆಮೀನರವರ ಸ್ಮರಣಾರ್ಥವಾಗಿ ಪ್ರಸಕ್ತ ವರ್ಷದಿಂದ ನೂತನವಾಗಿ ಪ್ರಾಯೋಜಿಸಿರುವ ‘ಕೆ.ಎಂ.ಎ. ವಿಶೇಷ ಪ್ರತಿಭಾ ಪುರಸ್ಕಾರ’ಕ್ಕೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಜೊತೆಗೆ, 2024-25ನೇ ಶೈಕ್ಷಣಿಕ ಸಾಲಿನ ಎಸ್. ಎಸ್. ಎಲ್. ಸಿ. ಮತ್ತು ಪಿಯುಸಿ ಪರೀಕ್ಷೆಯಲ್ಲಿ ಕೊಡಗು ಜಿಲ್ಲೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದು ತೇರ್ಗಡೆ ಹೊಂದಿರುವ ತಲಾ ಇಬ್ಬರು (ಒಬ್ಬ ವಿದ್ಯಾರ್ಥಿ ಮತ್ತು ಒಬ್ಬ ವಿದ್ಯಾರ್ಥಿನಿ) ‘ಮುಸ್ಲಿಂ ವಿದ್ಯಾರ್ಥಿಗಳಿಗೆ’ (ಯಾವುದೇ ಪಂಗಡದ) ಮೀನಕ್ಕೆರ ಎ. ಮಹಮ್ಮದ್ ಅವರ ಪ್ರಾಯೋಜಕತ್ವದಲ್ಲಿ ನೀಡಲಾಗುವ ‘ಕೆ.ಎಂ.ಎ. ವಿಶೇಷ ಪ್ರತಿಭಾ ಪುರಸ್ಕಾರ’ಕ್ಕೆ ಪ್ರತ್ಯೇಕವಾಗಿ ಅರ್ಜಿ ಆಹ್ವಾನಿಸಲಾಗಿದೆ.

2024-25 ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿ ಇಡೀ ಕೊಡಗು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ತಲಾ ಓರ್ವ ವಿದ್ಯಾರ್ಥಿಗೆ ಕೆ. ಎಂ. ಎ. ಉಪಾಧ್ಯಕ್ಷರಾದ ಅಕ್ಕಳತಂಡ ಎಸ್. ಮೊಯ್ದು ಅವರು ತಮ್ಮ ದಿವಂಗತ ಸಹೋದರ ಅಕ್ಕಳತಂಡ ಎಸ್. ಹಂಸ ಅವರ ಸ್ಮರಣಾರ್ಥವಾಗಿ ಪ್ರಾಯೋಜಿಸಿರುವ ‘ಕೆ. ಎಂ.ಎ. ವಿಶೇಷ ಪ್ರತಿಭಾ ಪುರಸ್ಕಾರ’ ನೀಡಲಾಗುವುದು. ಈ ಕುರಿತ ವಿದ್ಯಾರ್ಥಿಗಳ ಮಾಹಿತಿಯನ್ನು ಸಂಬಂಧಿಸಿದ ಇಲಾಖೆಯಿಂದ ಅಧಿಕೃತವಾಗಿ ಪಡೆಯಲಾಗುವುದು.

ಅರ್ಹ ವಿದ್ಯಾರ್ಥಿಗಳು ಶಾಲಾ ಮುಖ್ಯೋಪಾಧ್ಯಾಯರಿಂದ/ ಕಾಲೇಜಿನ ಪ್ರಾಂಶುಪಾಲರಿಂದ ‘ದೃಢೀಕೃತಗೊಂಡ ಅಂಕಪಟ್ಟಿ’, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಪ್ರತಿ ಸೇರಿದಂತೆ ತಮ್ಮ ಪೂರ್ಣ ವಿವರ, ದೂರವಾಣಿ ಸಂಖ್ಯೆ ಹಾಗು ಇತ್ತೀಚಿನ 3 ಭಾವಚಿತ್ರದೊಂದಿಗೆ ಅರ್ಜಿ ಸಲ್ಲಿಸಲು ದಿನಾಂಕ 14-08-2025ರಂದು ಕೊನೆಯ ದಿನವಾಗಿರುತ್ತದೆ.

ಈ ಮೇಲಿನ ವಿಶೇಷ ಪ್ರತಿಭಾ ಪುರಸ್ಕಾರಕ್ಕಾಗಿ ಅರ್ಹ ವಿದ್ಯಾರ್ಥಿಗಳು, ಅಧ್ಯಕ್ಷರು, ಕೊಡವ ಮುಸ್ಲಿಂ ಅಸೋಸಿಯೇಷನ್ (ರಿ.), ಪ್ರಧಾನ ಕಚೇರಿ, ಡಿ.ಹೆಚ್.ಎಸ್. ಕಟ್ಟಡ, ಮುಖ್ಯ ರಸ್ತೆ, ವಿರಾಜಪೇಟೆ, ಕೊಡಗು ಜಿಲ್ಲೆ, ಪಿನ್ ಕೋಡ್: 571218. ಎಂಬ ವಿಳಾಸಕ್ಕೆ ಅರ್ಜಿಗಳನ್ನು ಸಲ್ಲಿಸಬೇಕಾಗಿದೆ.
ವಿದ್ಯಾರ್ಥಿಗಳು ಸೂಚಿತ ಎಲ್ಲಾ ಎಲ್ಲಾ ದಾಖಲೆಗಳೊಂದಿಗೆ ಕೆ.ಎಂ.ಎ.ಗೆ ಸಲ್ಲಿಕೆಯಾಗುವ ಅರ್ಜಿಗಳನ್ನು ಮಾತ್ರ ವಿಶೇಷ ಪ್ರತಿಭಾ ಪುರಸ್ಕಾರಕ್ಕೆ ಪರಿಗಣಿಸಲಾಗುವುದು. ದೃಢೀಕೃತ ಅಂಕಪಟ್ಟಿಗಳೊಂದಿಗೆ ಸಲ್ಲಿಕೆಯಾದ ಅರ್ಜಿಗಳನ್ನು ಪರಿಶೀಲಿಸಿ, ಪಡೆದ ಗರಿಷ್ಠ ಅಂಕಗಳ ಆಧಾರದಲ್ಲಿ ವಿದ್ಯಾರ್ಥಿಗಳನ್ನು ಆಯಾ ವಿಭಾಗದ ವಿಶೇಷ ಪ್ರತಿಭಾ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗುವುದು.

ಅರ್ಹ ವಿದ್ಯಾರ್ಥಿಗಳು ಕೊಡಗು ಜಿಲ್ಲೆಯ ಯಾವುದೇ ಭಾಗಗಳಿಂದಾದರೂ ತಮ್ಮ ಅರ್ಜಿಗಳನ್ನು ಕಳಿಸಬಹುದಾಗಿದೆ. ಆದರೆ, ಕಡ್ಡಾಯವಾಗಿ ಕೊಡಗು ಜಿಲ್ಲೆಯಲ್ಲಿರುವ ವಿದ್ಯಾಸಂಸ್ಥೆಗಳಲ್ಲಿ ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಳು ಮಾತ್ರ ಈ ವಿಶೇಷ ಪುರಸ್ಕಾರಕ್ಕೆ ಅರ್ಹರಾಗಿರುತ್ತಾರೆ. ಆಯ್ಕೆಗೊಂಡ ವಿದ್ಯಾರ್ಥಿಗಳಿಗೆ ವಾಟ್ಸಪ್ ಮೂಲಕ ಮಾಹಿತಿ ನೀಡಲಾಗುವುದು. ಅದಕ್ಕಾಗಿ ಅರ್ಜಿಯಲ್ಲಿ ವಾಟ್ಸಪ್ ಸಂಖ್ಯೆ ನಮೂದಿಸಬೇಕಾಗಿರುವುದು ಕಡ್ಡಾಯವಾಗಿರುತ್ತದೆ.ಆಯ್ಕೆಗೊಂಡ ವಿದ್ಯಾರ್ಥಿಗಳು ಮುಂದಿನ ಅಕ್ಟೋಬರ್ 12ರಂದು ವಿರಾಜಪೇಟೆಯಲ್ಲಿ ನಡೆಯುವ ಸಮಾರಂಭದಲ್ಲಿ ಕಡ್ಡಾಯವಾಗಿ ಭಾಗವಹಿಸಿ ವಿಶೇಷ ಪುರಸ್ಕಾರಗಳನ್ನು ಪಡೆದುಕೊಳ್ಳಬೇಕು.

ವಿಶೇಷ ಪ್ರತಿಭಾ ಪುರಸ್ಕಾರಕ್ಕೆ ಆಯ್ಕೆಗೊಂಡ ವಿದ್ಯಾರ್ಥಿಗಳು ಅಂದಿನ ಸಮಾರಂಭಕ್ಕೆ ಗೈರುಹಾಜರಾದಲ್ಲಿ ಅವರ ಪರವಾಗಿ ಪುರಸ್ಕಾರ ಸ್ವೀಕರಿಸಲು ಬೇರೆಯವರಿಗೆ ಅವಕಾಶ ಇರುವುದಿಲ್ಲ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 9886060342(ಪ್ರಧಾನ ಕಾರ್ಯದರ್ಶಿ) ಅನ್ನು ಸಂಪರ್ಕಿಸಬಹುದಾಗಿದೆ ಎಂದು ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ಅಧ್ಯಕ್ಷರಾದ ದುದ್ದಿಯಂಡ ಹೆಚ್. ಸೂಫಿ ಹಾಜಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.