ಪೊನ್ನಂಪೇಟೆ: ಕೊಡವ ಮುಸ್ಲಿಂ ಸ್ಪೋರ್ಟ್ಸ್ ಅಕಾಡೆಮಿ (ಕೆ.ಎಂ.ಎಸ್.ಎ.) ವತಿಯಿಂದ ವಿರಾಜಪೇಟೆ ಸಮೀಪದ ಕಂಡಂಗಾಲದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಕುರ್ಚಿಗಳನ್ನು ಕೊಡುಗೆಯಾಗಿ ನೀಡಲಾಯಿತು. ಶುಕ್ರವಾರ ಶಾಲೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಕೆ.ಎಂ.ಎಸ್.ಎ. ಅಧ್ಯಕ್ಷರಾದ ಆಲೀರ ರಶೀದ್ ಅವರು ಕುರ್ಚಿಗಳನ್ನು ಶಾಲಾ ಮುಖ್ಯ ಶಿಕ್ಷಕರಾದ ಪವೀನ ಅವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಆಲೀರ ರಶೀದ್, ಹಿಂದೆ ಗ್ರಾಮೀಣ ಪ್ರದೇಶದ ಜನರ ಶೈಕ್ಷಣಿಕ ಪ್ರಗತಿಯಲ್ಲಿ ಸರ್ಕಾರಿ ಶಾಲೆಗಳ ಕೊಡುಗೆ ಅಪಾರವಾಗಿದೆ. ಇಂದಿಗೂ ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಹೆಚ್ಚು ಅನುಕೂಲಕರ ವಾತಾವರಣ ಸೃಷ್ಟಿಸಿರುವ ಸರಕಾರಿ ಶಾಲೆಗಳು ಜಿಲ್ಲೆಯ ಪ್ರತಿ ಗ್ರಾಮಗಳ ಹೆಗ್ಗುರುತಾಗಿ ಕಂಡುಬರುತ್ತದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜವಾಬ್ದಾರಿ ಎಂದು ಪರಿಗಣಿಸಿ ಸರ್ಕಾರಿ ಶಾಲೆಗಳ ಅಸ್ತಿತ್ವವನ್ನು ಉಳಿಸಲು ಸರಕಾರೇತರ ಸಂಘ ಸಂಸ್ಥೆಗಳು ಒತ್ತು ನೀಡುವಂತಾಗಬೇಕು. ಸರಕಾರಿ ಶಾಲೆಗಳಿಗೆ ನೀಡುವ ಯಾವುದೇ ರೂಪದ ಕೊಡುಗೆ ಅಮೂಲ್ಯವಾದದ್ದು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಶಾಲೆಯ ಸಹ ಶಿಕ್ಷಕರಾದ ಲಕ್ಷ್ಮಿ, ಶಿಕ್ಷಕರಾದ ಶರಣ್ಯ, ಪೂರ್ಣಿಮಾ, ವಿದ್ಯಾರ್ಥಿಗಳು ಸೇರಿದಂತೆ ಕೆ.ಎಂ.ಎಸ್.ಎ. ಪದಾಧಿಕಾರಿಗಳು ಹಾಜರಿದ್ದರು.



