ಮಂತರ್ ಗೌಡ ಮತ್ತು ಪೊನ್ನಣ್ಣರಿಗೆ ಉತ್ತಮ ರಾಜಕೀಯ ಭವಿಷ್ಯ ಇದೆ – ಎ.ಎಸ್.ಪಿ ಫೈರ್ ಬ್ರಾಂಡ್ ಆಗ್ತಾರೆ : ಸಿ.ಎಂ ಸಿದ್ದರಾಮಯ್ಯ ಭವಿಷ್ಯ

Share this post :

ಬೆಂಗಳೂರು : ವೀರಾಜಪೇಟೆ ಶಾಸಕ ಎ.ಎಸ್.‌  ಪೊನ್ನಣ್ಣ ಹಾಗೂ ಮಡಿಕೇರಿ ಶಾಸಕ ಡಾ. ಮಂತರ್‌ ಗೌಡ ಅವರಿಗೆ ರಾಜಕೀಯದಲ್ಲಿ ಉತ್ತಮ‌ ಭವಿಷ್ಯವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.

ವಸಂತನಗರದ ಕೊಡವ ಸಭಾಂಗಣದಲ್ಲಿ ಕೊಡವ ಸಮಾಜದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಪೊನ್ನಣ್ಣ ಕೊಡವ ಸಮಾಜದ ಆಸ್ತಿ ಆಗಿದ್ದಾರೆ. ಮುಂದೆ ರಾಜ್ಯದ ಆಸ್ತಿ ಆಗ್ತಾರೆ ಎಂದ ಅವರು, ಕೊಡವ ಸಮಾಜ ಸಂಖ್ಯೆಯಲ್ಲಿ ಅಲ್ಪಸಂಖ್ಯಾತರಾದರೂ ದೇಶ ಸೇವೆಯಲ್ಲಿ ಇವರಿಗೆ ಸರಿಸಮಾನವಾದವರು ಬೇರೆ ಇಲ್ಲ. ಸಂಸ್ಕೃತಿ, ಶಿಸ್ತಿನಲ್ಲಿ ಕೊಡವರು ಮುಂಚೂಣಿಯಲ್ಲಿದ್ದಾರೆ. ಸೈನ್ಯಕ್ಕೆ, ದೇಶ ರಕ್ಷಣೆಗೆ, ಕ್ರೀಡೆಗೆ, ರಾಜಕಾರಣಕ್ಕೆ ಕೊಡವರ ಕೊಡವರ ಕೊಡುಗೆ ಅಪಾರ ಎಂದು ಮೆಚ್ಚುಗೆ ಸೂಚಿಸಿದರು.

ಎ.ಕೆ.ಸುಬ್ಬಯ್ಯ ಮತ್ತು ಎಂ.ಸಿ.ನಾಣಯ್ಯ ಉತ್ತಮ ಸಂಸದೀಯ ಪಟುಗಳು. ಇವರು ಸದನದಲ್ಲಿ ಸಮಾಜಮುಖಿಯಾಗಿ ಮಾತನಾಡಿದ ಫೈರ್ ಬ್ರಾಂಡ್ ಗಳು. ಪೊನ್ನಣ್ಣ ಅವರಿಗೂ ಫೈರ್ ಬ್ರಾಂಡ್ ಆಗುವ ಎಲ್ಲಾ ಲಕ್ಷಣಗಳೂ ಇವೆ ಎಂದರು.

ಯಾವುದೇ ಸಮುದಾಯಗಳು ಜಾಗ ಕೇಳಿದರೂ ಗೈಡೆನ್ಸ್ ಬೆಲೆಯಲ್ಲಿ ಶೇ10 ರಷ್ಟು ಬೆಲೆಗೆ ಕೊಡಬೇಕು ಎಂದು ಕಂದಾಯ ಸಚಿವರಿಗೆ ಸೂಚಿಸಿದ್ದೇನೆ. ಅದರಂತೆ ಕೊಡವ ಸಮಾಜಕ್ಕೂ ನೀಡಿದ್ದೇವೆ ಎಂದರು.

ನಾವೆಲ್ಲರೂ ಭಾರತೀಯರು ಮತ್ತು ಕನ್ನಡಿಗರು. ದೇಶ ರಕ್ಷಣೆಯಲ್ಲಿ ಮುಂಚೂಣಿಯಲ್ಲಿರುವ ಕೊಡವರು ಜಾತಿ-ಧರ್ಮ ಮಾಡುವವರಲ್ಲ. ಎಲ್ಲರನ್ನೂ ಭಾರತೀಯರು ಎಂದು ಗೌರವಿಸುವವರು ಎಂದರು.

ಕಾಂಗ್ರೆಸ್ ಪಕ್ಷದ ಸಂಸ್ಕೃತಿ ಕೂಡ ಸರ್ವರಿಗೂ ಸಮಾನವಾಗಿ ಕಾಣುವುದಾಗಿದೆ. ಎಲ್ಲಾ ಜಾತಿ, ಎಲ್ಲಾ ಧರ್ಮದವರನ್ನೂ ಭಾರತೀಯರು, ಭಾರತೀಯ ಪ್ರಜೆಗಳು ಎಂದು ಕಾಂಗ್ರೆಸ್ ಪರಿಗಣಿಸುತ್ತದೆ ಎಂದರು.

ಜಾತಿ ಇರಲಿ, ಧರ್ಮ‌ ಇರಲಿ ಅದೆಲ್ಲಾ ಮನೆಯೊಳಗೆ ಆಚರಣೆಯಾಗಲಿ. ಹೊರಗೆ ಬಂದ ಕೂಡಲೇ ನಾವೆಲ್ಲರೂ ಒಂದೇ, ನಾವು ಭಾರತೀಯರಾಗಬೇಕು ಎಂದು ಕರೆ ನೀಡಿದರು.

ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಹೆಸರನ್ನು ಮೆಟ್ರೋ ನಿಲ್ದಾಣಕ್ಕೆ ಇಡುವ ಸಂಬಂಧ ಕ್ಯಾಬಿನೆಟ್ ನಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಭರವಸೆ ನೀಡಿದರು.

ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿಚರಾದ ಕೆ.ಜೆ.ಜಾರ್ಜ್, ಬೈರತಿ ಸುರೇಶ್, ಕೃಷ್ಣಬೈರೇಗೌಡ ಹಾಗೂ ಶಾಸಕರೂ ಮತ್ತು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಪೊನ್ನಣ್ಣ ಹಾಗೂ ಶಾಸಕ ಮಂಥರ್ ಗೌಡ ಅವರು ಉಪಸ್ಥಿತರಿದ್ದರು.

coorg buzz
coorg buzz