ಮಡಿಕೇರಿ : ಜಿಲ್ಲೆಯ ವಿವಿಧೆಡೆ ಗುಂಡಿಬಿದ್ದ ರಸ್ತೆಗಳಿಗೆ ತೇಪೆ ಹಾಕಿ ಮುಚ್ಚುವ ಕಾಮಗಾರಿ ನಡೆಯುತ್ತಿದ್ದು, ಹಲವು ಕಡೆಗಳಲ್ಲಿ ಇದು ಕಾಟಾಚಾರಕ್ಕೆ ಎಂಬಂತಾಗಿದೆ. ಇದಕ್ಕೆ ಸಾಕ್ಷಿ ಮಡಿಕೇರಿಯಿಂದ ಕತ್ತಲೆಕಾಡುವರೆಗೆ ನಡೆದಿರುವ ರಸ್ತೆ ಗುಂಡಿ ಮುಚ್ಚುವ ಕಾಮಗಾರಿ.
ಎರಡು ವಾರದ ಹಿಂದೆ ಈ ಮಾರ್ಗದಲ್ಲಿ ಕಾಮಗಾರಿ ನಡೆದಿದ್ದು, 15 ದಿನ ಕಳೆಯುವಷ್ಟರಲ್ಲೇ ತೇಪೆ ಹಾಕಲಾಗಿದ್ದ ಡಾಂಬರು ಕಿತ್ತು ಹೋಗಿದೆ. ಜಲ್ಲಿಕಲ್ಲುಗಳೆಲ್ಲ ರಸ್ತೆ ಬದಿಯಲ್ಲಿ ಸಂಗ್ರಹವಾಗಿದ್ದು, ಮೊದಲಿದ್ದಂತೆ ಗುಂಡಿಗಳು ಮತ್ತೆ ನಿರ್ಮಾಣವಾಗಿದೆ. ತೀರಾ ಹದಗೆಟ್ಟಿದ್ದ ರಸ್ತೆಯಲ್ಲಿ ಅಲ್ಲಲ್ಲಿ ಕೆಲವು ಗುಂಡಿಗಳನ್ನು ಮುಚ್ಚಿ ನಾವು ಕೆಲಸ ಮಾಡಿದ್ದೇವೆಂದು ತೋರಿಸುವುದಕ್ಕಾಗಿ ಕಾಮಗಾರಿ ಮಾಡಿದಂತಿದೆ. ಈ ಕಾಮಗಾರಿಯಿಂದ ಸಮಸ್ಯೆಗೆ ಪರಿಹಾರ ಸಿಗುವುದಕ್ಕಿಂತ ಸಮಸ್ಯೆ ಮತ್ತಷ್ಟು ಹೆಚ್ಚಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.
ವಾಹನ ಸವಾರರು ಮೊದಲು ಗುಂಡಿಗಳನ್ನು ತಪ್ಪಿಸಿಕೊಂಡು ವಾಹನ ಚಲಾವಣೆ ಮಾಡಬೇಕಿತ್ತು. ಈಗ ಮುಚ್ಚಿರುವ ಗುಂಡಿಯಲ್ಲಿ ಕೆಲವು ಕಡೆ ಎತ್ತರವಾಗಿ ಡಾಂಬಾರು ಹಾಕಿರುವ ಪರಿಣಾಮ ಅವುಗಳನ್ನು ತಪ್ಪಿಸಿಕೊಂಡು ಹೋಗುವಂತಾಗಿದೆ. ಜೊತೆಗೆ ಅನೇಕ ಕಡೆಗಳಲ್ಲಿ ಗುಂಡಿಗಳು ಹಾಗೇ ಇದ್ದು, ಅವುಗಳನ್ನು ಮುಚ್ಚುವ ಗೋಜಿಗೆ ಗುತ್ತಿಗೆದಾರ ಹೋಗಿಲ್ಲ. ಕಾಮಗಾರಿ ನಡೆದ ಸಂದರ್ಭ ಶಾಸಕರಿಗೆ ಈ ಬಗ್ಗೆ ತಿಳಿಸಿದಾಗ ಪಿಡಬ್ಲ್ಯೂಡಿ ಅಧಿಕಾರಿಗಳು ಒಮ್ಮೆ ಮಾತ್ರ ಬಂದು ನೋಡಿ ಹೋಗಿದ್ದಾರೆ. ಆದರೆ ಪ್ರಯೋಜನವೇನೂ ಆಗಿಲ್ಲ. ಗುತ್ತಿಗೆದಾರ ಕೂಡಾ ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆಂದು ಕಡಗದಾಳು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಾದೇಟಿರ ತಿಮ್ಮಯ್ಯ ಆರೋಪಿಸಿದರು.
ಕೆಲವು ಕಡೆ ಗ್ರಾಮಸ್ಥರೇ ಖುದ್ದಾಗಿ ನಿಂತು ಕಾಮಗಾರಿ ಮಾಡಿಸಿದ್ದಾರೆ. ಉಳಿದ ಕಡೆಗಳಲ್ಲಿ ಮನಸ್ಸಿಗೆ ತೋಚಿದಂತೆ ಕೆಲಸ ಮಾಡಲಾಗಿದೆ. ದೊಡ್ಡ ದೊಡ್ಡ ಗುಂಡಿಗಳನ್ನೇ ಮುಚ್ಚದೆ ಬಿಡಲಾಗಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಯಾರೂ ಕೂಡಾ ಯಾರೂ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಈ ಮಾರ್ಗದಲ್ಲಿ ಸಂಚರಿಸುವ ದ್ವಿಚಕ್ರ ವಾಹನ ಸವಾರರ ಪಾಡು ಹೇಳ ತೀರದಾಗಿದೆ. ಗುಂಡಿಮಯ ರಸ್ತೆಯಲ್ಲಿ ಸಂಚರಿಸಿ ಅದೆಷ್ಟೋ ವಾಹನಗಳು ದುರಸ್ಥಿಗೀಡಾದ ನಿದರ್ಶನವೂ ಇದೆ. ಸಿದ್ದಾಪುರ-ಮಡಿಕೇರಿ ಸಂಪರ್ಕದ ಪ್ರಮುಖ ರಸ್ತೆ ಇದಾಗಿದ್ದು, ಪ್ರತಿನಿತ್ಯದ ಅನುಕೂಲಕ್ಕಾಗಿ ಈ ರಸ್ತೆಯನ್ನು ಅವಲಂಬಿಸಿದ್ದಾರೆ ಎಂದರು.
ಕಡಗದಾಳು ಗ್ರಾಮ ಪಂಚಾಯಿತಿ ಸದಸ್ಯ ಆನಂದ ಮಾತನಾಡಿ, ಕಾಮಗಾರಿಯನ್ನು ಅರ್ಧಂಬರ್ಧ ಮಾಡಿ ಹೋಗಿದ್ದಾರೆ. ಕಾಮಗಾರಿ ಕಳಪೆಯಾಗಿದ್ದು, ಜನರಿಗೆ ಬಹಳ ಸಮಸ್ಯೆಯಾಗಿದೆ. ದ್ವಿಚಕ್ರ ವಾಹನ ಸಂಚಾರಕ್ಕೆ ತುಂಬಾ ತೊಡಕಾಗಿದೆ. ಏನಾದರು ಅನಾಹುತವಾದರೆ ಯಾರು ಹೊಣೆ? ಗುತ್ತಿಗೆದಾರನನ್ನು ಕೇಳಿದರೆ 600 ಗುಂಡಿ ಮುಚ್ಚಿದ್ದೇವೆ ಅಂತ ಹೇಳುತ್ತಾರೆ. ಸಾವಿರಕ್ಕೂ ಅಧಿಕ ಗುಂಡಿಗಳು ಈ ರಸ್ತೆಯಲ್ಲಿದೆ. ರಸ್ತೆ ಕಾಮಗಾರಿಗಾಗಿ ಆಗ್ರಹಿಸಿ ಜನವರಿ 02ರಂದು ನಾವು ಪ್ರತಿಭಟನೆಯಲ್ಲಿ ಭಾಗಿಯಾಗುತ್ತೇವೆ ಎಂದು ಹೇಳಿದರು.
ಕತ್ತಲೆಕಾಡು ನಿವಾಸಿ ಹೊನ್ನಪ್ಪ ಆಚಾರ್ಯ ಮಾತನಾಡಿ, ಮರಗೋಡಿನಿಂದ ನೀರುಕೊಲ್ಲಿವರೆಗೆ ರಸ್ತೆ ತೀರಾ ಹದಗೆಟ್ಟಿದೆ. ವಾಹನಗಳ ಸಂಚಾರಕ್ಕೆ ಬಹಳ ಸಮಸ್ಯೆಯಾಗುತ್ತಿದೆ. ಅಧಿಕಾರಿಗಳು ಈ ಬಗ್ಗೆ ಕಾಳಜಿ ವಹಿಸಿ, ಪ್ರತಿಭಟನೆಗೂ ಮುನ್ನ ವೈಜ್ಞಾನಿಕ ರೀತಿಯಲ್ಲಿ ರಸ್ತೆ ದುರಸ್ತಿಗೆ ಮುಂದಾಬೇಕು ಎಂದು ಆಗ್ರಹಿಸಿದರು.
ಜನವರಿ 02ಕ್ಕೆ ಪ್ರತಿಭಟನೆ
ರಸ್ತೆ ಅವ್ಯವಸ್ಥೆ, ಅವೈಜ್ಞಾನಿಕ ಕಾಮಗಾರಿ ವಿರುದ್ಧ ಗ್ರಾಮಸ್ಥರು ಪ್ರತಿಭಟನೆಗೆ ಮುಂದಾಗಿದ್ದಾರೆ. ಜನವರಿ 01ರವರೆಗೆ ಜಿಲ್ಲಾಡಳಿತಕ್ಕೆ ಗಡುವು ನೀಡಲಾಗಿದ್ದು, ಅದರೊಳಗೆ ಗ್ರಾಮದಲ್ಲಿನ ದುಸ್ಥಿತಿಯಲ್ಲಿರುವ ರಸ್ತೆಗೆ ಕಾಯಕಲ್ಪ ನೀಡಬೇಕು. ಅದರೊಳಗೆ ವ್ಯವಸ್ಥಿತ ಕಾಮಗಾರಿ ಆಗದಿದ್ದಲ್ಲಿ ಜ.02ರಂದು ಗ್ರಾಮಸ್ಥರ ಸಮ್ಮುಖದಲ್ಲಿ ದಿನಪೂರ್ತಿ ಈ ರಸ್ತೆಯಲ್ಲಿ ವಾಹನ ಸಂಚಾರ ತಡೆದು ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ. ನಮ್ಮ ಪ್ರತಿಭಟನೆ ಯಾರ ವಿರುದ್ಧವೂ ಅಲ್ಲ. ನಮ್ಮ ನ್ಯಾಯುತ ಬೇಡಿಕೆ, ಹಕ್ಕನ್ನು ಮುಂದಿಟ್ಟುಕೊಂಡು ಹೋರಾಟಕ್ಕೆ ಮುಂದಾಗುತ್ತೇವೆಂದು ಮಾದೇಟಿರ ತಿಮ್ಮಯ್ಯ ಎಚ್ಚರಿಸಿದ್ದಾರೆ.





